ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಕ್ಷಗಾನ ಕೇಂದ್ರಕ್ಕೆ ಮಾಹೆ ಅಗತ್ಯ ನೆರವು

ಮಾಹೆ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್ ಭರವಸೆ
Last Updated 7 ಡಿಸೆಂಬರ್ 2021, 15:14 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯ ಕಲೆ, ಸಂಸ್ಕೃತಿ ಹಾಗೂ ಸಂಪ್ರದಾಯವನ್ನು ಉಳಿಸಿ ಬೆಳೆಸುವುದು ಇಂದಿನ ತುರ್ತು ಅಗತ್ಯ ಎಂದು ಭಾವಿಸಿರುವ ಮಣಿಪಾಲದ ಮಾಹೆ ವಿಶ್ವವಿದ್ಯಾಲಯವು ಯಕ್ಷಗಾನ ಕೇಂದ್ರ ಸೇರಿದಂತೆ 4 ಸಂಸ್ಥೆಗಳನ್ನು ಪೋಷಿಸುತ್ತಿದೆ ಎಂದು ಮಾಹೆ ವಿಶ್ವವಿದ್ಯಾಲಯದ ಸಹ ಕುಲಾಧಿಪತಿ ಡಾ.ಎಚ್‌.ಎಸ್‌.ಬಲ್ಲಾಳ್ ತಿಳಿಸಿದರು.

ಇಂದ್ರಾಳಿಯ ಯಕ್ಷಗಾನ ಕೇಂದ್ರದಲ್ಲಿ ಮಂಗಳವಾರ ರಾಷ್ಟ್ರಮಟ್ಟದ ಯಕ್ಷಗಾನ ತರಬೇತಿ ಕಮ್ಮಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ‘ಕೋಟ ಶಿವರಾಮ ಕಾರಂತರು ಹುಟ್ಟಿಹಾಕಿದ ಯಕ್ಷಗಾನ ಕಲಾಕೇಂದ್ರವು ಶ್ರೇಷ್ಟ ಗುರು ವರ್ಗದ ಪರಂಪರೆ ಹೊಂದಿದೆ. ಯಕ್ಷ ಗುರು ಸಂಜೀವ ಸುವರ್ಣರು ಗುರುಕುಲ ಮಾದರಿಯಲ್ಲಿ ಯಕ್ಷ ಶಿಕ್ಷಣ ನೀಡುತ್ತಾ ಕೇಂದ್ರದ ಉನ್ನತಿಗೆ ಶ್ರಮಿಸುತ್ತಿದ್ದಾರೆ ಎಂದರು.

ಈ ಮಧ್ಯೆ ವೇತನ ಸಾಲುತ್ತಿಲ್ಲ ಎಂಬ ಕಾರಣಕ್ಕೆ ಯಕ್ಷಗಾನ ಕೇಂದ್ರದ ಹಲವು ಗುರುಗಳು ಹಾಗೂ ಸಿಬ್ಬಂದಿ ಉದ್ಯೋಗ ತ್ಯಜಿಸುತ್ತಿರುವ ವಿಚಾರ ಗಮನಕ್ಕೆ ಬಂದಿದ್ದು, ವೇತನ ಹೆಚ್ಚಳ ಸೇರಿದಂತೆ ಯಕ್ಷಗಾನ ಕೇಂದ್ರಕ್ಕೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನು ಒಗಿಸಲು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಮಾಹೆಯಲ್ಲಿ ಕಲಿಯುಲ್ಲಿರುವ ಹೊರ ರಾಜ್ಯದ ಎಂಜಿನಿಯರಿಂಗ್ ವಿದ್ಯಾರ್ಥಿಗಳು ಯಕ್ಷಗಾನ ಕೇಂದ್ರದಲ್ಲಿ ಯಕ್ಷ ಶಿಕ್ಷಣ ಪಡೆಯುತ್ತಿರುವುದು ಸಂತಸದ ವಿಚಾರ. ರಾಷ್ಟ್ರೀಯ ಶಿಕ್ಷಣ ನೀತಿಯಡಿ ವಿದ್ಯಾರ್ಥಿಗಳು ಯಕ್ಷ ಶಿಕ್ಷಣ ಪಡೆಯಲು ಬಯಸಿದರೆ ಮಾಹೆ ಅವಕಾಶ ನೀಡಲಿದೆ. ಕರಾವಳಿಯ ಕಲೆ, ಸಂಸ್ಕೃತಿ ಹೊರ ರಾಜ್ಯಗಳಿಗೆ ವಿಸ್ತರಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.

ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮಾತನಾಡಿ, ಯಕ್ಷಗಾನ ಕಲಾಕೇಂದ್ರದಲ್ಲಿ ಪಾರಂಪರಿಕ ಹಾಗೂ ಗುಣಮಟ್ಟದ ಯಕ್ಷಗಾನವನ್ನು ಶಿಬಿರಾರ್ಥಿಗಳಿಗೆ ಕಲಿಸಿಕೊಡಲಾಗುತ್ತಿದೆ. ಪ್ರಸ್ತುತ ಯಕ್ಷಗಾನ ಮೇಳಗಳಲ್ಲಿ ಪ್ರದರ್ಶನ ನೀಡುತ್ತಿರುವ ಹೆಚ್ಚಿನ ಕಲಾವಿದರು ಯಕ್ಷಗಾನ ಕೇಂದ್ರದಲ್ಲಿ ಗುರು ಸಂಜೀವ ಸುವರ್ಣ ಅವರಿಂದ ಕಲೆಯನ್ನು ಕಲಿತವರು ಎಂಬುದು ಹೆಮ್ಮೆಯ ವಿಚಾರ. ಮುಂದಿನ ವರ್ಷ ಕಮ್ಮಟ ಆಯೋಜಿಸುವಾಗ ತಿಂಗಳೆಯಲ್ಲಿಯೂ ಶಿಬಿರ ನಡೆಸಿದರೆ ಅಗತ್ಯ ಪ್ರೋತ್ಸಹ ನೀಡುವುದಾಗಿ ಭರವಸೆ ನೀಡಿದರು.

ಉದ್ಯಮಿ ತಲ್ಲೂರು ಶಿವರಾಮ ಶೆಟ್ಟಿ ‘ಗುರುಕುಲ ಮಾದರಿಯಲ್ಲಿ ಯಕ್ಷಗಾನ ಕೇಂದ್ರ ಯಕ್ಷಶಿಕ್ಷಣ ನೀಡುತ್ತಿದ್ದು, 68 ವರ್ಷದ ಗುರು ಬನ್ನಂಜೆ ಸುವರ್ಣರು ಇಂದಿಗೂ ರಂಗದ ಮೇಲೆ ಕುಣಿಯುತ್ತ ಮಕ್ಕಳಿಗೆ ಯಕ್ಷಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದರು.

ರಾಷ್ಟ್ರೀಯ ಮಟ್ಟದ ಯಕ್ಷಗಾನ ಕಮ್ಮಟದಲ್ಲಿ ಭಾಗವಹಿಸಿದ್ದ 14 ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಲಾಯಿತು. ವಿದ್ಯಾರ್ಥಿಗಳು ಅನುಭವ ಹಂಚಿಕೊಂಡರು. ಬಳಿಕ ಪೂರ್ಣ ಪ್ರಜ್ಞ ಸಂಧ್ಯಾ ಕಾಲೇಜು ನಿವೃತ್ತ ಪ್ರಾಂಶುಪಾಲರಾದ ಡಾ.ಮಾಧವಿ ಭಂಡಾರಿ ಅವರ ಹಿಂದಿ ಅನುವಾದಿತ ಧ್ವಜಪುರದ ನಾಗಪ್ಪ ರಚಿತ ‘ನಳ ಕಾರ್ಕೋಟಕ’ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಲಾಯಿತು.

ಕಾರ್ಯಕ್ರಮದಲ್ಲಿ ಯಕ್ಷಗಾನ ಕಲಾಕೇಂದ್ರದ ಸಲಹಾ ಸಮಿತಿ ಅಧ್ಯಕ್ಷ ಡಾ.ಪಿ.ಎಲ್‌.ಎನ್‌.ರಾವ್‌, ಯಕ್ಷಗುರು ಬನ್ನಂಜೆ ಸಂಜೀವ ಸುವರ್ಣ, ಆಡಳಿತಾಧಿಕಾರಿ ಡಾ.ಬಿ.ಜಗದೀಶ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT