ಉಡುಪಿ| ಅಮೃತ ಕಾಲದ ಸದೃಢ ಭಾರತ ನಿರ್ಮಾಣ: ಎಸ್.ಜೈಶಂಕರ್

ಉಡುಪಿ: ಸ್ವಚ್ಛ ಭಾರತ, ಭೇಟಿ ಬಜಾವೋ, ಭೇಟಿ ಪಡಾವೋ, ಡಿಜಿಟಲ್ ಇಂಡಿಯಾ, ಸ್ಟಾರ್ಟ್ ಆಪ್, ಜಲಜೀವನ್ ಮಿಷನ್‌ನಂತಹ ಕಾರ್ಯಕ್ರಮಗಳು ದೇಶವನ್ನು ಸದೃಢಗೊಳಿಸಿದ್ದು ಪ್ರಧಾನಿ ನರೇಂದ್ರ ಮೋದಿ ಮುಂದಿನ 25 ವರ್ಷಗಳಲ್ಲಿ ಅಮೃತಕಾಲದ ಭಾರತ ನಿರ್ಮಾಣ ನೀಲ ನಕ್ಷೆಯನ್ನು ಸಿದ್ಧಪಡಿಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವ ಎಸ್.ಜೈಶಂಕರ್ ಹೇಳಿದರು.
ಮಣಿಪಾಲದ ಮಾಹೆ ವಿವಿಯ ಟ್ಯಾಪ್ಮಿ ವತಿಯಿಂದ ಭಾನುವಾರ ಅಮೃತ್ ಗಾರ್ಡನ್‌ನಲ್ಲಿ ಹಮ್ಮಿಕೊಂಡಿದ್ದ ನಾಯಕತ್ವ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕಳೆದ ಒಂದು ದಶಕದಲ್ಲಿ ಎದುರಾದ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ ಭಾರತ ಎಲ್ಲ ಕ್ಷೇತ್ರಗಳಲ್ಲಿ ಪ್ರಗತಿ ಸಾಧಿಸಿದ್ದು ಜಾಗತಿಕ ಶಕ್ತಿಯಾಗಿ ಬೆಳೆದು ನಿಂತಿದೆ.
ಕೋವಿಡ್ ಸಾಂಕ್ರಮಿಕ ಕಾಲಘಟ್ಟದಲ್ಲಿ ಎರಡೂವರೆ ವರ್ಷ 80 ಕೋಟಿ ನಾಗರಿಕರಿಗೆ ಆಹಾರ ಭದ್ರತೆ ಒದಗಿಸಿದೆ. 41.5 ಕೋಟಿಗೂ ಹೆಚ್ಚು ಜನರ ಬ್ಯಾಂಕ್ ಖಾತೆಗೆ ನೇರವಾಗಿ ಸಹಾಯಧನ ಜಮೆ ಮಾಡಿದೆ. ಎಲ್ಲ ನಾಗರಿಕರಿಗೂ ಉಚಿತವಾಗಿ ಕೋವಿಡ್ ಲಸಿಕೆ ನೀಡಲಾಗಿದ್ದು ವಿಶ್ವವೇ ಭಾರತದತ್ತ ಬೆರಗಿನಿಂದ ನೋಡುವಂತಾಗಿದೆ ಎಂದರು.
ಕಳೆದ ಕೆಲವು ವರ್ಷಗಳಲ್ಲಿ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಕ್ರಾಂತಿಕಾರಿ ಬೆಳವಣಿಗೆಯಾಗಿದೆ. ತಂತ್ರಜ್ಞಾನ ಆಧಾರಿತ ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಆತ್ಮ ನಿರ್ಭರ ಭಾರತ ಪರಿಕಲ್ಪನೆ ಹಾಗೂ ಸಮರ್ಥ ನಾಯಕತ್ವ ಭಾರತವನ್ನು ವಿಶ್ವನಾಯಕತ್ವದತ್ತ ಕೊಂಡೊಯ್ಯುತ್ತಿದೆ ಎಂದರು.
ಡಿಜಿಟಲ್ ಯುಗದಲ್ಲಿ ವಿಶ್ವವೇ ಕಾರ್ಯಕ್ಷೇತ್ರವಾಗಿ ಬದಲಾಗಿದ್ದು ಭೌಗೋಳಿಕ ಸರಹದ್ದುಗಳು ಸಡಿಲಗೊಳ್ಳುತ್ತಿವೆ. ಪ್ರತಿಭೆ, ಕೌಶಲಕ್ಕೆ ಜಾಗತಿಕ ಮನ್ನಣೆ ದೊರೆಯುತ್ತಿದೆ. ತಂತ್ರಜ್ಞಾನ ಯುಗದಲ್ಲಿ ಸೃಷ್ಟಿಯಾಗಿರುವ ಅವಕಾಶವನ್ನು ದೇಶದ ಯುವ ಜನತೆ ಸಮರ್ಥವಾಗಿ ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಶ್ವಮಟ್ಟದ ರಾಜಕೀಯದಲ್ಲಿ ಅತಿಹೆಚ್ಚು ಸದ್ದು ಮಾಡುತ್ತಿರುವುದು ತೈಲ ಸಂಪನ್ಮೂಲವಾಗಲಿ, ಸೇನಾ ಶಕ್ತಿಯಾಗಲಿ ಅಲ್ಲ. ಪ್ರಸ್ತುತ ತಂತ್ರಜ್ಞಾನ ಅತಿ ದೊಡ್ಡ ಶಕ್ತಿಯಾಗಿ ರೂಪುಗೊಡಿದೆ. ತಂತ್ರಜ್ಞಾನ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ದೇಶ ಜಾಗತಿಕ ಶಕ್ತಿಯಾಗಿ ಗುರುತಿಸಿಕೊಳ್ಳುತ್ತಿದೆ ಎಂದರು.
ಜಾಗತಿಕ ತಾಪಮಾನ ತಡೆಗೆ ಭಾರತ ಬದ್ಧವಾಗಿದ್ದು ಸೋಲಾರ್ ಶಕ್ತಿ ಉತ್ಪಾದನೆಗೆ ವಿಶ್ವದ 100ಕ್ಕೂ ಹೆಚ್ಚು ದೇಶಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಭಯೋತ್ಪಾದನೆ ತಡೆಗೆ ದಿಟ್ಟ ಹೆಜ್ಜೆ ಇಟ್ಟಿದ್ದು ಇಸ್ರೇಲ್ ಸೇರಿದಂತೆ ಹಲವು ರಾಷ್ಟ್ರಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಮಾಹೆ ಸಹ ಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಮಾಹೆ ಕುಲಪತಿ ಡಾ.ಎಂ.ಡಿ.ವೆಂಕಟೇಶ್, ಸಹ ಕುಲಪತಿ ಡಾ.ಮಧು ವೀರಗಾವನ್ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.