ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | ಹೈನುಗಾರಿಕೆಯಲ್ಲಿ ಖುಷಿ ಇಲ್ಲ; ನಷ್ಟವೇ ಎಲ್ಲ

ಒಂದು ಲಕ್ಷ ಲೀಟರ್ ಹಾಲಿನ ಉತ್ಪಾದನೆ ಕುಸಿತ; 5 ಸಾವಿರ ಹೈನುಗಾರರು ವೃತ್ತಿಯಿಂದ ವಿಮುಖ
Last Updated 5 ಫೆಬ್ರುವರಿ 2023, 19:30 IST
ಅಕ್ಷರ ಗಾತ್ರ

ಉಡುಪಿ: ಹಾಲು ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿ ಹೆಚ್ಚುವರಿ ಹಾಲನ್ನು ಹೊರ ಜಿಲ್ಲೆಗಳಿಗೂ ರಫ್ತು ಮಾಡುವ ಮೂಲಕ ಹೈನುಗಾರಿಕೆಯಲ್ಲಿ ಉತ್ತುಂಗ ಸ್ಥಿತಿ ತಲುಪಿದ್ದ ಕರಾವಳಿಯಲ್ಲಿ ಪ್ರಸ್ತುತ ಹಾಲಿನ ಉತ್ಪಾದನೆ ಕುಸಿತವಾಗಿದ್ದು ಕೊರತೆ ಎದುರಾಗಿದೆ.

ಪಶು ಆಹಾರ ದರ ಹೆಚ್ಚಳ, ದುಬಾರಿ ನಿರ್ವಹಣಾ ವೆಚ್ಚ, ಬೈಹುಲ್ಲು ದರ ಏರಿಕೆ, ಕಾರ್ಮಿಕರ ಅಲಭ್ಯತೆ, ರಾಸುಗಳಿಗೆ ಕಾಡುತ್ತಿರುವ ಚರ್ಮಗಂಟು ರೋಗದ ಪರಿಣಾಮ ಕರಾವಳಿಯ ಹೈನುಗಾರರು ಹೈನುಗಾರಿಕೆಯಿಂದಲೇ ವಿಮುಖರಾಗುತ್ತಿದ್ದಾರೆ. ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ಹೈನುಗಾರರ ನೆರವಿಗೆ ಸರ್ಕಾರ ಧಾವಿಸದಿದ್ದರೆ ಹೈನೋದ್ಯಮ ವಿನಾಶದ ಅಂಚಿಗೆ ತಲುಪುವ ಆತಂಕ ಎದುರಾಗಲಿದೆ.

1 ಲಕ್ಷ ಲೀಟರ್ ಉತ್ಪಾದನೆ ಕುಸಿತ: ಕೋವಿಡ್‌ ಕಾಲಘಟ್ಟದಲ್ಲಿ ಪ್ರತಿದಿನ ಗರಿಷ್ಠ 5.60 ಲೀಟರ್ ಹಾಲಿನ ಉತ್ಪಾದನೆ ಮಾಡಿ ದಾಖಲೆ ಬರೆದಿದ್ದ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಒಕ್ಕೂಟದಲ್ಲಿ ಪ್ರಸ್ತುತ ಸರಾಸರಿ 4.60 ಲಕ್ಷ ಲೀಟರ್‌ ಮಾತ್ರ ಉತ್ಪಾದನೆಯಾಗುತ್ತಿದೆ. ಅಂದರೆ, ಪ್ರತಿದಿನ 1 ಲಕ್ಷ ಲೀಟರ್‌ನಷ್ಟು ಉತ್ಪಾದನೆ ಕುಸಿತವಾಗಿದೆ.

ಹೈನುಗಾರಿಕೆಯಿಂದ ವಿಮುಖ: ಹೈನುಗಾರಿಕಾ ಕ್ಷೇತ್ರವನ್ನು ಕಾಡುತ್ತಿರುವ ಸಮಸ್ಯೆಗಳಿಂದ ಬೇಸತ್ತು ಕಳೆದ ಒಂದೆರಡು ವರ್ಷಗಳಲ್ಲಿ ಒಕ್ಕೂಟದ ವ್ಯಾಪ್ತಿಯ 5,000ದಷ್ಟು ಮಂದಿ ಹೈನುಗಾರಿಕೆಯನ್ನೇ ಬಿಟ್ಟು ಅನ್ಯ ವೃತ್ತಿಗಳತ್ತ ಮುಖ ಮಾಡಿದ್ದಾರೆ.

ಹಾಲಿನ ಉತ್ಪಾದನೆ ಕುಸಿತಕ್ಕೆ ಕಾರಣ: ಕರಾವಳಿಯಲ್ಲಿ ಹಾಲಿನ ಉತ್ಪಾದನೆ ಕುಸಿತಕ್ಕೆ ಪ್ರಮುಖ ಕಾರಣ ಪಶು ಆಹಾರ ದರ ಏರಿಕೆ. ಕಳೆದ 1 ವರ್ಷದಲ್ಲಿ ಪಶು ಆಹಾರದ ದರ ಶೇ 15 ರಿಂದ 20ರಷ್ಟು ಹೆಚ್ಚಾಗಿರುವುದು ಹೈನುಗಾರಿಕೆಗೆ ದೊಡ್ಡ ಪೆಟ್ಟು ಕೊಟ್ಟಿದೆ.

ಆರು ತಿಂಗಳ ಹಿಂದೆ ಕೆಎಂಎಫ್ ಪಶು ಆಹಾರ 50 ಕೆ.ಜಿ ಚೀಲಕ್ಕೆ ₹ 1,000ದ ಆಸುಪಾಸಿನಲ್ಲಿತ್ತು. ಸದ್ಯ 1,200 ರಿಂದ ₹ 1,300ರವರೆಗೂ ಹೆಚ್ಚಾಗಿದೆ. ರೈತರು ಒಕ್ಕೂಟಕ್ಕೆ ನೀಡುವ ಹಾಲಿನ ದರವನ್ನು ಏರಿಕೆ ಮಾಡದೆ, ಏಕಮುಖವಾಗಿ ಕೇವಲ ಪಶು ಆಹಾರದ ಬೆಲೆಯನ್ನು ಮಾತ್ರ ಹೆಚ್ಚಿಸುತ್ತಿರುವುದು ಯಾವ ನ್ಯಾಯ ಎಂದು ಪ್ರಶ್ನಿಸುತ್ತಾರೆ ರೈತರು.

ಪಶು ಆಹಾರದ ಅವಲಂಬನೆ: ರಾಜ್ಯದ ಇತರೆ ಜಿಲ್ಲೆಗಳಂತೆ ಕರಾವಳಿಯಲ್ಲಿ ಹಾಲಿನ ಇಳುವರಿ ಹೆಚ್ಚಳಕ್ಕೆ ಬೇಕಾಗಿರುವ ಮೆಕ್ಕೆಜೋಳ ಹಾಗೂ ಹಸಿರು ಮೇವು ಹೆಚ್ಚಾಗಿ ಬೆಳೆಯುವುದಿಲ್ಲ. ಕೃಷಿ ಭೂಮಿ ‌ತೀರಾ ಕಡಿಮೆ ಇರುವುದು ಇದಕ್ಕೆ ಕಾರಣ. ಕರಾವಳಿಯ ಬಹುತೇಕ ಹೈನುಗಾರರು ಹಾಲಿನ ಇಳುವರಿ ಹೆಚ್ಚಳಕ್ಕೆ ಪಶು ಆಹಾರದ ಮೇಲೆ ಅವಲಂಬಿತರಾಗಿರುವುದರಿಂದ ದರ ಹೆಚ್ಚಾದರೂ ಖರೀದಿಸಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ.

ಬೈಹುಲ್ಲು ಕೂಡ ಘಟ್ಟದ ಮೇಲಿನ ಹಾಗೂ ನೆರೆಯ ಜಿಲ್ಲೆಗಳಿಂದ ತರಿಸಿಕೊಳ್ಳುವುದರಿಂದ ಸಹಜವಾಗಿ ಸಾಗಣೆ ವೆಚ್ಚವೂ ಕರಾವಳಿ ಹೈನುಗಾರರ ಮೇಲೆ ಹಾಕಲಾಗುತ್ತದೆ. ಇದರಿಂದ ಒಟ್ಟಾರೆ ಹೈನುಗಾರಿಕೆಯ ನಿರ್ವಹಣಾ ವೆಚ್ಚ ಹೆಚ್ಚಾಗಿ ಲಾಭದ ಬದಲಾಗಿ ನಷ್ಟ ಅನುಭವಿಸುವಂತಾಗಿದೆ.

ಮತ್ತೆ ನಗರದತ್ತ ವಲಸೆ: ಕೋವಿಡ್‌–19 ಸಂದರ್ಭ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಲ್ಲಿ ದುಡಿಯುತ್ತಿದ್ದ ಸಾವಿರಾರು ಯುವಕರು ಉದ್ಯೋಗ ತೊರೆದು ತವರಿಗೆ ಮರಳಿ ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದರು. ಪರಿಣಾಮ, ದಾಖಲೆ ಪ್ರಮಾಣದ ಹಾಲು ಉತ್ಪಾದನೆಯಾಗಿತ್ತು.

ಕೋವಿಡ್‌ ಸೋಂಕು ಇಳಿಮುಖವಾಗುತ್ತಿದ್ದಂತೆ ಯುವಕರು ಹಸುಗಳನ್ನು ಮಾರಿ ಮತ್ತೆ ನಗರದತ್ತ ಮುಖ ಮಾಡುತ್ತಿರುವುದು ಕೂಡ ಹಾಲಿನ ಉತ್ಪಾದನೆ ಇಳಿಮುಖವಾಗಲು ಒಂದು ಕಾರಣ ಎನ್ನಲಾಗುತ್ತಿದೆ.

ಚರ್ಮಗಂಟು ಬಾಧೆ: ಜಿಲ್ಲೆಯಲ್ಲಿ ಜಾನುವಾರುಗಳಿಗೆ ವ್ಯಾಪಕವಾಗಿ ಹರಡಿರುವ ಮಾರಕ ಚರ್ಮ ಗಂಟು (ಲಿಂಪಿ ಸ್ಕಿನ್‌ ಡಿಸೀಸ್‌) ರೋಗ ಹಾಲಿನ ಇಳುವರಿ ಕುಸಿತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ರೋಗಕ್ಕೆ ತುತ್ತಾದ ದನದಲ್ಲಿ ಶೇ 60ರಷ್ಟು ಹಾಲು ಉತ್ಪಾದನೆ ಕುಸಿತವಾಗುತ್ತದೆ. ದನ ರೋಗದಿಂದ ಚೇತರಿಸಿಕೊಂಡರು ಮೊದಲಿನಷ್ಟು ಹಾಲು ಕರೆಯುವುದಿಲ್ಲ ಎನ್ನುತ್ತಾರೆ ರೈತರು.

ಗ್ರಾಹಕರಿಂದ ಬೇಡಿಕೆ ಹೆಚ್ಚು: ಕರಾವಳಿಯಲ್ಲಿ ಹಾಲಿನ ಉತ್ಫಾದನೆ ಕುಸಿತವಾಗಿದ್ದರೆ, ಮತ್ತೊಂದೆಡೆ ಗ್ರಾಹಕರಿಂದ ಹಾಲು ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಬೇಡಿಕೆಯಷ್ಟು ಹಾಲು ಪೂರೈಸಲು ಸಾಧ್ಯವಾಗದೆ ಹಾಸನ ಹಾಗೂ ಮಂಡ್ಯ ಒಕ್ಕೂಟದಿಂದ ಲೀಟರ್‌ಗೆ ₹ 5 ರಿಂದ ₹ 6 ಹೆಚ್ಚುವರಿಯಾಗಿ ವ್ಯಯಿಸಿ ಆಮದು ಮಾಡಿಕೊಳ್ಳಲಾಗುತ್ತಿದೆ. ಹಾಲಿನ ಕೊರತೆಯಿಂದಾಗಿ ಐಸ್‌ಕ್ರೀಂ ಕಂಪೆನಿಗಳಿಗೆ ಸಮೃದ್ಧಿ ಹಾಲಿನ ಪೂರೈಕೆಯನ್ನು ನಿಲ್ಲಿಸಿ ಗ್ರಾಹಕರಿಗೆ ಮಾತ್ರ ಪೂರೈಸಲಾಗುತ್ತಿದೆ.

ಪ್ರೋತ್ಸಾಹ ಧನ ಹೆಚ್ಚಳಕ್ಕೆ ಮನವಿ: ಹಾಲಿನ ಪ್ರೋತ್ಸಾಹ ಧನವನ್ನು ₹ 5 ರಿಂದ ₹ 8ಕ್ಕೆ ಹೆಚ್ಚಿಸಬೇಕು ಹಾಗೂ ಕರಾವಳಿಗೆ ಅನ್ವಯವಾಗುವಂತೆ ಹಾಲಿನ ದರ ಹೆಚ್ಚಿಸಲು ಒಕ್ಕೂಟಕ್ಕೆ ಅನುಮತಿ ನೀಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದರಿಂದ ಒಕ್ಕೂಟಕ್ಕೆ ಹಾಗೂ ಹೈನುಗಾರರಿಗೆ ನೆರವಾಗಲಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ.

‘ರಾಜ್ಯದಲ್ಲಿಯೇ ಹಾಲಿನ ಉತ್ಫಾದನೆ ಕುಸಿತ’
ಕರಾವಳಿಯಲ್ಲಿ ಮಾತ್ರವಲ್ಲ; ರಾಜ್ಯದಲ್ಲಿಯೇ ಹಾಲಿನ ಉತ್ಪಾದನೆ ಕುಸಿತವಾಗಿದೆ. ಹಿಂದೆ ಪ್ರತಿದಿನ 90 ಲಕ್ಷ ಲೀಟರ್ ಉತ್ಪಾದನೆಯಾಗುತ್ತಿದ್ದ ಹಾಲಿನ ಪ್ರಮಾಣ ಸದ್ಯ 74 ಲಕ್ಷಕ್ಕೆ ಇಳಿಕೆಯಾಗಿದೆ. ಚರ್ಮಗಂಟು ರೋಗ, ಪಶು ಆಹಾರ ದರ ಹೆಚ್ಚಳ, ಹೈನುಗಾರಿಕೆಯತ್ತ ಹೊಸ ತಲೆಮಾರು ಆಸಕ್ತಿ ತೋರದಿರುವುದು ಹಾಲಿನ ಉತ್ಪಾದನೆ ಕುಸಿತವಾಗಲು ಕಾರಣ. ಮುಖ್ಯವಾಗಿ ಗ್ರಾಹಕರಿಂದ ಹಾಲು, ಮೊಸರು, ಬೆಣ್ಣೆ, ತುಪ್ಪ ಹಾಗೂ ಹಾಲಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗಿದೆ. ಉತ್ಸವ, ಜಾತ್ರೆ, ಸಮಾರಂಭಗಳ ಕಾರಣದಿಂದ ಕಳೆದ ವರ್ಷಕ್ಕೆ ಹೋಲಿಸಿದರೆ ಬೇಡಿಕೆ ಶೇ 13ರಷ್ಟು ಹೆಚ್ಚಿದೆ ಎನ್ನುತ್ತಾರೆ ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಸುಚರಿತ ಶೆಟ್ಟಿ.

‘ಮುಚ್ಚುತ್ತಿವೆ ಹಾಲಿನ ಕೇಂದ್ರಗಳು’
ಹೆಬ್ರಿ ತಾಲ್ಲೂಕು ಶಿವಪುರದಿಂದ 4 ಕಿ.ಮೀ ದೂರದಲ್ಲಿರುವ ಪಾಂಡುಕಲ್ ಗ್ರಾಮದಲ್ಲಿ 10 ವರ್ಷಗಳ ಹಿಂದೆ ಸ್ಥಾಪನೆಯಾಗಿದ್ದ ಹಾಲು ಸಂಗ್ರಹಣಾ ಕೇಂದ್ರದಲ್ಲಿ ಪ್ರತಿ ದಿನ ಬೆಳಿಗ್ಗೆ 150 ಲೀಟರ್‌, ಸಂಜೆ 100 ಲೀಟರ್ ಹಾಲು ಸಂಗ್ರಹವಾಗಿತ್ತು. ಈಚೆಗೆ ಈ ಕೇಂದ್ರದಲ್ಲಿ ಪ್ರತಿದಿನ ಕೇವಲ 35 ಲೀಟರ್ ಹಾಲು ಸಂಗ್ರಹವಾಗುತ್ತಿದ್ದು ಒಂದೂವರೆ ತಿಂಗಳಿನಿಂದ ಬಂದ್ ಮಾಡಲಾಗಿದೆ. ಇದು ಪಾಂಡುಕಲ್‌ ಗ್ರಾಮದ ಪರಿಸ್ಥಿತಿ ಮಾತ್ರವಲ್ಲ, ಜಿಲ್ಲೆಯ ಹಲವು ಗ್ರಾಮಗಳ ಸ್ಥಿತಿಯೂ ಹೌದು ಎನ್ನುತ್ತಾರೆ ದಶಕಗಳಿಂದ ಹೈನುಗಾರಿಕೆಯಲ್ಲಿ ತೊಡಗಿರುವ ಬೈಕಾಡಿ ಮಂಜುನಾಥ್ ಭಟ್‌.

ದ.ಕ ಒಕ್ಕೂಟದಲ್ಲಿ ಪ್ರತಿದಿನ ಹಾಲಿನ ಉತ್ಪಾದನೆ– 4.60 ಲಕ್ಷ ಲೀಟರ್‌
ಮೊಸರು ಉತ್ಪಾದನೆ–70 ಸಾವಿರ ಲೀಟರ್
ದ.ಕ ಒಕ್ಕೂಟದಲ್ಲಿ ನೋಂದಣಿಯಾದ ಹಾಲು ಉತ್ಪಾದಕರು–1.25 ಲಕ್ಷ
ಸಕ್ರಿಯ ಸದಸ್ಯರ ಸಂಖ್ಯೆ–69 ಸಾವಿರ

ಹಾಲಿನ ಗುಣಮಟ್ಟ: ದ.ಕ.ಒಕ್ಕೂಟ ರಾಜ್ಯದಲ್ಲಿ ಮುಂಚೂಣಿ
ಹೈನುಗಾರರಿಗೆ ಪ್ರತಿ ಲೀಟರ್‌ಗೆ ನೀಡುವ ದರ– ₹33 ರಿಂದ ₹36
ಸರ್ಕಾರದಿಂದ ಹೈನುಗಾರರಿಗೆ ಬರುವ ಪ್ರೋತ್ಸಾಹಧನ–₹ 5 (ಕಡಿತ ಬಿಟ್ಟು)

ಹೈನುಗಾರರ ಬೇಡಿಕೆ ಏನು?
– ಪ್ರೋತ್ಸಾಹಧನವನ್ನು ₹ 5 ರಿಂದ ₹ 10ಕ್ಕೆ ಹೆಚ್ಚಿಸಿ
– ಕೆ.ಜಿ ಪಶು ಆಹಾರದ ಮೇಲೆ ₹ 5 ಪ್ರೋತ್ಸಾಹಧನ ಕೊಡಿ
– ಪಶು ಆಹಾರ ದರ ಕನಿಷ್ಠ ₹ 1,000ಕ್ಕೆ ಇಳಿಸಿ
–ದಕ್ಷಿಣ ಕನ್ನಡ ಹಾಲು ಉತ್ಪಾದಕರ ಒಕ್ಕೂಟ ಪ್ರೋತ್ಸಾಹಧನ ಹೆಚ್ಚಿಸಲಿ
–ಚರ್ಮಗಂಟು ರೋಗ ಬಾಧಿತ ಹಾಗೂ ಮೃತ ಜಾನುವಾರುಗೆ ಪರಿಹಾರ ಮೊತ್ತ ಹೆಚ್ಚಿಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT