ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ | 18 ಕಿ.ಮೀ ಆಟೊ ಚಲಾಯಿಸಿ ಗರ್ಭಿಣಿಯನ್ನು ಆಸ್ಪತ್ರೆಗೆ ಸೇರಿಸಿದ ಮಹಿಳೆ

ಮಧ್ಯರಾತ್ರಿ ಗರ್ಭಿಣಿಯ ನೋವಿಗೆ ಸ್ಪಂದನ
Last Updated 24 ಜುಲೈ 2020, 3:36 IST
ಅಕ್ಷರ ಗಾತ್ರ

ಉಡುಪಿ: ಮಧ್ಯರಾತ್ರಿ ಊರಿನ ಮಹಿಳೆಯೊಬ್ಬರಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಸ್ವತಃ ಆಟೊ ಚಲಾಯಿಸಿಕೊಂಡು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದಿದ್ದಾರೆ ಆಶಾ ಕಾರ್ಯಕರ್ತೆ ಹಾಗೂ ಆಟೊ ಚಾಲಕಿಯೂ ಆಗಿರುವ ರಾಜೀವಿ.

ಸೂಕ್ತ ಸಾರಿಗೆ ಸೌಲಭ್ಯಗಳಿಲ್ಲದ ಪೆರ್ಣಂಕಿಲ ಗ್ರಾಮದಿಂದ ಸುಮಾರು 18 ಕಿ.ಮೀ ದೂರದ ಉಡುಪಿ ನಗರದಲ್ಲಿರುವ ಕೂಸಮ್ಮ ಶಂಭುಶೆಟ್ಟಿ ಹಾಜಿ ಅಬ್ದುಲ್ಲ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ಗರ್ಭಿಣಿಯನ್ನು ಕರೆತಂದ ರಾಜೀವಿ ಅವರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಈ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಮಧ್ಯರಾತ್ರಿ 3.15ರ ಸುಮಾರಿಗೆ ಪೆರ್ಣಂಕಿಲದ ಶ್ರೀಲತಾ ಎಂಬುವರು ಕರೆ ಮಾಡಿ ಹೆರಿಗೆ ನೋವು ಹೆಚ್ಚಾಗಿರುವ ವಿಚಾರ ತಿಳಿಸಿದರು. ತಕ್ಷಣ ಆಟೊ ತೆಗೆದುಕೊಂಡು ಅವರನ್ನು ಉಡುಪಿಯ ಬಿ.ಆರ್‌.ಶೆಟ್ಟಿ ಆಸ್ಪತ್ರೆಗೆ ದಾಖಲಿಸಿದೆ. ಗುರುವಾರ ಶ್ರೀಲತಾಗೆ ಹೆಣ್ಣುಮಗು ಜನಿಸಿದೆ. ತಾಯಿ, ಮಗು ಆರೋಗ್ಯವಾಗಿದ್ದಾರೆ’ ಎಂದು ಸಂತಸ ವ್ಯಕ್ತಪಡಿಸಿದರು ರಾಜೀವಿ.

‘ಹೆಣ್ಣಾಗಿ ಮತ್ತೊಂದು ಹೆಣ್ಣು ಸಮಸ್ಯೆಯಲ್ಲಿದ್ದಾಗ ಸ್ಪಂದಿಸಬೇಕಾಗಿರುವುದು ನನ್ನ ಕರ್ತವ್ಯ.ಹೆರಿಗೆಗೆ ಆಟೊ ಬಾಡಿಗೆ ಪಡೆಯುವುದಿಲ್ಲ. ಹೆರಿಗೆಯಾದ ಬಳಿಕ ಕರೆ ಮಾಡಿ ಮಗು ಜನಿಸಿರುವ ವಿಷಯ ತಿಳಿಸಿ ಧನ್ಯವಾದ ಹೇಳುವಾಗ ಸಿಗುವ ಆನಂದವೇ ಬಾಡಿಗೆ ಎಂದು ನಕ್ಕರು’ ರಾಜೀವಿ.

‘ಪೆರ್ಣಂಕಿಲ ಗ್ರಾಮದಲ್ಲಿ ಹಿಂದೆ ಬಸ್‌ ಸೌಲಭ್ಯಗಳು ಇರಲಿಲ್ಲ. ರಸ್ತೆಗಳು ಹದಗೆಟ್ಟು ಆಟೊ ಸಂಚರಿಸಲು ಮಾತ್ರ ಸಾಧ್ಯವಾಗುತ್ತಿತ್ತು. ಆಗ, ಹವ್ಯಾಸಕ್ಕಾಗಿ ಪತಿಯ ಸಹಕಾರದಿಂದ ಆಟೊ ಚಾಲನೆ ಮಾಡುವುದನ್ನು ಕಲಿತೆ. ಮುಂದೆ ಇದೇ ವೃತ್ತಿ ಕುಟುಂಬಕ್ಕೆ ಆಧಾರವಾಯಿತು. 20 ವರ್ಷದಿಂದ ಆಟೊ ಓಡಿಸುತ್ತಿದ್ದೇನೆ’ ಎಂದರು ಅವರು.

‘5 ವರ್ಷಗಳ ಹಿಂದೆ ಪತಿ ಅನಾರೋಗ್ಯದಿಂದ ಮೃತರಾದರು. ಮಗಳ ಮದುವೆಯಾಗಿದ್ದು, ಮಗ ಸಣ್ಣ ಕೆಲಸದಲ್ಲಿದ್ದಾನೆ. ಜೀವನ ನಿರ್ವಹಣೆಗೆ ಬೆಳಿಗ್ಗಿನಿಂದ ಮಧ್ಯಾಹ್ನದವರೆಗೂ ಆಶಾ ಕಾರ್ಯಕರ್ತೆಯಾಗಿ, ನಂತರ ರಾತ್ರಿವರೆಗೂ ಆಟೊ ಚಾಲಕಿಯಾಗಿ ದುಡಿಯುತ್ತಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT