ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಂದಾಪುರದಲ್ಲಿ ಕಡಲಾಮೆ ಸಂರಕ್ಷಣಾ ಕೇಂದ್ರ

ಕರ್ನಾಟಕ ಜೀವ ವೈವಿಧ್ಯಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ
Last Updated 20 ಫೆಬ್ರುವರಿ 2021, 13:16 IST
ಅಕ್ಷರ ಗಾತ್ರ

ಉಡುಪಿ:ಸಮುದ್ರದಲ್ಲಿ ಗಾಯಗೊಳ್ಳುವ ಆಮೆ ಹಾಗೂ ಕಡಲ ಜೀವಿಗಳ ರಕ್ಷಣೆ ಹಾಗೂ ಚಿಕಿತ್ಸೆಗೆ ಕುಂದಾಪುರದಲ್ಲಿ ಸಂರಕ್ಷಣಾ ಕೇಂದ್ರ ಸ್ಥಾಪಿಸುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುವುದು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು.

ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜೀವ ವೈವಿಧ್ಯಮಂಡಳಿ ಸಭೆಯ ಬಳಿಕ ಮಾತನಾಡಿದ ಅವರು, ಕುಂದಾಪುರ ತಾಲ್ಲೂಖಿನ ಕೋಡಿ ತೀರದಲ್ಲಿ ಕಡಲಾಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಇಡುತ್ತಿದ್ದು, ಸ್ಥಳೀಯರು ಹಾಗೂ ಸಂಘ ಸಂಸ್ಥೆಗಳ ಕಾರ್ಯಕರ್ತರು ಮೊಟ್ಟೆಗಳ ರಕ್ಷಣೆಗೆ ಮುಂದಾಗಿದ್ದಾರೆ. ಈ ಪ್ರದೇಶವನ್ನು ಸಂರಕ್ಷಿಸಲು ನಿರ್ಧರಸಲಾಗಿದೆ. ಜತೆಗೆ, ಕಡಲಾಮೆಗಳ ರಕ್ಷಣೆ ಹಾಗೂ ಗಾಯಗೊಂಡ ಕಡಲಾಮೆಗಳಿಗೆ ಚಿಕಿತ್ಸೆಗೆ ಶೀಘ್ರ ಕೇಂದ್ರ ಆರಂಭಿಸುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಾಗುವುದು ಎಂದರು.

ಮೇ 22ರಂದು ಅಂತರರಾಷ್ಟ್ರೀಯ ಜೀವವೈವಿಧ್ಯ ದಿನವಾಗಿದ್ದು, ರಾಜ್ಯದ ಎಲ್ಲ ಗ್ರಾಮ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿಗಳಲ್ಲಿ ಆಚರಿಸಲು ನಿರ್ಧರಿಸಲಾಗಿದೆ. ಜೀವವೈವಿಧ್ಯ ದಿನವನ್ನು ಸಾಂಕೇತಿಕವಾಗಿ ಆಚರಿಸದೆ ಅರಣ್ಯ ಜೀವ ವೈವಿಧ್ಯಕ್ಕೆ ಪೂರಕವಾದ ಚಟುವಟಿಕೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಎಲ್ಲ ಪಂಚಾಯಿತಿಗಳ ಜೀವ ವೈವಿಧ್ಯ ಸಮಿತಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಎಂದರು.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನತಾ ಜೀವ ವೈವಿಧ್ಯ ಸಮಿತಿ ಹಾಗೂ ಉಪ ಸಮಿತಿಗಳು ರಚನೆಯಾಗಿದ್ದರೂ, ಸಮಿತಿ ಅಸ್ತಿತ್ವದಲ್ಲಿ ಇದೆ ಎಂಬುದೇ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಸಮಿತಿಯ ಕಾರ್ಯ ವಿಧಾನದ ಬಗ್ಗೆ ವ್ಯಾಪಕ ಪ್ರಚಾರದ ಅಗತ್ಯವಿದೆ ಎಂದು ಹೇಳಿದ ಅಶೀಸರ, ಉಡುಪಿ ಜಿಲ್ಲೆಯ ಡೀಮ್ಡ್‌ ಫಾರೆಸ್ಟ್‌ ರಕ್ಷಣೆಗೆ ವಿಶೇಷ ಯೋಜನೆ ರೂಪಿಸಲಾಗುತ್ತಿದ್ದು, ಮೇ ಅಂತ್ಯದೋಳಗೆ ಸ್ಪಷ್ಟ ರೂಪ ಸಿಗಲಿದೆ ಎಂದರು.

ಜೀವ ವೈವಿಧ್ಯ ಮಂಡಳಿ ಮೂಲಕ ಅರಣ್ಯ ಇಲಾಖೆ ಹಾಗೂ ಔಷಧಿ ಮೂಲಿಕಾ ಪ್ರಾಧಿಕಾರದ ಸಹಕಾರದೊಂದಿಗೆ 5 ವರ್ಷಗಳಲ್ಲಿ ಉಡುಪಿ ಜಿಲ್ಲೆಯಲ್ಲಿರುವ ಅಪರೂಪದ ತಳಿ, ಸಸ್ಯ ಪ್ರಬೇಧಗಳನ್ನು ಗುರುತಿಸಿ ವರದಿ ಸಿದ್ಧಪಡಿಸಲಾಗಿದೆ. ಆದರೆ, ಜಿಲ್ಲೆಗೆ ಸಂಬಂಧಪಟ್ಟ ಮಾಹಿತಿಗಳು ಸ್ಥಳೀರಿಗೆ ಸಿಗುತ್ತಿಲ್ಲ ಎಂಬ ಬೇಸರವಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಏನೆಲ್ಲ ವಿಶೇಷತೆಗಳಿವೆ ಎಂಬ ಮಾಹಿತಿಯನ್ನು ಕನ್ನಡ ಭಾಷೆಯಲ್ಲಿ ಸಂಕ್ಷಿಪ್ತವಾಗಿ ಮುದ್ರಿಸಿ ಪ್ರತಿಯೊಬ್ಬರಿಗೂ ಸಿಗುವಂತೆ ಮಾಡುವ ಉದ್ದೇಶವಿದೆ ಎಂದರು.

ಸಭೆಯಲ್ಲಿ ಡಿಎಫ್‌ಒ ಅಶೀಶ್‌ ರೆಡ್ಡಿ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಅರಣ್ಯ ಅಧಿಕಾರಿಗಳಾದ ಕ್ಲಿಫರ್ಡ್ ಲೊಬೊ, ಪ್ರಶಾಂತ್, ಲೋಹಿತ್‌, ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಇದ್ದರು.

‘ಮಂಕಿ ಪಾರ್ಕ್‌ ಕಾರ್ಯಸಾಧುವಲ್ಲ’

ಮಲೆನಾಡಿನಲ್ಲಿ ಮಂಗಗಳ ಹಾವಳಿ ಮಿತಿಮೀರಿದ್ದು ರೈತರು ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಈ ಸಮಸ್ಯೆಗೆ ಪರಿಹಾರವಾಗಿ ಮಂಕಿ ಪಾರ್ಕ್‌ ಸ್ಥಾಪನೆ ವಿಚಾರ ಬಹಳಷ್ಟು ಚರ್ಚೆಯಲ್ಲಿತ್ತು. ಆದರೆ, ಈ ಯೋಜನೆ ಕಾರ್ಯಸಾಧುವಲ್ಲ. ಗುಂಪು ಗುಂಪಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವ ಮಂಗಗಳನ್ನು ಒಂದೆಡೆ ಬಂಧಿಸಿಡಲು ಸಾಧ್ಯವಿಲ್ಲ. ಜತೆಗೆ, ಮಂಕಿ ಪಾರ್ಕ್‌ ಸ್ಥಾಪನೆಗೆ ಗ್ರಾಮಸ್ಥರಿಂದಲೇ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಬಿಡಲಾಗಿದೆ. ಮಂಗಗಳಿಂದ ಬೆಳೆ ಹಾನಿಯಾದರೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇದುವರೆಗೂ ಮಂಗಗಳಿಂದ ಬೆಳೆ ಹಾನಿಯಾದರೆ ಪರಿಹಾರ ಸಿಗುತ್ತಿರಲಿಲ್ಲ ಎಂದು ಅನಂತ ಹೆಗಡೆ ಅಶೀಸರ ತಿಳಿಸಿದರು.

‘15 ಮತ್ಸ್ಯಧಾಮಗಳ ನಿರ್ಮಾಣ’

ಅಪರೂಪದ ಮೀನಿನ ತಳಿಗಳು ಇರುವ ರಾಜ್ಯದ 11 ಪ್ರದೇಶಗಳನ್ನು ಈಗಾಗಲೇ ಮತ್ಸ್ಯಧಾಮಗಳು ಎಂದು ಘೋಷಿಸಲಾಗಿದೆ. ಇದರಲ್ಲಿ ಉಡುಪಿ ಜಿಲ್ಲೆಯ ಸೀತಾನದಿ ಪ್ರದೇಶವೂ ಸೇರಿದೆ. ಈಚೆಗೆ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಮತ್ತೆ ರಾಜ್ಯದ 15 ಸ್ಥಳಗಳನ್ನು ಮತ್ಸ್ಯಧಾಮಗಳನ್ನಾಗಿ ಮಾಡಲು ನಿರ್ಧರಿಸಲಾಗಿದೆ ಎಂದು ಅಶೀಸರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT