ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಛಿದ್ರಗೊಂಡಿದ್ದನ್ನು ಒಗ್ಗೂಡಿಸುವುದು ರಂಗಭೂಮಿ: ವಿಶ್ರಾಂತ ಕುಲಪತಿ ವಿವೇಕ್ ರೈ

ಪ್ರಶಸ್ತಿ ಪ್ರದಾನ ಸಮಾರಂಭ
Last Updated 21 ಏಪ್ರಿಲ್ 2019, 14:47 IST
ಅಕ್ಷರ ಗಾತ್ರ

ಉಡುಪಿ: ರಾಜಕೀಯ ಹಾಗೂ ಆಧುನಿಕ ಬದುಕು ಬೇರೆ ಬೇರೆ ರೂಪದಲ್ಲಿ ಮನುಷ್ಯರನ್ನು ಛಿದ್ರಗೊಳಿಸುವ, ವಿಭಜಿಸುವ ಕೆಲಸ ಮಾಡುತ್ತಿದೆ. ಛಿದ್ರಗೊಂಡ ಮನಸ್ಸುಗಳನ್ನು ಒಗ್ಗೂಡಿಸುವ ಕೆಲಸವನ್ನು ರಂಗಭೂಮಿ ಮಾಡುತ್ತಿದೆ ಎಂದು ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಹೇಳಿದರು.

ರಂಗಭೂಮಿ ಉಡುಪಿ ಸಂಸ್ಥೆಯಿಂದ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುತ್ತಿರುವ ಆನಂದೋತ್ಸವ ಕಾರ್ಯಕ್ರಮದ ಎರಡನೇ ದಿನವಾದ ಭಾನುವಾರ ತಲ್ಲೂರು ಗಿರಿಜಾ ಡಾ.ಶಿವರಾಮ ಶೆಟ್ಟಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.

ನಮಗೇ ಗೊತ್ತಿಲ್ಲದಂತೆ ಮನಸ್ಸುಗಳು ಒಡೆಯುತ್ತಾ ಬರುತ್ತಿವೆ. ಇವುಗಳ ಮಧ್ಯೆ ನಾವೆಲ್ಲ ಒಂದು ಎಂಬ ಭಾವನೆ ಮೂಡಿಸುವುದು ಸಂಸ್ಕೃತಿಯ ವಿವಿಧ ಪ್ರಕಾರಗಳು. ಈ ರೀತಿಯಲ್ಲಿ ಸಮಾಜದ ಸ್ವಾಸ್ಥ್ಯ ಕಾಪಾಡುವುದಕ್ಕಾಗಿ ಜಗತ್ತಿನ ಎಲ್ಲ ನಗರಗಳಲ್ಲೂ ರಂಗಭೂಮಿ ಚಟುವಟಿಕೆಗಳಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ಒಂದು ದೇಶದ ಸಂಸ್ಕೃತಿಯ ಆರೋಗ್ಯವನ್ನು ಆ ದೇಶದ ರಂಗ ಚಟುವಟಿಕೆಗಳನ್ನು ನಿರ್ಧರಿಸುತ್ತವೆ. ರಂಗ ಚಟುವಟಿಕೆಗಳು ದೇಶದ ಮೌಲ್ಯವನ್ನು ಹೆಚ್ಚಿಸುತ್ತವೆ. ದೈಹಿಕ ಆರೋಗ್ಯ ಕಾಪಾಡಲು ಸಾಕಷ್ಟು ಸುಸಜ್ಜಿತ ಆಸ್ಪತ್ರೆಗಳಿವೆ. ಆದರೆ, ಕೆಡುತ್ತಿರುವ ಮಾನಸಿಕ ಆರೋಗ್ಯವನ್ನು ಕಾಪಾಡುವಲ್ಲಿ ರಂಗಭೂಮಿಯ ಕೊಡುಗೆ ಅಪಾರ ಎಂದು ಅಭಿಪ್ರಾಯಪಟ್ಟರು.

ಸಾಹಿತ್ಯದ ಓದು, ಸಂಗೀತ ಕಛೇರಿ, ನೃತ್ಯ, ಯಕ್ಷಗಾನ, ನಾಟಕ ನೋಡುವುದರ ಮೂಲಕ ಸ್ವಸ್ಥ ಚಿತ್ತದಿಂದ ಯೋಚನೆ ಮಾಡುವಂತಹ ನಡವಳಿಕೆ ಬರುತ್ತದೆ. ರಂಗಭೂಮಿಯಲ್ಲಿ ಚಿತ್ರ, ಹಾಡು, ಸಂಗೀತ, ಅಭಿನಯ, ನೃತ್ಯ, ವೇಷ ಭೂಷಣ ಹಾಗೂ ಬಂಧುತ್ವದ ಕಲ್ಪನೆ ಇದೆ. ಅಲ್ಲದೆ, ಭವಿಷ್ಯದ ಕಡೆಗೆ ಆಶಾಭಾವನೆ ಇದೆ ಎಂದು ಹೇಳಿದರು.

ಹಿರಿಯ ಸಾಹಿತಿ ಅಂಬಾತನಯ ಮುದ್ರಾಡಿ, ಜಿಲ್ಲಾ ಕನ್ನಡ ಸಾಗಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಜಿ. ವಿಜಯ ಅತಿಥಿಗಳಾಗಿ ಭಾಗವಹಿಸಿದ್ದರು.

ರಂಗಭೂಮಿಯ ಗೌರವಾಧ್ಯಕ್ಷ ಡಾ.ಎಚ್.ಶಾಂತಾರಾಮ್, ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು. ರಂಗಭೂಮಿಯ ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಎಂ.ನಂದಕುಮಾರ್‌ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಎಚ್‌.ಪಿ.ರವಿರಾಜ್‌ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT