ಮಂಗಳವಾರ, ಮಾರ್ಚ್ 21, 2023
28 °C

50 ಸಾವಿರ ವರ್ಷಗಳ ನಂತರ ಫೆ.1ರಂದು ಸಿ/2022 ಇ3 ಧೂಮಕೇತು ದರ್ಶನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಖಗೋಳ ವ್ಯೂಹದ ಅಪರೂಪದ ಅತಿಥಿಯಾಗಿರುವ ಸಿ/2022 ಇ3 ಧೂಮಕೇತು ಫೆ.1 ರಂದು ಮುಂಜಾನೆಯ ಆಕಾಶದಲ್ಲಿ ಕಾಣಿಸಿಕೊಳ್ಳಲಿದ್ದು ಖಗೋಳಾಸಕ್ತರು ವೀಕ್ಷಣೆ ಮಾಡಬಹುದು.

ಈ ಬಾರಿ ಕಾಣಿಸಿಕೊಳ್ಳುವ ಸಿ/2022 ಇ3 ಧೂಮಕೇತು ಮತ್ತೆ ಕಾಣಿಸಿಕೊಳ್ಳುವುದು ಬರೋಬ್ಬರಿ 50,000 ವರ್ಷಗಳ ಬಳಿಕ ಎಂದು ಪೂರ್ಣಪ್ರಜ್ಞ ಅಮೆಚೂರ್ ಅಸ್ಟ್ರಾನಮರ್ಸ್ ಕ್ಲಬ್‌ನ ಸಂಚಾಲಕ ಅತುಲ್ ಭಟ್ ತಿಳಿಸಿದ್ದಾರೆ.

ಹಸಿರು ಬಣ್ಣದ ಧೂಮಕೇತುವಾದ ಸಿ/2022 ಇ3 ಸೌರವ್ಯೂಹದ ಅಂಚಿನಲ್ಲಿರುವ ಊರ್ಟ್ ಮೇಘದಿಂದ ಭೂಮಿಯ ಸಮೀಪಕ್ಕೆ ಬರುತ್ತಿದೆ. ದಿನದಿಂದ ದಿನಕ್ಕೆ ಪ್ರಕಾಶಮಾನವಾಗಿ, ಬರಿಗಣ್ಣಿಗೆ ಮಂದವಾಗಿ ಗೋಚರಿಸಲಿದೆ.

ಧೂಮಕೇತುಗಳಲ್ಲಿ ಆವರ್ತನೀಯ ಹಾಗೂ ಆವರ್ತಕವಲ್ಲದ ಪ್ರಕಾರಗಳಿದ್ದು, ಆವರ್ತನೀಯ ಧೂಮಕೇತುಗಳು ಪುನರಾವರ್ತಿತವಾದರೆ ಆವರ್ತಕವಲ್ಲದ ಧೂಮಕೇತುಗಳು ಪುನರಾವರ್ತಿಸುವುದಿಲ್ಲ.

ಪ್ರಸಿದ್ಧ ಹ್ಯಾಲಿ ಧೂಮಕೇತುವು ಆವರ್ತನೀಯ ಧೂಮಕೇತುವಾಗಿದ್ದು, 76 ವರ್ಷಗಳಿಗೊಮ್ಮೆ ಸೂರ್ಯನ ಸುತ್ತ ಒಂದು ಸುತ್ತು ಪೂರ್ಣಗೊಳಿಸುತ್ತದೆ. ಹ್ಯಾಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದು 1986 ರಲ್ಲಿ. ಮತ್ತೆ ನೋಡಬೇಕಾದರೆ 2061ರವರೆಗೂ ಕಾಯಬೇಕಾಗುತ್ತದೆ.

ಪ್ರಸ್ತುತ ಸಿ/2022 ಇ3 ಕೂಡ ಸುದೀರ್ಘ ಅಂದರೆ 50,000 ವರ್ಷಗಳ ಕಕ್ಷಾವಧಿ ಹೊಂದಿದ್ದು, ಹಿಂದೆ ಈ ಧೂಮಕೇತು ಭೂಮಿಯನ್ನು ಸಂಧಿಸಿದಾಗ ಆದಿ ಮಾನವರು ವಾಸ ಮಾಡುತ್ತಿದ್ದರು. ಸಹಾರ ಮರುಭೂಮಿ ಹಸಿರಿನಿಂದ ಸಮೃದ್ಧವಾಗಿ ಫಲವತ್ತಾಗಿತ್ತು.

ಸಿ/2022 ಇ3 ಧೂಮಕೇತು ಒಳ ಸೌರವ್ಯೂಹದಲ್ಲಿದ್ದು, ಇದೇ ಜ.12 ರಂದು ಪುರರವಿ ಬಿಂದುವನ್ನು ತಲುಪಿದೆ. ಅಂದರೆ, ಸೂರ್ಯನ ಸಮೀಪ ಚಲನೆಯನ್ನು ಪೂರ್ಣಗೊಳಿಸಿದೆ. ಫೆ.1 ರಂದು ಭೂಮಿಯಿಂದ 42.63 ದಶಲಕ್ಷ ಕಿ.ಮೀ.ಗಳಷ್ಟು ಸಮೀಪದಿಂದ ಹಾದು ಹೋಗಲಿದೆ.

ಧೂಮಕೇತುವು ಭೂಮಿಯ ಹತ್ತಿರಕ್ಕೆ ಬಂದಂತೆ ಹೆಚ್ಚು ಪ್ರಕಾಶಮಾನವಾಗಿರಲಿದೆ. ಕಾಂತಿಮಾನ ಹೆಚ್ಚಿದ್ದಷ್ಟು ಪ್ರಕಾಶಮಾನ ಹೆಚ್ಚಾಗಿರುತ್ತದೆ. ಸೂರ್ಯನು -26 ರಷ್ಟು ಕಾಂತಿಮಾನ ಹೊಂದಿದ್ದರೆ, ಶುಕ್ರ ಗ್ರಹ -4 ರಷ್ಟು ಕಾಂತಿಮಾನ ಹೊಂದಿರುತ್ತದೆ. 6 ಅಥವಾ ಅದಕ್ಕಿಂತ ಕಡಿಮೆ ಕಾಂತಿಮಾನ ಹೊಂದಿದ್ದರೆ ಬರಿಗಣ್ಣಿಗೆ ಧೂಮಕೇತುಗಳು ಗೋಚರಿಸುತ್ತದೆ.

ಜನವರಿಯ ಕೊನೆಯಲ್ಲಿ ಹಾಗೂ ಫೆಬ್ರವರಿ ಪ್ರಾರಂಭದ ದಿನಗಳಲ್ಲಿ ಪ್ರಕಾಶಮಾನವಾಗಿ ಗೋಚರಿಸುವ ಸಿ/2022 ಇ3 ಧೂಮಕೇತುವನ್ನು ಭೂಮಿಯಿಂದ ವೀಕ್ಷಿಸಬಹುದಾಗಿದೆ ಎನ್ನುತ್ತಾರೆ ಅತುಲ್ ಭಟ್‌.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು