ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ.25ರಿಂದ ಬಾರ್ಕೂರಿನಲ್ಲಿ ಆಳುಪೋತ್ಸವ

ತುಳುನಾಡಿನ ಶ್ರೀಮಂತ ಪರಂಪರೆ ಪರಿಚಯಿಸಲು ವಿಭಿನ್ನ ಕಾರ್ಯಕ್ರಮ
Last Updated 16 ಜನವರಿ 2019, 13:15 IST
ಅಕ್ಷರ ಗಾತ್ರ

ಉಡುಪಿ: ತುಳುನಾಡಿನ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಇತಿಹಾಸಿ ಪ್ರಸಿದ್ಧ ಬಾರ್ಕೂರಿನಲ್ಲಿ ಜ.25ರಿಂದ 27ರವರೆಗೆ ‘ಆಳುಪೋತ್ಸವ, ಹೆರಿಟೇಜ್‌ ವಾಕ್‌ ಹಾಗೂ ಜಾನಪದ ಜಾತ್ರೆ’ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್‌ ತಿಳಿಸಿದರು.

ಕಚೇರಿಯಲ್ಲಿ ಬುಧವಾರ ಆಳುಪೋತ್ಸವಆಹ್ವಾನ ಪತ್ರಿಕೆಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ಬಾರ್ಕೂರು ಅತ್ಯಂತ ಶ್ರೀಮಂತ ಸಾಂಸ್ಕೃತಿಕ ನಗರವಾಗಿದ್ದು, ಇಲ್ಲಿನ ದೇವಾಲಯಗಳು, ಬಸದಿ, ಮಠಗಳು, ಕೆರೆಗಳು ಪ್ರವಾಸೋದ್ಯಮಕ್ಕೆ ಪೂರಕವಾಗಿವೆ.

ಕ್ರಿ.ಪೂ ಮೂರನೇ ಶತಮಾನದಿಂದ ಕ್ರಿ.ಶ. 2ನೇ ಶತಮಾನದವರೆಗಿನ ಕಾಲಘಟ್ಟದ ಐತಿಹ್ಯಗಳು ಇನ್ನೂ ಉಳಿದುಕೊಂಡಿವೆ. ಇವುಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶದಿಂದ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕಾರ್ಯಕ್ರಮ ಹಮ್ಮಿಕೊಂಡಿದೆ. ಉದ್ಘಾಟನೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಹಾಗೂ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.

ಬಾರ್ಕೂರು ಅಳುಪ ಅರಸರ ರಾಜಧಾನಿಯಾಗಿತ್ತು. ಆರಂಭದಲ್ಲಿ ಚಿಕ್ಕ ಬಂದರಾಗಿ, ಬಳಿಕ ಹೊಯ್ಸಳ, ಕೆಳದಿ ಅರಸರ ಕಾಲದಲ್ಲಿ ಪ್ರಮುಖ ಆಡಳಿತ ಕೇಂದ್ರವಾಗಿತ್ತು. ವಿಜಯ ನಗರ ಅರಸರ ಕಾಲದಲ್ಲಿ ವಾಣಿಜ್ಯ ಕೇಂದ್ರವಾಗಿ ಗುರುತಿಸಿಕೊಂಡಿತ್ತು. ಬಾರ್ಕೂರಿನಿಂದ ವಿದೇಶಕ್ಕೆ ಕರಿಮೆಣಸು ರಫ್ತಾಗುತ್ತಿತ್ತು.

ಕೆಳದಿ ಹಾಗೂ ಅಳುಪ ಅರಸರ ಅವಧಿಯಲ್ಲಿ ಪ್ರಮುಖ ಧಾರ್ಮಿಕ ಕೇಂದ್ರವಾಗಿ ಬದಲಾಯಿತು. ಬಾರ್ಕೂರಿನಲ್ಲಿ 30ಕ್ಕೂ ಹೆಚ್ಚು ಮಠಗಳು ಇವೆ. 10 ಕೇರಿಗಳಲ್ಲಿ ನಾರಾಯಣ ದೇವಸ್ಥಾನಗಳು ಇವೆ. ಇಂತಹ ವಿಶಿಷ್ಟ ಪರಂಪರೆಯುಳ್ಳ ಸ್ಥಳವನ್ನು ಪರಿಚಯಿಸಲು ಆಳುಪೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ಜ.25ರಂದು ಸಂಜೆ 4.30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದ್ದು, ಹೆರಿಟೇಜ್‌ ವಾಕ್ ಉದ್ಘಾಟನೆ, ಹೆರಿಟೇಜ್ ಆಂಡ್ರಾಯ್ಡ್‌ ಆ್ಯಪ್‌ ಬಿಡುಗಡೆ ಮಾಡಲಾಗುವುದು. ಬಳಿಕ ಪಂಚಲಿಂಗೇಶ್ವರ ದೇವಸ್ಥಾನದಿಂದ ವಿವಿಧ ಜಾನಪದ ಕಲಾತಂಡಗಳೊಂದಿಗೆ ಗಣ್ಯರನ್ನು ಬಾರ್ಕೂರು ಕೋಟೆಯ ವೇದಿಕೆಗೆ ಮೆರವಣಿಗೆ ಮೂಲಕ ಕರೆತರಲಾಗುವುದು. ಬಳಿಕ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಸಂಜೆ 5.30ರಿಂದ ವಿಶೇಷ ಅಂಚೆ ಲಕೋಟೆ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಬಳಿಕ ಯಕ್ಷಗಾನ ಪ್ರದರ್ಶನ ಇರಲಿದೆ ಎಂದು ಮಾಹಿತಿ ನೀಡಿದರು.

ಜ.26ರಂದು ಸಂಜೆ 5.30ಕ್ಕೆ ಕತ್ತಲೆ ಬಸದಿಯಲ್ಲಿ ದೀಪಾಲಂಕಾರ ಹಾಗೂ ತುಳುನಾಡಿನ ಸೊಗಡು ಕಾರ್ಯಕ್ರಮ ನಡೆಯಲಿದೆ. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ, ಕಂಗೀಲು ಕುಣಿತ, ಜಗ್ಗಲಿಗೆ, ಪೂಜಾ ಕುಣಿತ, ಗಾರುಡಿ ಗೊಂಬೆ, ಹಾಲಕ್ಕಿ ಸುಗ್ಗಿ ಕುಣಿತ, ಡೊಳ್ಳು ಕುಣಿತ ಸೇರಿದಂತೆ ಹಲವು ಜಾನಪದ ಕಾರ್ಯಕ್ರಮಗಳು ನಡೆಯಲಿವೆ. ರಾತ್ರಿ 10ಕ್ಕೆ ಉಪವೇದಿಕೆಯಲ್ಲಿ ಪೆರ್ಡೂರು ಹಾಗೂ ಹಾಲಾಡಿ ಮೇಳದ ಯಕ್ಷಗಾನ ನಡೆಯಲಿದೆ.

27ರಂದು ಬೆಳಿಗ್ಗೆ 10ರಿಂದ ಆಳುಪರ ಕುರಿತು ವಿಚಾರ ಸಂಕಿರಣ ನಡೆಯಲಿದೆ. ಸಂಜೆ 6ರಿಂದ ಘಲ್‌ ಝಲ್‌, ನೃತ್ಯ ರೂಪಕ, ಕೊರಗರ ನಾವಿನ್ಯ ನೃತ್ಯ ಇರಲಿದೆ. ಉಪ ವೇದಿಕೆಯಲ್ಲಿ ರಾಘವೇಂದ್ರ ಜನ್ಸಾಲೆ ಅವರ ಯಕ್ಷ–ಗಾನ–ವೈಭವ ಜುಗಲ್‌ಬಂದಿ ಆಯೋಜಿಸಲಾಗಿದೆ.
ಇದೊಂದು ವಿಭಿನ್ನ ಕಾರ್ಯಕ್ರಮವಾಗಿದ್ದು, ಜನರು ಭಾಗವಹಿಸಿ ಕರಾವಳಿ ನೆಲದ ಸಾಂಸ್ಕೃತಿಕ ಸೊಬಗನ್ನು ಸವಿಯಬೇಕು ಎಂದು ಜಿಲ್ಲಾಧಿಕಾರಿ ಮನವಿ ಮಾಡಿದರು.

ಪ್ರವಾಸೋದ್ಯಮ ಇಲಾಕೆ ಸಹಾಯಕ ನಿರ್ದೇಶಕರಾದ ಅನಿತಾ, ಕನ್ನಡ ಮತ್ತು ಸಂಸ್ಕೃತಿ ಇಲಾಕೆ ಸಹಾಯಕ ನಿರ್ದೇಶಕ ಚಂದ್ರಶೇಖರ್ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT