ಉಡುಪಿ: ಆದಿ ಉಡುಪಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿನ ಅನೈರ್ಮಲ್ಯ, ರಸ್ತೆ ದುರವಸ್ಥೆ ಸೇರಿದಂತೆ ಅವ್ಯವಸ್ಥೆ ಖಂಡಿಸಿ ವರ್ತಕರು ಮಂಗಳವಾರ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸಿದರು.
ಮಾರುಕಟ್ಟೆಯ ದುರವಸ್ಥೆ ಖಂಡಿಸಿ ಹಲವು ದಿನಗಳಿಂದ ಮಾರಾಟ ಸ್ಥಳದಲ್ಲಿ ಕಪ್ಪು ಬಾವುಟ ಕಟ್ಟಿ ವ್ಯಾಪಾರ ನಡೆಸಿದರೂ ಅಧಿಕಾರಿಗಳು ಸ್ಪಂದಿಸಿಲ್ಲ ಎಂದು ವರ್ತಕರು ಆರೋಪಿಸಿದರು.
ಎಪಿಎಂಸಿಯ ಜಾಗವನ್ನು ಕೆಲವು ವ್ಯಕ್ತಿಗಳಿಗೆ ಮಾರಾಟ ಮಾಡಲಾಗಿದೆ. 20ರಿಂದ 25 ವರ್ಷಗಳ ಕಾಲ ಇಲ್ಲೇ ವ್ಯಾಪಾರ ಮಾಡುತ್ತಿರುವವರಿಗೆ ನೀಡಿಲ್ಲ ಎಂದೂ ಪ್ರತಿಭಟನಕಾರರು ಆರೋಪಿಸಿದರು.
‘ಎಪಿಎಂಸಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಪ್ರತಿ ದಿನ ಕಸ ವಿಲೇವರಿ ಮಾಡದೆ ರಾಶಿ ಬಿದ್ದು, ಗಬ್ಬು ನಾರುತ್ತದೆ. ಶೌಚಾಲಯದಲ್ಲಿ ಒಂದು ಹನಿ ನೀರಿಲ್ಲ. ಒಟ್ಟಿನಲ್ಲಿ ಎಪಿಎಂಸಿ ಪ್ರಾಂಗಣ ಅವ್ಯವಸ್ಥೆಗಳ ಆಗರವಾಗಿದೆ’ ಎಂದು ವರ್ತಕ ಫಯಾಸ್ ಅಹಮ್ಮದ್ ಆರೋಪಿಸಿದರು.
ಕೆಲವು ವರ್ತಕರ ಶೆಡ್‌ಗಳನ್ನು ತೆರವುಗೊಳಿಸಲು ಈಚೆಗೆ ಜೆಸಿಬಿ ಯಂತ್ರ ತರಿಸಲಾಗಿತ್ತು. ನಾವು ರಸ್ತೆಯಲ್ಲಿ ಮಲಗಿ ಪ್ರತಿಭಟನೆ ಮಾಡಿರುವುದರಿಂದ ಅಧಿಕಾರಿಗಳು ಹಿಂದೆ ಸರಿದರು ಎಂದೂ ಹೇಳಿದರು.
ಮಳೆ ಬಂದರೆ ಎಪಿಎಂಸಿ ಆವರಣದಲ್ಲಿ ನೀರು ತುಂಬಿಕೊಳ್ಳುತ್ತದೆ. ಅದರಲ್ಲೇ ವ್ಯಾಪಾರ ಮಾಡುವ ಅನಿವಾರ್ಯತೆ ನಮಗಿದೆ. ವಾರದ ಸಂತೆಯ ದಿನ ಇಲ್ಲಿನ ಅವ್ಯವಸ್ಥೆ ಕಂಡು ಗ್ರಾಹಕರು ನಮ್ಮನ್ನು ಬೈಯುತ್ತಾರೆ ಎಂದು ವರ್ತಕ ಪ್ರಭು ಗೌಡ ತಿಳಿಸಿದರು.
ವರ್ತಕರಾದ ಚಂದಪ್ಪ, ಲಕ್ಷ್ಮಣ್, ಓಬಳೇಶ್, ಸಯ್ಯದ್ ಮತ್ತಿತರರು ಇದ್ದರು.
ಎಪಿಎಂಸಿ ಆವರಣದಲ್ಲಿ ಸಂಗ್ರಹವಾಗಿರುವ ಕಸ
ಎಪಿಎಂಸಿ ಆವರಣದಲ್ಲಿ ಮೂಲ ಸೌಕರ್ಯಕ್ಕೆ ಒತ್ತು ನೀಡಬೇಕು. ನಿವೇಶನ ಮಾರಾಟದಲ್ಲಿ ಅವ್ಯವಹಾರ ನಡೆದಿದ್ದು ಅನರ್ಹರಿಗೆ ಮಾರಾಟ ಮಾಡಲಾಗಿದೆ
ಸುಭಾಷಿತ್ ಕುಮಾರ್ ಅಧ್ಯಕ್ಷ ಕೃಷಿ ಉತ್ಪನ್ನ ಮಾರಾಟಗಾರರ ಒಕ್ಕೂಟ
ವಾಹನದಿಂದ ಕೆಳಗಿಳಿಯದ ಅಧಿಕಾರಿ
ವರ್ತಕರು ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ಸ್ಥಳಕ್ಕೆ ಎಪಿಎಂಸಿಯ ಪ್ರಭಾರ ಕಾರ್ಯದರ್ಶಿ ಗೋಪಾಲ್ ತಿಪ್ಪಣ್ಣ ಕಾಕನೂರ ಭೇಟಿ ನೀಡಿ ಯಾಕೆ ಪ್ರತಿಭಟನೆ ನಡೆಸುತ್ತಿದ್ದೀರಿ ಎಂದು ಪ್ರಶ್ನಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ವರ್ತಕರು ನಾವು 15 ದಿನಗಳಿಂದ ಕಪ್ಪು ಬಾವುಟ ಕಟ್ಟಿ ವ್ಯಾಪಾರ ನಡೆಸಿದರೂ ನಿಮ್ಮ ಗಮನಕ್ಕೆ ಬಂದಿಲ್ಲವೇ ಎಂದು ಪ್ರಶ್ನಿಸಿದರು. ಪ್ರತಿಭಟನೆ ನಡೆಸಿ ಜನರಿಗೆ ತೊಂದರೆ ನೀಡಬೇಡಿ ಎಂದ ಗೋಪಾಲ್ ಅವರು ವಾಹನದಿಂದ ಕೆಳಗಿಳಿಯದೆ ಕಚೇರಿಗೆ ತೆರಳಿದರು.