ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಂಬುಲೆನ್ಸ್ ಅಪಘಾತ ಪ್ರಕರಣ: ಮದ್ಯ ಸೇವನೆ ಶಂಕೆ; ಚಾಲಕನ ರಕ್ತದ ಮಾದರಿ ಪರೀಕ್ಷೆ

ಬೈಂದೂರಿನ ಶಿರೂರು ಟೋಲ್‌ನಲ್ಲಿ ಆಂಬುಲೆನ್ಸ್ ಅಪಘಾತ ಪ್ರಕರಣ
Last Updated 21 ಜುಲೈ 2022, 16:04 IST
ಅಕ್ಷರ ಗಾತ್ರ

ಉಡುಪಿ: ಬೈಂದೂರು ತಾಲ್ಲೂಕಿನ ಶಿರೂರು ಟೋಲ್ ಕೇಂದ್ರದ ಬಳಿ ಬುಧವಾರ ಸಂಭವಿಸಿದ ಅಪಘಾತ ಪ್ರಕರಣದಲ್ಲಿ ಆಂಬುಲೆನ್ಸ್‌ ಚಾಲಕನ ರಕ್ತದ ಮಾದರಿಯನ್ನು ಪರೀಕ್ಷೆ ಮಾಡಲು ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಂಬುಲೆನ್ಸ್ ಚಾಲಕ ಮದ್ಯ ಸೇವಿಸಿ ವಾಹನ ಚಾಲನೆ ಮಾಡಿರುವ ಬಗ್ಗೆ ಶಂಕೆ ವ್ಯಕ್ತವಾಗಿರುವ ಹಿನ್ನೆಲೆಯಲ್ಲಿ ರಕ್ತ ಪರೀಕ್ಷೆ ಮಾಡಲಾಗುತ್ತಿದೆ. ಪರೀಕ್ಷೆಯಲ್ಲಿ ಆಲ್ಕೊಹಾಲ್ ಸೇವನೆ ದೃಢಪಟ್ಟರೆ ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿದರು.

‌ಶಿರೂರು ಟೋಲ್ ಸಿಬ್ಬಂದಿ ಅಪಘಾತದ ಕುರಿತು ಮಾತನಾಡಿ, ಎಷ್ಟೆ ತುರ್ತು ಇದ್ದರೂ ಟೋಲ್ ಕೇಂದ್ರದ ಸಮೀಪ ಬಂದಾಗ ಆಂಬುಲೆನ್ಸ್‌ಗಳು ವೇಗ ತಗ್ಗಿಸಬೇಕು. ಅಚಾತುರ್ಯದಿಂದ ಒಬ್ಬರ ಜೀವ ಉಳಿಸಲು ಹೋಗಿ ಹಲವರ ಜೀವ ಹೋಗುವಂತಾಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮಾನ್ಯವಾಗಿ ಆಂಬುಲೆನ್ಸ್‌ಗಳು ಹಾಗೂ ಪೊಲೀಸ್ ವಾಹನಗಳು ಟೋಲ್‌ನ ಎಮರ್ಜೆನ್ಸಿ ಮಾರ್ಗದಲ್ಲಿ ಸಂಚರಿಸುತ್ತವೆ. ಆಂಬುಲೆನ್ಸ್ 500 ಮೀಟರ್ ದೂರದಲ್ಲಿ ಬರುವಾಗ ಟೋಲ್ ಸಿಬ್ಬಂದಿ ಮಾರ್ಗಕ್ಕೆ ಅಡ್ಡಲಾಗಿರುವ ಬ್ಯಾರಿಕೇಡ್‌ಗಳನ್ನು ತೆರೆವುಗೊಳಿಸುತ್ತಾರೆ. ಒಂದುವೇಳೆ ಬ್ಯಾರಿಕೇಡ್‌ಗಳನ್ನು ಅಡ್ಡಲಾಗಿ ಇಡದಿದ್ದರೆ ಕೆಲವು ಚಾಲಕರು ತುರ್ತು ಮಾರ್ಗದಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ನುಗ್ಗಿಸಿಕೊಂಡು ಹೋಗುತ್ತಾರೆ ಎಂದು ಸಮರ್ಥನೆ ನೀಡಿದರು.

ಅಪಘಾತ ನಡೆದ ಕೂಡಲೇ ಐಆರ್‌ಬಿ ಹಾಗೂ ಎನ್‌ಎಚ್‌ಐ ಆಂಬುಲೆನ್ಸ್‌ಗಳನ್ನು ಕರೆಸಿಕೊಂಡು ಗಾಯಾಳುಗಳನ್ನು ಚಿಕಿತ್ಸೆಗೆ ಕರೆತರಲಾಯಿತು ಎಂದು ಮಾಹಿತಿ ನೀಡಿದರು.

ದನ ಅಡ್ಡ ಬಂದಿದ್ದರಿಂದ ಅಪಘಾತ:ಅಪಘಾತದ ಕುರಿತು ಆಂಬುಲೆನ್ಸ್ ಚಾಲಕ ಪ್ರತಿಕ್ರಿಯೆ ನೀಡಿದ್ದು, ‘ಹೊನ್ನಾವರದ ಶ್ರೀದೇವಿ ಆಸ್ಪತ್ರೆಯಿಂದ ಉಡುಪಿಯ ಆದರ್ಶ ಆಸ್ಪತ್ರೆಗೆ ರೋಗಿಯನ್ನು ಕರೆತರಲಾಗುತ್ತಿತ್ತು. ವಾಹನ ಶಿರೂರು ಟೋಲ್‌ ಕೇಂದ್ರದ ತುರ್ತು ಮಾರ್ಗದ ಸಮೀಪ ಬಂದಾಗ ಸಿಬ್ಬಂದಿ ಬ್ಯಾರಿಕೇಡ್‌ಗಳನ್ನು ತೆರವುಗೊಳಿಸಿದರು. ಆದರೆ, ತುರ್ತು ಮಾರ್ಗದಲ್ಲಿ ದನ ಅಡ್ಡಲಾಗಿ ಮಲಗಿದ್ದರಿಂದ ಅನಿವಾರ್ಯವಾಗಿ ಬ್ರೇಕ್ ಹಾಕಿದ್ದರಿಂದ ವಾಹನ ನಿಯಂತ್ರಣಕ್ಕೆ ಸಿಗದೆ ಪಲ್ಟಿಯಾಗಿ ಅಪಘಾತಕ್ಕೀಡಾಯಿತು ಎಂದು ವಿವರಿಸಿದರು.

ಬ್ರೇಕ್ ಹಾಕದಿದ್ದರೆ ಟೋಲ್ ಸಿಬ್ಬಂದಿಗೆ ಹಾಗೂ ದನಕ್ಕೆ ವಾಹನ ಡಿಕ್ಕಿ ಹೊಡೆಯುತ್ತಿತ್ತು. ಬ್ರೇಕ್ ಹಾಕದೆ ಬೇರೆ ದಾರಿ ಇರಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT