ಜನವಿರೋಧಿ ಸರ್ಕಾರಕ್ಕೆ ತಕ್ಕ ಉತ್ತರ: ಗೆಲುವಿನ ಬಳಿಕ ಸಂಸದೆ ಶೋಭಾ ಕರಂದ್ಲಾಜೆ

ಬುಧವಾರ, ಜೂನ್ 19, 2019
23 °C

ಜನವಿರೋಧಿ ಸರ್ಕಾರಕ್ಕೆ ತಕ್ಕ ಉತ್ತರ: ಗೆಲುವಿನ ಬಳಿಕ ಸಂಸದೆ ಶೋಭಾ ಕರಂದ್ಲಾಜೆ

Published:
Updated:
Prajavani

ಉಡುಪಿ: ಮೈತ್ರಿ ಸರ್ಕಾರ ಜನವಿರೋಧಿ ಎಂಬುದು ಲೋಕಸಭೆ ಚುನಾವಣೆಯ ಫಲಿತಾಂಶದಿಂದ ಸಾಬೀತಾಗಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದರು.

ಗುರುವಾರ ಮತ ಎಣಿಕೆ ಕೇಂದ್ರಕ್ಕೆ ಬಂದ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ರಾಜ್ಯದ ಜನ ಸರ್ಕಾರದ ಜತೆಗೆ ಇಲ್ಲ. ಮೈತ್ರಿ ಸರ್ಕಾರಕ್ಕೆ ಚುನಾವಣೆಯ ಮೂಲಕ ತಕ್ಕ ಪಾಠ ಕಲಿಸಿದ್ದಾರೆ’ ಎಂದರು.

ಪ್ರಧಾನಿ ನರೇಂದ್ರ ಮೋದಿ ಅಲೆಗೆ ಕಾಂಗ್ರೆಸ್‌ನ ಘಟಾನುಘಟಿ ನಾಯಕರು ಕೊಚ್ಚಿ ಹೋಗಿದ್ದಾರೆ. ತುಮಕೂರಿನಲ್ಲಿ ದೇವೇಗೌಡರು, ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಬಳ್ಳಾರಿಯಲ್ಲಿ ಉಗ್ರಪ್ಪ ಹಾಗೂ ಚಿಕ್ಕಬಳ್ಳಾಪುರದಲ್ಲಿ ಮೊಯ್ಲಿ ಹೀನಾಯವಾಗಿ ಸೋಲುಂಡಿದ್ದಾರೆ. ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅವರನ್ನು ಗೆಲ್ಲಿಸುವ ಮೂಲಕ ಕುಟುಂಬ ರಾಜಕಾರಣಕ್ಕೆ ಮತದಾರರು ತಕ್ಕ ಉತ್ತರ ನೀಡಿದ್ದಾರೆ ಎಂದು ಟೀಕಿಸಿದರು.

ಚುನಾವಣೋತ್ತರ ಸಮೀಕ್ಷೆ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ, ಸಿದ್ದರಾಮಯ್ಯ ವ್ಯಂಗ್ಯವಾಡಿದ್ದರು. ಸಮೀಕ್ಷೆಯನ್ನು ಮೀರಿ ಬಿಜೆಪಿ ಸಾಧನೆ ಮಾಡಿದೆ. ರಾಜ್ಯದಲ್ಲಿ 22ಕ್ಕಿಂತಲೂ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ, ಉಡುಪಿ–ಚಿಕ್ಕಮಗಳೂರು ಕ್ಷೇತ್ರದಲ್ಲಿ 2 ಲಕ್ಷ  ಮುನ್ನಡೆ ಸಿಗುತ್ತದೆ ಎಂದು ಹಿಂದೆ ಹೇಳಿದಂತೆಯೇ ಆಗಿದೆ. ಕ್ಷೇತ್ರದ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.

ಉಡುಪಿ–ಚಿಕ್ಕಮಗಳೂರು ಬಿಜೆಪಿ ನೆಲೆಯ ಕ್ಷೇತ್ರ. ಕೆಲವರು ಸ್ವಾರ್ಥಕ್ಕೆ ‘ಗೋ ಬ್ಯಾಕ್‌ ಶೋಭಾ’ ಎಂದರು. ಅವರಿಗೆ ಕ್ಷೇತ್ರದ ಮತದಾರರು ತಕ್ಕ ಉತ್ತರ ಕೊಟ್ಟಿದ್ದಾರೆ. ದ್ವೇಷದ ರಾಜಕಾರಣ ಮಾಡಲ್ಲ. ಯಾರ ಮೇಲೂ ಶಿಸ್ತು ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹಿರಿಯ ಮುಖಂಡ ಜಯಪ್ರಕಾಶ್ ಹೆಗ್ಡೆ ಅವರಿಗೆ ಪರೋಕ್ಷ ಟಾಂಗ್ ನೀಡಿದರು.

 ‘ಜನಾದೇಶವನ್ನು ಗೌರವಿಸುವುದಾದರೆ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ಕೊಡಲಿ’ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.

₹ 150 ಕೋಟಿ, ಮೂವರು ಸಚಿವರು, 8 ಜನ ಶಾಸಕರು ಮಂಡ್ಯದಲ್ಲಿ ನಿಖಿಲ್‌ ಗೆಲುವಿಗೆ ಸೆಣೆಸಿದರೂ ಮಂಡ್ಯದ ಸ್ವಾಭಿಮಾನಿ ಮತದಾರರು ಸುಮಲತಾ ಅವರನ್ನು ಗೆಲ್ಲಿಸಿದ್ದಾರೆ. ಸುಮಲತಾ ಗೆಲುವು ಸರ್ಕಾರಕ್ಕೆ ಕಪಾಳ ಮೋಕ್ಷ ಮಾಡಿದಂತಿದೆ ಎಂದರು.

ಚುನಾವಣೆಗೂ ಮುನ್ನವೇ ಸುಮಲತಾ ಅವರಿಗೆ ಬಿಜೆಪಿ ಬೇಷರತ್ ಬೆಂಬಲ ನೀಡಿದೆ. ಈಗ ಅವರು ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸಿದರೆ ಗೌರವ ಹೆಚ್ಚಾಗುತ್ತದೆ ಎಂದರು.

ಡ್ಯಾನ್ಸ್ ಮಾಡಿದ ಶೋಭಾ

ಬಿಜೆಪಿ ಸಂಭ್ರಮಾಚರಣೆ ವೇಳೆ ಕಾರ್ಯಕರ್ತರ ಒತ್ತಡಕ್ಕೆ ಮಣಿದ ಶೋಭಾ ಕರಂದ್ಲಾಜೆ ನೃತ್ಯ ಮಾಡಿ ಗಮನ ಸೆಳೆದರು. ಕಾರ್ಯಕರ್ತರು ಕೂಗಿದ ಮೋದಿ ಮೋದಿ ಘೋಷಣೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !