ಕಡೆಗೋಲು ಕೃಷ್ಣನಿಗೆ ಅರ್ಘ್ಯ ಸಮರ್ಪಣೆ

7
ಇಂದು ವಿಟ್ಲಪಿಂಡಿ ಉತ್ಸವ: ಚಿನ್ನದ ರಥದಲ್ಲಿ ಮೃಣ್ಮಯ ಮೂರ್ತಿಯ ಮೆರವಣಿಗೆ

ಕಡೆಗೋಲು ಕೃಷ್ಣನಿಗೆ ಅರ್ಘ್ಯ ಸಮರ್ಪಣೆ

Published:
Updated:
Deccan Herald

ಉಡುಪಿ: ಪೊಡೆವಿಗೊಡೆಯ ಶ್ರೀಕೃಷ್ಣನ ಊರು ಉಡುಪಿಯಲ್ಲಿ ಭಾನುವಾರ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಯಿತು.

ಭಾನುವಾರ ಮಧ್ಯರಾತ್ರಿ 11.48ಕ್ಕೆ ಪರ್ಯಾಯ ಪಲಿಮಾರು ಮಠದ ವಿದ್ಯಾಧೀಶ ಶ್ರೀಗಳು ಶ್ರೀಕೃಷ್ಣನಿಗೆ ಅರ್ಘ್ಯ ಪ್ರದಾನ ಮಾಡಿದರು. ಶ್ರೀಕೃಷ್ಣ ಮಠದಲ್ಲಿರುವ ತುಳಸಿಕಟ್ಟೆಗೆ ಶಂಖದ ಮೂಲಕ ಮೂರುಬಾರಿ ನೀರು, ತುಳಸಿ, ಹಾಲಿನ ಅರ್ಘ್ಯವನ್ನು ಸಮರ್ಪಿಸಲಾಯಿತು. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಾವಿರಾರು ಭಕ್ತರು ನೆರೆದಿದ್ದರು. ಎಲ್ಲೆಡೆ ಕೃಷ್ಣನ ಜಯಘೋಷ ಮೊಳಗಿತು.

ಇದಕ್ಕೂ ಮುನ್ನ ಶ್ರೀಕೃಷ್ಣನಿಗೆ ದಿನವಿಡೀ ವಿಶೇಷ ಪೂಜೆಗಳು ನಡೆದವು. ಬೆಳಿಗ್ಗೆ 6ಕ್ಕೆ ಲಕ್ಷಾರ್ಚನೆ, ಬೆಳಿಗ್ಗೆ 9ಕ್ಕೆ ಸುವರ್ಣ ತೊಟ್ಟಿಲಿನಲ್ಲಿ ಅಲಂಕೃತಗೊಂಡಿದ್ದ ಗೋಪಾಲನಿಗೆ ಪಲಿಮಾರು ವಿದ್ಯಾಧೀಶ ತೀರ್ಥರು ಲಕ್ಷ ತುಳಸಿ ಅರ್ಚನೆಯೊಂದಿಗೆ ಮಹಾಪೂಜೆ ನೆರವೇರಿಸಿದರು.

10ಕ್ಕೆ ಲಡ್ಡಿಗೆ ಮುಹೂರ್ತ ನಡೆಯಿತು. ಪಲಿಮಾರು ಶ್ರೀಗಳು ಹಾಗೂ ಅದಮಾರು ಕಿರಿಯ ಶ್ರೀಗಳು ಸ್ವತಃ ಲಡ್ಡುಗಳನ್ನು ತಯಾರಿಸಿದರು. ರಾಜಾಂಗಣದಲ್ಲಿ ನಡೆದ ಮುದ್ದುಕೃಷ್ಣರ ಸ್ಪರ್ಧೆಯಲ್ಲಿ 250ಕ್ಕೂ ಹೆಚ್ಚು ಬಾಲಕೃಷ್ಣರು ವೇಷ ಧರಿಸಿದ್ದರು.

ದೂರದೂರುಗಳಿಂದ ಸಾವಿರಾರು ಭಕ್ತರು ಶ್ರೀಕೃಷ್ಣ ಮಠಕ್ಕೆ ಭೇಟಿನೀಡಿದ್ದರಿಂದ ದರ್ಶನದ ಸಾಲು ರಾಜಾಂಗಣದವರೆಗೂ ಇತ್ತು. ಗಂಟೆಗಟ್ಟಲೆ ಸರತಿಯಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದು. ರಥಬೀದಿ ಕೃಷ್ಣನ ಭಕ್ತರಿಂದ ತುಂಬಿಹೋಗಿತ್ತು. ಹೂವಿನ ವ್ಯಾಪಾರಿಗಳು ರಥಬೀದಿಯ ಅಂದವನ್ನು ಮತ್ತಷ್ಟು ಹೆಚ್ಚಿಸಿದ್ದರು.

**

ಇಂದು ವಿಟ್ಲಪಿಂಡಿ ಉತ್ಸವ

ಕೃಷ್ಣ ಜನ್ಮಾಷ್ಟಮಿಯ ಮಾರನೆಯ ದಿನದ ವಿಟ್ಲಪಿಂಡಿ ಉತ್ಸವಕ್ಕೆ ರಥಬೀದಿ ಸಜ್ಜುಗೊಂಡಿದೆ. ಸೋಮವಾರ ಮಧ್ಯಾಹ್ನ ಚಿನ್ನದ ರಥೋತ್ಸವ ನಡೆಯಲಿದೆ. ಪರ್ಯಾಯ ಪಲಿಮಾರು ಶ್ರೀಗಳು ಶ್ರೀಕೃಷ್ಣನ ಮೃಣ್ಮಯ (ಮಣ್ಣಿನ) ಮೂರ್ತಿಯನ್ನು ಚಿನ್ನದ ರಥದಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿ ಮೆರವಣಿಗೆ ಮೂಲಕ ಮಧ್ವಸರೋವರದಲ್ಲಿ ಮೂರ್ತಿಯನ್ನು ವಿಸರ್ಜಿಸಲಿದ್ದಾರೆ. ಮಧ್ಯಾಹ್ನ 3ಕ್ಕೆ ಮೊಸರು ಕುಡಿಕೆ ಒಡೆಯುವ ಸ್ಪರ್ಧೆ ನಡೆಯಲಿದೆ. ಹುಲಿ ವೇಷಧಾರಿಗಳು ಪ್ರದರ್ಶನ ನೀಡಲಿದ್ದಾರೆ. ಇದಕ್ಕಾಗಿಯೇ ವೇದಿಕೆ ನಿರ್ಮಿಸಲಾಗಿದೆ. ಕಲಾ ತಂಡಗಳು ಉತ್ಸವದಲ್ಲಿ ಪಾಲ್ಗೊಳ್ಳಲಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !