ಭಾನುವಾರ, ಮೇ 22, 2022
26 °C
ಜಿಲ್ಲೆಯಾದ್ಯಂತ ವಿಶೇಷ ನೋಂದಣಿ ಅಭಿಯಾನ

ಯುವ ಜನತೆಗೆ ಮತದಾನದ ಹಕ್ಕು ಪಡೆಯಲು ಅವಕಾಶ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉಡುಪಿ: ಜನವರಿ 1, 2022ಕ್ಕೆ 18 ವರ್ಷ ತುಂಬಿದ ಯುವ ಮತದಾರರು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ಮಂಗಳವಾರ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 12,55,000 ಜನಸಂಖ್ಯೆಯಿದ್ದು 27,000 ಯುವ ಮತದಾರರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಯಾಗಲು ಅರ್ಹರಿದ್ದು, ಹೆಸರು ನೋಂದಾಯಿಸಿಕೊಳ್ಳಬಹುದು. ಜಿಲ್ಲೆಯ ಎಲ್ಲ ಕಾಲೇಜುಗಳ ಮೂಲಕ ಅಭಿಯಾನ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು.

18 ವರ್ಷ ತುಂಬಿದ ಯುವ ಮತದಾರರು ಮತದಾರರ ಪಟ್ಟಿಗೆ ಸೇರ್ಪಡೆಗೊಳಿಸಲು ಜಿಲ್ಲಾ ಸ್ವೀಪ್ ಸಮಿತಿಯಿಂದ ಕಾರ್ಯಕ್ರಮ ರೂಪಿಸಲಾಗಿದ್ದು, ಯುವಕ ಯುವತಿಯರು ವಾಸವಿರುವ ವಿಳಾಸದ ವ್ಯಾಪ್ತಿಯಲ್ಲಿರುವ ಬಿಎಲ್‌ಒಗಳನ್ನು ಭೇಟಿ ಮಾಡಿ ಅರ್ಜಿ ಸಲ್ಲಿಸಬಹುದು. ಅಥವಾ ಆನ್‌ಲೈನ್‌ ಪೋರ್ಟಲ್ www.nvsp.in ಹಾಗೂ ವೋಟರ್ ಹೆಲ್ಪ್‌ಲೈನ್ ಆ್ಯಪ್‌ ಮೂಲಕವೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಿಕೊಳ್ಳಬಹುದು. ತಿದ್ದುಪಡಿಗೂ ಸಹ ಅವಕಾಶವಿದ್ದು, ಸೌಲಭ್ಯದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ನ.8ರಂದು ಕರಡು ಮತದಾರರ ಪಟ್ಟಿ ಪ್ರಕಟಿಸಲಾಗಿದ್ದು, ಡಿ.8ರವರೆಗೆ ಕರಡು ಮತದಾರರ ಪಟ್ಟಿಗೆ ಆಕ್ಷೇಪಣೆ ಸಲ್ಲಿಸಬಹುದಾಗಿದೆ. ನ.14, 21 ಮತ್ತು 28ರಂದು ಜಿಲ್ಲೆಯಾದ್ಯಂತ ವಿಶೇಷ ನೊಂದಣಿ ಅಭಿಯಾನ ನಡೆಯುತ್ತಿದ್ದು, ಎಲ್ಲ ಬಿಎಲ್‌ಒಗಳು ಬೆಳಿಗ್ಗೆ 10 ರಿಂದ 5ರವರೆಗೆ ಮತಗಟ್ಟೆಯಲ್ಲಿ ಹಾಜರಿರುತ್ತಾರೆ. ಡಿ.27ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಹಾಗೂ ಜ.13ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದರು.‌

ಯಾವ ಅರ್ಜಿ ಸಲ್ಲಿಸಬೇಕು:

ನಮೂನೆ–6: ಹೊಸ ಮತದಾರರು ಹೆಸರು ನೋಂದಣಿಗೆ ನಮೂನೆ- 6ರ ಅರ್ಜಿ ಬಳಸಬೇಕು. ಒಂದು ವಿಧಾನಸಭಾ ಕ್ಷೇತ್ರದಿಂದ ಮತ್ತೊಂದು ವಿಧಾನಸಭಾ ಕ್ಷೇತ್ರಕ್ಕೆ ವಾಸಸ್ಥಳ ಬದಲಾಯಿಸುವವರು, ವಿದೇಶದಲ್ಲಿ ವಾಸಿಸುವವರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸಲು ನಮೂನೆ 6ರಡಿ ಅರ್ಜಿ ಸಲ್ಲಿಸಬೇಕು.

ನಮೂನೆ–6ಎ: ಅನಿವಾಸಿ ಭಾರತೀಯರು ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡಲು ನಮೂನೆ 6 ಎ ಬಳಸಬೇಕು. ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ನಮೂನೆ 7ರಲ್ಲಿ ಅರ್ಜಿ ಸಲ್ಲಿಸಬೇಕು. ಮತದಾರರ ಪಟ್ಟಿಯಲ್ಲಿ ತಂದೆಯ ಹೆಸರು, ಮನೆ ವಿಳಾಸ, ವಯಸ್ಸು ಹಾಗೂ ಭಾವಚಿತ್ರಕ್ಕೆ ಸಂಬಂಧಿಸಿದಂತೆ ದೋಷಗಳಿದ್ದರೆ ನಮೂನೆ–8 ರಲ್ಲಿ ಅರ್ಜಿ ಸಲ್ಲಿಸಬೇಕು.

ನಿರ್ಧಿಷ್ಟ ವಿಧಾನಸಭಾ ಕ್ಷೇತ್ರದೊಳಗೆ ವಾಸಸ್ಥಳ ಬದಲಾಯಿಸಬೇಕಾದರೆ ನಮೂನೆ–8ಎ ಅಡಿಯಲ್ಲಿ ಅರ್ಜಿ ಸಲ್ಲಿಸಬೇಕು. ಉಡುಪಿ, ಕಾಪು, ಕಾರ್ಕಳ, ಕುಂದಾಪುರ, ಬೈಂದೂರು, ಬ್ರಹ್ಮಾವರ, ಹೆಬ್ರಿ ತಾಲ್ಲೂಕು ಕಚೇರಿಗಳಿಗೆ ಭೇಟಿ ನೀಡಿ ಅರ್ಜಿಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ  ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಉಪಸ್ಥಿತರಿದ್ದರು.

ಜಿಲ್ಲೆಯಲ್ಲಿರುವ ಪುರುಷ ಮತದಾರರು: 4,92,400

ಮಹಿಳಾ ಮತದಾರರು: 5,28,777

ತೃತೀಯ ಲಿಂಗಿಗಳು–11

ಒಟ್ಟು ಮತದಾರರು– 10,21,188

ಸಹಾಯವಾಣಿ

–––

ಜಿಲ್ಲಾಧಿಕಾರಿ ಕಚೇರಿ: 0820–2574991, 2574925

ಕೆ.ರಾಜು, ಉಪ ವಿಭಾಗಾಧಿಕಾರಿ–08254–231984

ಶೋಭಾಲಕ್ಷ್ಮಿ ಬೈಂದೂರು ತಹಶೀಲ್ದಾರ್: 08254–251657

ಕಿರಣ್ ಜಿ.ಗೌರಯ್ಯ ಕುಂದಾಪುರ ತಹಶೀಲ್ದಾರ್: 08254–230357

ಪ್ರದೀಪ್ ಕುರ್ಡೆಕರ್ ಉಡುಪಿ ತಹಶೀಲ್ದಾರ್: 0820–2520417

ರಾಜಶೇಖರ ಮೂರ್ತಿ ಬ್ರಹ್ಮಾವರ ತಹಶೀಲ್ದಾರ್:0820–2560494

ಕೆ.ಪುರಂದರ ಕಾರ್ಕಳ ತಹಶೀಲ್ದಾರ್‌: 08258–230201

ಕಾಪು ತಹಶೀಲ್ದಾರ್ ಕಚೇರಿ: 0820–2551444

ಹೆಬ್ರಿ ತಹಶೀಲ್ದಾರ್ ಕಚೇರಿ:08253–250201

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು