ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ‘ದಿವ್ಯಕಲಾ’ ಕಲಾ ಪ್ರದರ್ಶನ ನಾಳೆ

ಪ್ರಸಿದ್ಧ ಕಲಾವಿದ ದ್ರಧವ್ರತ ಗೋರಿಕ್ ರಚಿಸಿರುವ ಚಿತ್ರಗಳು
Last Updated 2 ನವೆಂಬರ್ 2022, 12:50 IST
ಅಕ್ಷರ ಗಾತ್ರ

ಉಡುಪಿ: ಅಮೆರಿಕಾ ಮೂಲದ ಪ್ರಸಿದ್ಧ ಚಿತ್ರ ಕಲಾವಿದ ದ್ರಧವ್ರತ ಗೋರಿಕ್ ಅವರ ಚಿತ್ರಗಳ ಪ್ರದರ್ಶನ ನ.3ರಿಂದ 6ರವರೆಗೆ ಕುಂಜಿಬೆಟ್ಟುವಿನಲ್ಲಿರು ಅದಿತಿ ಗ್ಯಾಲರಿಯಲ್ಲಿ ನಡೆಯಲಿದೆ.

‘ದಿವ್ಯಕಲಾ’ ಕಲಾ ಪ್ರದರ್ಶನವನ್ನು ನ.3ರಂದು ಸಂಜೆ 5.15ಕ್ಕೆ ಮಣಿಪಾಲದ ಕಸ್ತೂರಬಾ ಮೆಡಿಕಲ್ ಕಾಲೇಜಿನ ಡೀನ್ ಡಾ.ಕೆ.ಶರತ್ ಕುಮಾರ್ ರಾವ್ ಉದ್ಘಾಟಿಸಲಿದ್ದಾರೆ. ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿರಲಿದ್ದಾರೆ ಎಂದು ಅದಿತಿ ಗ್ಯಾಲರಿಯ ಮ್ಯಾನೆಜಿಂಗ್ ಟ್ರಸ್ಟಿ ಡಾ.ಕಿರಣ್ ಆಚಾರ್ಯ ತಿಳಿಸಿದರು.

ನ.4 ರಿಂದ 6ರವರೆಗೆ ಬೆಳಿಗ್ಗೆ 10ರಿಂದ ಸಂಜೆ 7ರವರೆಗೆ ಕಲಾ ಪ್ರದರ್ಶನದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶವಿದೆ. ಚಿತ್ರಗಳ ಪ್ರದರ್ಶನದ ಜತೆಗೆ ಮಾರಾಟ ಕೂಡ ಇರಲಿದೆ.

ಕಲಾವಿದ ದ್ರಧವ್ರತ ಗೋರಿಕ್ ಅಮೆರಿಕದಲ್ಲಿ ಹುಟ್ಟಿ ಬೆಳೆದವರಾಗಿದ್ದು, ದಕ್ಷಿಣ ಭಾರತದ ಸಾಂಪ್ರದಾಯಿಕ ಕಲೆಗಳಲ್ಲಿ ತರಬೇತಿ ಪಡೆದ ಕಲಾವಿದರಾಗಿದ್ದಾರೆ. ಅವರ ಕಲಾಕೃತಿಗಳು ವಿಶಿಷ್ಟವಾಗಿದ್ದು ಬಹಳ ಅಪರೂಪದ್ದಾಗಿದೆ ಎಂದು ವಿವರ ನೀಡಿದರು.

ಪ್ರತಿಮಾ ಮಾಪನ, ಪ್ರತಿಮಾ ಶಾಸ್ತ್ರ, ಸಾಂಪ್ರದಾಯಿಕ ಚಿತ್ರಕಲೆ ಹಾಗೂ ವಾಸ್ತುಶಿಲ್ಪದ ವಿನ್ಯಾಸದಲ್ಲಿ ತರಬೇತಿ ಪಡೆದಿರುವ ದ್ರಧವ್ರತ ಗೋರಿಕ್ ಲಾಸ್ಟ್‌ ವ್ಯಾಕ್ಸ್‌ ಎರಕ ಹಾಗೂ ಕ್ಲೇ ಮಾಡೆಲಿಂಗ್‌ನಲ್ಲಿ ಕೌಶಲ ಹೊಂದಿದ್ದಾರೆ. ಭಾರತದಲ್ಲಿ 15 ವರ್ಷಗಳ ಪ್ರಯಾಣ ಮತ್ತು ಅಧ್ಯಯನ ಅವರಿಗೆ ಸ್ಪೂರ್ತಿನೀಡಿದ್ದು ಅತ್ಯುತ್ಕೃಷ್ಟ ಚಿತ್ರಗಳನ್ನು ರಚಿಸಿದ್ದಾರೆ ಎಂದು ಡಾ.ಕಿರಣ್ ಆಚಾರ್ಯ ತಿಳಿಸಿದರು.

ಧಾರ್ಮಿಕತೆ, ಶಾಸ್ತ್ರ ಹಾಗೂ ಸಂಪ್ರದಾಯ ಬದ್ಧವಾಗಿ ಚಿತ್ರಗಳನ್ನು ರಚಿಸುವಲ್ಲಿ ದ್ರಧವ್ರತ ಗೋರಿಕ್ ನಿಷ್ಣಾತರಾಗಿದ್ದು ಅವರ ಕುಂಚದಲ್ಲಿ ಅರಳಿರುವ ನಟರಾಜ, ನಾರಾಯಣ, ವಿಷ್ಣು, ಹನುಮಂತ, ಉಗ್ರ ನರಸಿಂಹ, ಗರುಡ ದೇವರು ಸೇರಿದಂತೆ ಹಲವು ಚಿತ್ರಗಳು ವಿಶೇಷವಾಗಿ ಗಮನ ಸೆಳೆಯುತ್ತವೆ.

ಚಿತ್ರಗಳಿಗೆ ಬಳಸಲಾಗಿರುವ ಪೇಪರ್, ಇಂಕ್‌ ಹಾಗೂ ಇತರ ಪರಿಕರಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳಲಾಗಿದ್ದು ಅತ್ಯುತ್ಕೃಷ್ಣ ಗುಣಮಟ್ಟ ಹೊಂದಿದೆ. ಬೆರಳೆಣಿಕೆ ಸಂಖ್ಯೆಯ ಚಿತ್ರಗಳನ್ನು ಮಾತ್ರ ರಚಿಸಲಾಗಿದ್ದು ಎಲ್ಲ ಚಿತ್ರಗಳಿಗೂ ದ್ರಧವ್ರತ ಗೋರಿಕ್ ಅವರ ಸಹಿಯೊಂದಿಗೆ ಪ್ರಮಾಣಪತ್ರ ಇರಲಿದೆ. ಪ್ರತಿ ಚಿತ್ರದ ವಿಶೇಷತೆಯನ್ನು ಒಳಗೊಂಡ ವಿವರ ಲಭ್ಯವಾಗಲಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT