ಸೋಮವಾರ, ಸೆಪ್ಟೆಂಬರ್ 28, 2020
20 °C
ಪ್ರವಾಹ ಸಾಧ್ಯತೆಯ ಪ್ರದೇಶದಲ್ಲಿರುವವರನ್ನು ಸ್ಥಳಾಂತರಿಸಿ

ಕೊಡಗು | ಕಹಿ ಘಟನೆ ಮರುಕಳಿಸದಿರಲಿ: ಸಚಿವ ಆರ್‌.ಅಶೋಕ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಪ್ರವಾಹದಿಂದ ಸಾವು ನೋವುಗಳಾಗದಂತೆ ಎಚ್ಚರಿಕೆ ವಹಿಸಬೇಕು. ಕೊಡಗಿನಲ್ಲಾದ ಕಹಿ ಘಟನೆ ಜಿಲ್ಲೆಯಲ್ಲಿ ಮರುಕಳಿಸಬಾರದು ಎಂದು ಕಂದಾಯ ಸಚಿವ ಆರ್.ಅಶೋಕ್ ಅಧಿಕಾರಿಗಳಿಗೆ ಸೂಚಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಳೆ ಹಾನಿ ಹಾಗೂ ಪ್ರಾಕೃತಿಕ ವಿಕೋಪ ಕುರಿತ ಸಭೆಯಲ್ಲಿ ಮಾತನಾಡಿ, ಪೂರ್ವ ನಿಯೋಜಿತ ಯೋಜನೆಯಿಂದ ಪ್ರಾಕೃತಿಕ ವಿಕೋಪ ಎದುರಾದಾಗ ಅನಾಹುತ ತಪ್ಪಿಸಲು ಸಾಧ್ಯವಿದೆ. ಜಿಲ್ಲೆಯಲ್ಲಿ 10 ವರ್ಷಗಳಿಂದ ಅವಘಡಗಳು ಸಂಭವಿಸಿರುವ ಪ್ರದೇಶಗಳನ್ನು ಗುರುತಿಸಿ, ಮುನ್ನೆಚ್ಚರಿಕೆ ಕೈಗೊಳ್ಳಿ ಎಂದು ಸಚಿವರು ಸೂಚಿಸಿದರು.

ಕೊಡಗಿನಲ್ಲಿ ಭೂಕುಸಿತವಾದ ಜಾಗದಲ್ಲಿ ವಾಸವಿದ್ದ ಅರ್ಚಕರ ಕುಟುಂಬಕ್ಕೆ 3 ತಿಂಗಳ ಹಿಂದೆಯೇ ಸ್ಥಳಾಂತರಕ್ಕೆ ನೋಟಿಸ್‌ ನೀಡಲಾಗಿತ್ತು. ಅವರ ನಿರ್ಲಕ್ಷ್ಯದಿಂದ ದುರ್ಘಟನೆ ಸಂಭವಿಸಿದೆ. ಅಂತಹ ಘಟನೆಗಳು ಜಿಲ್ಲೆಯಲ್ಲಿ ಮರುಕಳಿಸಬಾರದು. ಹಾಗಾಗಿ, ಸಮುದ್ರ ಹಾಗೂ ನದಿಪಾತ್ರದಲ್ಲಿರುವವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದರು.

ಪ್ರವಾಹ ಪರಿಹಾರ ಕಾಮಗಾರಿಗೆ ಜಿಲ್ಲಾಡಳಿತದ ವಿಪತ್ತು ಪರಿಹಾರ ಖಾತೆಗೆ ಹೆಚ್ಚುವರಿ ₹ 5 ಕೋಟಿ ಬಿಡುಗಡೆ ಮಾಡಲಾಗಿದೆ. ಜತೆಗೆ, ಪ್ರವಾಹ ಕಾರ್ಯಾಚರಣೆಗೆ ಸುರಕ್ಷತಾ ಪರಿಕರಗಳ ಖರೀದಿಗೆ ಅಗತ್ಯ ಹಣ ಬಿಡುಗಡೆ ಮಾಡಲಾಗಿದೆ ಎಂದರು.

ಮಳೆಗೆ ಮನೆ ಬಿದ್ದರೆ ₹ 5 ಲಕ್ಷ, ಭಾಗಶಃ ಮನೆಗೆ ಹಾನಿಯಾದರೆ ₹ 3 ಲಕ್ಷ, ಮನೆಗೆ ನೀರು ನುಗ್ಗಿದರೆ ₹ 10,000 ಪರಿಹಾರ ನೀಡಲಾಗುವುದು. ಪಡುಬಿದ್ರಿ ಬೀಚ್‌ನಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ತಡೆಗೊಡೆ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಲಾಗುವುದು ಎಂದು ತಿಳಿಸಿದರು.

ಕಾರ್ಕಳದಲ್ಲಿ ₹ 10 ಕೋಟಿ ವೆಚ್ಚದಲ್ಲಿ ವಿಪತ್ತು ನಿರ್ವಹಣಾ ಪರಿಹಾರ ಕೇಂದ್ರ ಸ್ಥಾಪಿಸಲಾಗುವುದು. ಸುಸಜ್ಜಿತ ಆಸ್ಪತ್ರೆ, ಸಮುದಾಯ ಭವನ, ತಂಗಲು ಪ್ರತ್ಯೇಕ ವ್ಯವಸ್ಥೆ ಸೇರಿದಂತೆ ಅಗತ್ಯ ಸೌಲಭ್ಯಗಳು ಕೇಂದ್ರದಲ್ಲಿರಲಿವೆ. ಮಳೆಗಾಲದ 4 ತಿಂಗಳು ಪರಿಹಾರ ಕಾರ್ಯಕ್ಕೆ ಬಳಕೆಮಾಡಿ, ಉಳಿದ ಅವಧಿಯಲ್ಲಿ ಸರ್ಕಾರಿ ಕಾರ್ಯಕ್ರಮಗಳಿಗೆ ಬಳಸುವ ಉದ್ದೇಶವಿದೆ ಎಂದರು.

ಪ್ರಾಕೃತಿಕ ವಿಕೋಪ ಎದುರಿಸಲು ಜಿಲ್ಲಾ, ತಾಲ್ಲೂಕು ಹಾಗೂ ಗ್ರಾಮ ಮಟ್ಟದಲ್ಲಿ ಕಾರ್ಯಪಡೆ ರಚಿಸಿ, ನೋಡೆಲ್ ಅಧಿಕಾರಿಗಳನ್ನು ನೇಮಿಸಿ. ಕಾರ್ಯಪಡೆಗಳಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಇರಲಿ, 15 ದಿನಕ್ಕೊಮ್ಮ ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿ ಎಂದರು.

ಬಿತ್ತನೆ ಬೀಜ, ರಸಗೊಬ್ಬರ ಸಮಸ್ಯೆ ಎದುರಾಗಬಾರದು. ಬೆಳೆ ಹಾನಿ ಸಮೀಕ್ಷೆ ನಡೆಸಿ, ಅಂದಾಜು ನಷ್ಟದ ವಿವರವನ್ನು ಸರ್ಕಾರಕ್ಕೆ ಸಲ್ಲಿಸಿ. ಸಂತ್ರಸ್ತರಿಗೆ ಸೂಕ್ತ ಪರಿಹಾರ ವಿತರಿಸಿ. ಜಿಲ್ಲೆಯಲ್ಲಿ 13 ಕಡೆ ಕಡಲ್ಕೊರೆತ ಸ್ಥಳಗಳನ್ನು ಗುರುತಿಸಿದ್ದು, ಶಾಶ್ವತ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.

ಸಚಿವ ಕೋಟ ಶ್ರೀನಿವಾಸ ಪೂಜಾರಿ ಕಳೆದ ಬಾರಿಯ ಮನೆ ಹಾನಿಗೆ ಮೊದಲ ಕಂತು ಬಿಡುಗಡೆ ಆಗಿದ್ದು, ಬಾಕಿ ಕಂತು ಬಿಡುಗಡೆಗೆ ಒತ್ತಾಯಿಸಿದರು.

ಉಡುಪಿ ಶಾಸಕ ರಘುಪತಿ ಭಟ್, ಕಡಲ್ಕೊರೆತ ತಡೆಗೆ ಗುಣಮಟ್ಟದ ಶಾಶ್ವತ ಕಾಮಗಾರಿ ಮಾಡಲು ಮನವಿ ಮಾಡಿದರು.

ಕಾರ್ಕಳ ಶಾಸಕ ಸುನೀಲ್ ಕುಮಾರ್ ‘ಮಳೆಯಿಂದ ಗ್ರಾಮೀಣ ಭಾಗದ ರಸ್ತೆ ಸೇತುವೆ, ಶಾಲಾ ಕಾಂಪೌಂಡ್ ಹಾಳಾಗಿದ್ದು, ತುರ್ತು ದುರಸ್ತಿಗೆ ಆಗ್ರಹಿಸಿದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ‘ನದಿ ಕೊರೆತೆದಿಂದ ಸಹ ಹಾನಿಯಾಗಿದ್ದು, ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು.

ಜಿಲ್ಲಾಧಿಕಾರಿ ಜಿ.ಜಗದೀಶ್ ಎಸ್‌ಡಿಆರ್‌ಎಫ್‌ ತಂಡವನ್ನು ಜಿಲ್ಲೆಯಲ್ಲಿ ಕೇಂದ್ರೀಕೃತಗೊಳಿಸಿದರೆ, ತುರ್ತು ಸಂದರ್ಭ ಕರಾವಳಿಯ ಜಿಲ್ಲೆಗಳಲ್ಲಿ ರಕ್ಷಣಾ ಕಾರ್ಯಕ್ಕೆ ಅನುಕೂಲವಾಗಲಿದೆ ಎಂದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗಡೆ, ಜಿಲ್ಲಾ ಪಂಚಾಯಿತಿ ಸಿಇಒ ಪ್ರೀತಿ ಗೆಹ್ಲೋಟ್‌, ಎಸ್‌ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು ಇದ್ದರು.

ಉಸ್ತುವಾರಿ ಸಚಿವರ ಗೈರು 

ಕಂದಾಯ ಸಚಿವರ ಪ್ರವಾಸ ಸಂದರ್ಭ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅವರ ಗೈರು ಎದ್ದು ಕಾಣುತ್ತಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಅಶೋಕ್‌, ಬಸವರಾಜ ಬೊಮ್ಮಾಯಿ ಅವರು ಜಿಎಸ್‌ಟಿ ಸಭೆಯಲ್ಲಿ ಭಾಗವಹಿಸಬೇಕಾಗಿದ್ದರಿಂದ ಉಡುಪಿ ಪ್ರವಾಸಕ್ಕೆ  ಬರಲಿಲ್ಲ. ಇನ್ನೆರಡು ದಿನಗಳಲ್ಲಿ ಉಡುಪಿಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ವೀಕ್ಷಣೆ ಮಾಡಲಿದ್ದಾರೆ. ಈಗಾಗಲೇ ವಿಡಿಯೋ ಕಾನ್ಫರೆನ್ಸ್‌ ಮೂಲಕ ಜಿಲ್ಲೆಯ ವಾಸ್ತವ ಚಿತ್ರಣ ಪಡೆದುಕೊಂಡಿದ್ದಾರೆ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು