ಕಾಡಂಚಲ್ಲಿ ಮದ್ಯಪಾನ; ಪ್ರಾಣಿಗಳ ಜೀವಕ್ಕೆ ಕುತ್ತು

ಗುರುವಾರ , ಜೂಲೈ 18, 2019
23 °C
ಕಾರ್ಕಳದ ರೆಂಜಾಳ ಅರಣ್ಯದ ಬಳಿ ನೂರಾರು ಮದ್ಯದ ಬಾಟಲಿ ಪತ್ತೆ

ಕಾಡಂಚಲ್ಲಿ ಮದ್ಯಪಾನ; ಪ್ರಾಣಿಗಳ ಜೀವಕ್ಕೆ ಕುತ್ತು

Published:
Updated:
Prajavani

ಉಡುಪಿ: ಪಶ್ಚಿಮಘಟ್ಟದ ಶೋಲಾ ಅರಣ್ಯ ವ್ಯಾಪ್ತಿಯಲ್ಲಿ ಕುಡುಕರ ಹಾವಳಿ ಮಿತಿಮೀರಿದ್ದು, ಕಾಡಂಚಿನ ರಸ್ತೆಯ ಬದಿಯಲ್ಲಿ ಸಾವಿರಾರು ಮದ್ಯದ ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಬಾಟಲಿ ಗಾಜುಗಳು ಪ್ರಾಣಿಗಳ ಕಾಲಿಗೆ ಚುಚ್ಚಿ, ಪ್ರಾಣಕ್ಕೆ ಸಂಚಕಾರವಾಗುವ ಅಪಾಯವಿದೆ ಎಂದು ಪರಿಸರ ಪ್ರೇಮಿಗಳು ಕಳವಳ ವ್ಯಕ್ತಪಡಿಸಿದ್ದಾರೆ.

ಕಾರ್ಕಳ ತಾಲ್ಲೂಕಿನ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದಲ್ಲಿ ಜಿಂಕೆ, ಕಡವೆ, ಕಾಡುಕೋಣಗಳು ಹೆಚ್ಚಾಗಿದ್ದು, ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳಿಂದ ಅವುಗಳ ಸಂಚಾರಕ್ಕೆ ತೊಂದರೆಯಾಗಿದೆ. ರಾತ್ರಿಯ ಹೊತ್ತು ರಸ್ತೆ ಬದಿಯಲ್ಲಿಯೇ ಮದ್ಯಸೇವಿಸುವ ಕುಡುಕರು ಬಾಟಲಿಗಳನ್ನು ಕಾಡಿನೊಳಗೆ ಎಸೆಯುತ್ತಿದ್ದಾರೆ. ಪರಿಣಾಮ ವನ್ಯಜೀವಿಗಳ ಜೀವಕ್ಕೆ ಕುತ್ತು ಎದುರಾಗಿದೆ ಎಂದು ಪ್ರಾಣಿಪ್ರಿಯರು ಆತಂಕ ಪಟ್ಟಿದ್ದಾರೆ.

ಕಾರ್ಕಳದ ರೆಂಜಾಲ ಸಮೀಪದ ಮೂಡುಬಿದರೆ ವ್ಯಾಪ್ತಿಗೊಳಪಡುವ ಮೀಸಲು ಅರಣ್ಯದಲ್ಲಿ ಈಚೆಗೆ ಎನ್‌ಇಸಿಎಫ್‌ ಸಂಘಟನೆಯ ಕಾರ್ಯಕರ್ತರು ಹಣ್ಣಿನ ಗಿಡಗಳನ್ನು ನೆಡಲು ತೆರಳಿದಾಗ ರಾಶಿ ಮದ್ಯದ ಬಾಟಲಿಗಳು ಸಿಕ್ಕಿವೆ. ಎಲ್ಲ ಬಾಟಲಿಗಳನ್ನು ಹೆಕ್ಕಿದ ಕಾರ್ಯಕರ್ತರು ಅವುಗಳನ್ನು ವಾಹನದಲ್ಲಿ ತುಂಬಿಕೊಂಡು ರೆಂಜಾಳ ಗ್ರಾಮ ಪಂಚಾಯ್ತಿ ಕಚೇರಿ ಎದುರು ಸುರಿದು ಆಕ್ರೋಶ ವ್ಯಕ್ತಪಡಿಸಿದರು.

ಅರಣ್ಯದೊಳಗೆ ಕುಡುಕರ ಪ್ರವೇಶವನ್ನು ತಡೆಯಬೇಕಾಗಿರುವುದು ಹಾಗೂ ರಸ್ತೆ ಬದಿಯಲ್ಲಿ ಬಾಟಲಿಗಳನ್ನು ಬಿಸಾಡದಂತೆ ನೋಡಿಕೊಳ್ಳಬೇಕಿರುವುದು ಅಧಿಕಾರಿಗಳ ಕರ್ತವ್ಯ. ಇಲಾಖೆಗಳು ಸರಿಯಾಗಿ ಕರ್ತವ್ಯ ನಿರ್ವಹಿಸಿದ ಪರಿಣಾಮ ವನ್ಯಜೀವಿಗಳಿಗೆ ತೊಂದರೆಯಾಗಿದೆ ಎಂದು ಎನ್‌ಇಸಿಎಫ್‌ ಸಂಘಟನೆಯ ರಾಜ್ಶ ಕಾರ್ಯದರ್ಶಿ ಎಚ್‌.ಶಶಿಧರ್ ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಣಿಗಳ ಕಾಲಿಗೆ ಗಾಜು ಹೊಕ್ಕಿ, ಗಾಯ ಉಲ್ಭಣಗೊಂಡು ಹಲವು ಪ್ರಾಣಿಗಳು ಸಾವನ್ನಪ್ಪುತ್ತಿವೆ. ಮನುಷ್ಯರ ತಪ್ಪಿಗೆ ಅಮಾಯಕ ಪ್ರಾಣಿಗಳು ಬಲಿಯಾಗುತ್ತಿವೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು. ಕಾಡಂಚಿನಲ್ಲಿ ಮದ್ಯ ಸೇವನೆ ಮಾಡಿದರೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ರೆಂಜಾಳ ಭಾಗವೊಂದರಲ್ಲೇ ಅಪಾರ ಪ್ರಮಾಣದ ಮದ್ಯದ ಬಾಟಲಿಗಳು ಸಿಕ್ಕಿವೆ. ಇಡೀ ಕಾಡಿನೊಳಗೆ ಎಷ್ಟಿರಬಹುದು ಎಂದು ಊಹಿಸಿದರೆ ಆತಂಕವಾಗುತ್ತದೆ. ಮನುಷ್ಯನ ಮೋಜಿಗೆ ಮುಗ್ಧ ಪ್ರಾಣಿಗಳು ಬಲಿಯಾಗುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !