ಉಡುಪಿ: ಶ್ರೀಮಂತ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಕನ್ನಡ ಸಾಹಿತ್ಯದ ಅಧ್ಯಯನ ಇಂದು ಕಡಿಮೆಯಾಗುತ್ತಿದೆ ಎಂದು ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಯನ್ಸ್ ನಿರ್ದೇಶಕ ವರದೇಶ್ ಹಿರೇಗಂಗೆ ಖೇದ ವ್ಯಕ್ತಪಡಿಸಿದರು.
ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ವತಿಯಿಂದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಹಮ್ಮಿಕೊಂಡಿದ್ದ 2024ನೇ ಸಾಲಿನ ಕೇಶವ ಪ್ರಶಸ್ತಿ ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.
ಇಂಗ್ಲಿಷ್ ಭಾಷೆಯ ಸಾರ್ವಭೌಮತ್ವ ಇತರ ಭಾಷೆಗಳನ್ನು ಕಬಳಿಸಬಹುದೆಂಬ ಭೀತಿ ಎಲ್ಲರನ್ನೂ ಕಾಡುತ್ತಿದೆ. ಯೂರೋಪ್‌ನವರಿಗೂ ಈ ಭಯವಿದೆ ಎಂದರು.
ಇಂಗ್ಲಿಷ್ ಭಾಷೆಗೆ ಕನ್ನಡ ಭಾಷೆಯಷ್ಟು ಶ್ರೀಮಂತ ಪರಂಪರೆ ಇಲ್ಲ. ಭಾರತದ ಎಲ್ಲಾ ಭಾಷೆಗಳೂ ಇಂಗ್ಲಿಷ್‌ಗಿಂತ ಉದಾತ್ತ ಪರಂಪರೆಯನ್ನು ಹೊಂದಿವೆ ಎಂದರು.
ನಮ್ಮಲ್ಲಿ ಮಾತೃಭಾಷೆಯಲ್ಲಿ ಶಿಕ್ಷಣ ನೀಡದ ಕಾರಣ ನಾವು ಅನೇಕ ವಿಜ್ಞಾನಿಗಳನ್ನು ಕಳೆದುಕೊಂಡಿದ್ದೇವೆ.
ಕನ್ನಡದಲ್ಲಿ ಎಲ್ಲಾ ಪ್ರಕಾರಗಳ ಸಾಹಿತ್ಯ ರಚನೆಯಾಗಬೇಕು ಆಗ ಮಾತ್ರ ಜ್ಞಾನದ ಅಸಮಾನತೆಯನ್ನು ಪರಿವರ್ತಿಸಬಹುದು ಎಂದೂ ಹೇಳಿದರು.
ಕನ್ನಡ ಕಾವ್ಯಗಳಲ್ಲಿ ಕಾವ್ಯ ಚಿಂತನೆ ಎಂಬ ವಿಷಯದ ಕುರಿತು ಮಾತನಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಕುಲಸಚಿವ ಎ. ಸುಬ್ಬಣ್ಣ ರೈ, ಭಾರತೀಯ ಕಾವ್ಯ ಮೀಮಾಂಸೆಯು ಸಂಸ್ಕೃತಕ್ಕೆ ಸೀಮಿತವಾಗಿರುವುದರಿಂದ ಕನ್ನಡ ಕಾವ್ಯ ಮೀಮಾಂಸೆಯನ್ನು ರೂಪಿಸಬೇಕೆಂಬ ಚಿಂತನೆಗಳೂ ನಡೆದಿದ್ದವು ಎಂದರು.
ಆದಿಕವಿ ಪಂಪನು ಮಾರ್ಗ ಮತ್ತು ದೇಶೀಯನ್ನು ಸಮನ್ವಯಗೊಳಿಸಿ ಕಾವ್ಯ ರಚಿಸಿದ್ದಾನೆ. ಹೀಗಾಗಿ ಆತ ಕನ್ನಡದ ಮಾರ್ಗ ಪ್ರವರ್ತಕ ಕವಿಯಾಗಿದ್ದಾನೆ ಎಂದರು.
ಕಾರ್ಯಕ್ರಮದಲ್ಲಿ ಕೇಶವ ಪ್ರಶಸ್ತಿಯನ್ನು ಸಾಹಿತಿ ಯು. ಮಹೇಶ್ವರಿ ಅವರಿಗೆ ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ಶೈಲೇಶ್ ಕುಮಾರ್ ಶಿವಕುಮಾರ್ ಅವರಿಗೆ ಪ್ರದಾನ ಮಾಡಲಾಯಿತು.
ಕಾಲೇಜು ಪ್ರಾಂಶುಪಾಲ ಲಕ್ಷ್ಮಿನಾರಾಯಣ ಕಾರಂತ ಅಧ್ಯಕ್ಷತೆ ವಹಿಸಿದ್ದರು. ಉದಯ ಕುಮಾರ್ ಶೆಟ್ಟಿ ಹಾಗೂ ಅರುಣಕುಮಾರ್ ಎಸ್.ಆರ್. ಅವರು ಪ್ರಶಸ್ತಿ ಪುರಸ್ಕೃತರನ್ನು ಪರಿಚಯಿಸಿದರು. ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಬಿ. ಜಗದೀಶ್ ಶೆಟ್ಟಿ ಉಪಸ್ಥಿತರಿದ್ದರು. ತಾಳ್ತಜೆ ವಸಂತ ಕುಮಾರ್ ಸ್ವಾಗತಿಸಿದರು. ದಿಶಾ ವಂದಿಸಿದರು.
‘ಸಾಹಿತ್ಯದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಲು ಅವಕಾಶ’
ಪ್ರತಿಷ್ಠಿತ ಕೇಶವ ಪ್ರಶಸ್ತಿ ಲಭಿಸಿರುವುದರಿಂದ ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡಲು ನನಗೆ ಅವಕಾಶ ದೊರಕಿದಂತಾಗಿದೆ. ನನ್ನನ್ನು ಬೆಳೆಸಿದ ಗುರುಗಳನ್ನು ಮತ್ತು ಪ್ರೋತ್ಸಾಹ ನೀಡಿದ ಶಿಷ್ಯವರ್ಗವನ್ನು ಈ ಸಂದರ್ಭದಲ್ಲಿ ಸ್ಮರಿಸುತ್ತೇನೆ. ತಾಳ್ತಾಜೆ ಕೇಶವ ಭಟ್ಟ ಅವರ ಪದ್ಯಗಳನ್ನು ಧಾಟಿ ಸಹಿತ ಮುಂದಿನ ಪೀಳಿಗೆಗೆ ತಲುಪಿಸುವ ಕೆಲಸ ನಡೆಯಬೇಕು ಎಂದು ಪ್ರಶಸ್ತಿ ಸ್ವೀಕರಿಸಿದ ಬಳಿಕ ಸಾಹಿತಿ ಯು.ಮಹೇಶ್ವರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.