ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾಖಲೆ ಬರೆದ ಗೂಳಿಹಟ್ಟಿ ಗೆಲುವು

ಹೊಸದುರ್ಗದಲ್ಲಿ ಪ್ರಥಮ ಬಾರಿಗೆ ಅರಳಿದ ಕಮಲ, ಈಡೇರಿದ ಬಯಕೆ
Last Updated 17 ಮೇ 2018, 9:06 IST
ಅಕ್ಷರ ಗಾತ್ರ

ಹೊಸದುರ್ಗ: ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೂಳಿಹಟ್ಟಿ ಡಿ.ಶೇಖರ್‌ ಗೆಲುವು ಸಾಧಿಸುವ ಮೂಲಕ ಕ್ಷೇತ್ರದಲ್ಲಿ ಪ್ರಥಮ ಬಾರಿಗೆ ಕಮಲ ಅರಳಿಸಿದ ಕೀರ್ತಿಗೆ ಭಾಜನರಾಗಿದ್ದಾರೆ.

2008ರ ಚುನಾವಣೆಯಲ್ಲಿ ಪಕ್ಷೇತರರಾಗಿ ಗೆಲುವು ಸಾಧಿಸಿ ಆಗಿನ ಬಿಜೆಪಿ ಸರ್ಕಾರದ ರಚನೆಗೆ ಸಾಥ್‌ ನೀಡಿ ಯುವಜನ ಸೇವೆ, ಕ್ರೀಡೆ ಹಾಗೂ ಜವಳಿ ಸಚಿವರಾಗಿದ್ದ ಗೂಳಿಹಟ್ಟಿ, 2013ರ ಚುನಾವಣೆಯಲ್ಲಿ ಮತ್ತೆ ಪಕ್ಷೇತರರಾಗಿ ಸ್ಪರ್ಧಿಸಿ, ಕಾಂಗ್ರೆಸ್‌ನ ಬಿ.ಜಿ.ಗೋವಿಂದಪ್ಪ ವಿರುದ್ಧ 20,017 ಮತಗಳ ಅಂತರದಲ್ಲಿ ಪರಾಭವಗೊಂಡಿದ್ದರು. ಆದರೆ ಈ ಬಾರಿ ಮತ್ತೆ ಗೂಳಿಹಟ್ಟಿ ಶೇಖರ್‌, ಕಾಂಗ್ರೆಸ್‌ನ ಬಿ.ಜಿ.ಗೋವಿಂದಪ್ಪ ವಿರುದ್ಧ 25,992 ಮತಗಳ ಅಂತರದಲ್ಲಿ ಗೆಲುವು ಸಾಧಿಸುವ ಮೂಲಕ ಕ್ಷೇತ್ರದ ಪ್ರಥಮ ಬಿಜೆಪಿ ಶಾಸಕರಾಗಿ ಹೊರಹೊಮ್ಮಿದ್ದಾರೆ.

1952ರಿಂದ 2013ರ ವರೆಗೂ ಕ್ಷೇತ್ರದಲ್ಲಿ ನಡೆದಿರುವ ಒಟ್ಟು 15 ಚುನಾವಣೆಯಲ್ಲಿ (1981ರ ಉಪ ಚುನಾವಣೆ ಸೇರಿ) ಕಾಂಗ್ರೆಸ್‌ಗೆ 8 ಬಾರಿ, ಪಕ್ಷೇತರರಿಗೆ 5, ಪಿಎಸ್‌ಪಿ ಮತ್ತು ಜೆಎನ್‌ಪಿ ಅಭ್ಯರ್ಥಿಗಳಿಗೆ ತಲಾ ಒಂದು ಬಾರಿ ಜಯ ಒಲಿದಿತು. ಕ್ಷೇತ್ರದಲ್ಲಿ 1981ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಪ್ರವೇಶ ಮಾಡಿದ ಬಿಜೆಪಿ ಅಲ್ಲಿಂದ 2013ರವರೆಗೆ ನಡೆದ 9 ಚುನಾವಣೆಯಲ್ಲಿ ಬಿಜೆಪಿಯಿಂದ 8 ಬಾರಿ ಅಭ್ಯರ್ಥಿಗಳು ಸ್ಪರ್ಧಿಸಿದ್ದರೂ ಒಮ್ಮೆಯೂ ಗೆಲುವು ಸಾಧಿಸುವಲ್ಲಿ ವಿಫಲರಾಗಿದ್ದರು. ಪ್ರತಿ ಬಾರಿಯೂ ಗೆಲುವಿಗಾಗಿ ಕಾಂಗ್ರೆಸ್‌ ಹಾಗೂ ಪಕ್ಷೇತರರ ನಡುವೆ ಹರಸಾಹಸ ಪಟ್ಟರೂ ಸಹ ಪ್ರತಿಸ್ಪರ್ಧಿ ಸ್ಥಾನವನ್ನಾದರೂ ಪಡೆಯಲು ಸಾಧ್ಯವಾಗಿರಲಿಲ್ಲ.

1981ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಕ್ಷೇತ್ರದ ಪ್ರಥಮ ಬಿಜೆಪಿ ಅಭ್ಯರ್ಥಿಯಾಗಿ ಆರ್‌.ನಾಗರಾಜಗುಪ್ತಾ ಸ್ಪರ್ಧಿಸಿ ಸುಮಾರು 5ಸಾವಿರ ಮತ ಪಡೆದು ಪರಾಭವಗೊಂಡಿದ್ದರು. ನಂತರದಲ್ಲಿ 1983ರಲ್ಲಿ ಮತ್ತೋಡು ಚಿದಾನಂದಪ್ಪ, (1985ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಯಿಂದ ಯಾರು ಸ್ಪರ್ಧಿಸಿರಲಿಲ್ಲ) 1989ರಲ್ಲಿ ಮತ್ತೆ ಮತ್ತೋಡು ಚಿದಾನಂದಪ್ಪ, 1994ರಲ್ಲಿ ಎಚ್‌.ಆರ್‌.ಕಲ್ಲೇಶ್‌, 1999ರಲ್ಲಿ ಟಿ.ಎಚ್‌.ಬಸವರಾಜು, 2004ರಲ್ಲಿ ಡಿ.ಗುರುಸ್ವಾಮಿ, 2008ರಲ್ಲಿ ಎಸ್‌.ಲಿಂಗಮೂರ್ತಿ, 2013ರಲ್ಲಿ ಎಂ.ಲಕ್ಷ್ಮಣ್‌ ಸ್ಪರ್ಧಿಸಿ ಪರಾಭವಗೊಂಡಿದ್ದರು.

ಪಕ್ಷೇತರರಾಗಿದ್ದ ಗೂಳಿಹಟ್ಟಿ ಡಿ.ಶೇಖರ್‌ ಅವರನ್ನು ಬಿಜೆಪಿಗೆ ಕರೆ ತಂದು ಹೆಚ್ಚಿನ ಬಹುಮತಗಳ ಅಂತರದಿಂದ ಗೆಲ್ಲಿಸಿದ್ದು, 36 ವರ್ಷಗಳ ನಂತರದಲ್ಲಿ ಕ್ಷೇತ್ರದ ಕಾರ್ಯಕರ್ತರ ಬಯಕೆ ಈಡೇರುವ ಜತೆಗೆ, ತಾಲ್ಲೂಕಿನಲ್ಲಿ ಬಿಜೆಪಿಯ ವರ್ಚಸ್ಸು ಹೆಚ್ಚಾಗಿದೆ ಎಂಬುದು ತಾಲ್ಲೂಕಿನ ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಬಿಜೆಪಿ ಪ್ರಥಮ ಚುನಾವಣೆ

1980ರ ಏಪ್ರಿಲ್‌ 6ರಂದು ಬಿಜೆಪಿ ಸ್ಥಾಪನೆಯಾಯಿತು. ನಂತರ ದೇಶದಲ್ಲಿಯೇ ಪ್ರಥಮ ಬಾರಿಗೆ ಕಮಲದ ಚಿಹ್ನೆಯಡಿ 1981ರ ಹೊಸದುರ್ಗ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆ ನಡೆದಿರುವುದು ಇಲ್ಲಿಯ ಹಿರಿಮೆ ಎಂದು ಗುರುಸ್ವಾಮಿ ಸ್ಮರಿಸಿದರು.

**
ಮತದಾರರು ನನ್ನ ಮೇಲೆ ವಿಶ್ವಾಸವಿಟ್ಟು 25,992 ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಅವರ ಆಶಯದಂತೆ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ
– ಗೂಳಿಹಟ್ಟಿ ಡಿ.ಶೇಖರ್‌, ಚುನಾಯಿತ ಅಭ್ಯರ್ಥಿ

ಎಸ್‌.ಸುರೇಶ್‌ ನೀರಗುಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT