ಶನಿವಾರ, ಡಿಸೆಂಬರ್ 7, 2019
22 °C
ಹದ್ದೂರು ರಾಜೀವ ಶೆಟ್ಟರಿಗೆ ‘ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ’ ಪ್ರದಾನ

‘ಶೀನಪ್ಪ ಶೆಟ್ಟರ ಬದುಕು ಮಾದರಿಯಾಗಲಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕುಂದಾಪುರ: ‘ಸಮಾಜಸೇವೆ ಜತೆಯಲ್ಲಿ ಕೃಷಿಯನ್ನು ತಮ್ಮ ಜೀವನಾಭ್ಯಾಸವನ್ನಾಗಿಸಿಕೊಂಡಿದ್ದ ದಿ.ಸಬ್ಲಾಡಿ ಶೀನಪ್ಪ ಶೆಟ್ಟಿ ಅವರು ಗ್ರಾಮೀಣ ಭಾಗದಲ್ಲಿ ತೋರಿದ್ದ ಕೃಷಿ ಸಾಧನೆಗಾಗಿ ಆ ದಿನಗಳಲ್ಲಿಯೇ ಮಂಗಳೂರು ಬಂಟರ ಮಾತೃ ಸಂಘದಿಂದ ಚಿನ್ನದ ಪದಕ ಪಡೆದುಕೊಂಡಿದ್ದರು’ ಎಂದು ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಹೇಳಿದರು.

ಆರ್‌.ಎನ್‌.ಶೆಟ್ಟಿ ಸಭಾಭವನದಲ್ಲಿ ಶುಕ್ರವಾರ ವಂಡ್ಸೆಯ ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಮೆಮೋರಿಯಲ್ ಚಾರಿಟಬಲ್ ಟ್ರಸ್ಟ್ ವತಿಯಿಂದ ನಡೆದ ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ ಪ್ರದಾನ, ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ಸಹಾಯಧನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಸಾಮಾಜಿಕ ಸಾಮರಸ್ಯದ ಬಗ್ಗೆ ಅತ್ಯಂತ ಆಸಕ್ತಿ ಇದ್ದ ಅವರ ಮಾತುಗಳಿಗೆ ಗ್ರಾಮೀಣ ಭಾಗದಲ್ಲಿ ತುಂಬ ಗೌರವ ಇತ್ತು. ಉತ್ತಮ ಪಂಚಾಯಿತಿದಾರರಾಗಿದ್ದ ಅವರ ನ್ಯಾಯಪರ ಚಿಂತನೆಗಳಿಂದಾಗಿ ಹಳ್ಳಿ ಭಾಗದ ನ್ಯಾಯಧೀಶರಾಗಿ ಅವರು ಗುರುತಿಸಿಕೊಂಡಿದ್ದರು. ಸಾಮಾಜಿಕ ನ್ಯಾಯದ ಜತೆಯಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಕಾಳಜಿ ಹೊಂದಿ
ದ್ದರು. ಹಾಗಾಗಿ, ಅವರ ಕುಟುಂಬದವರು ಅವರ ಹೆಸರಿನಲ್ಲಿ ಪ್ರಶಸ್ತಿ, ವಿದ್ಯಾರ್ಥಿ ವೇತನ ಹಾಗೂ ವೈದ್ಯಕೀಯ ಸಹಾಯ ಧನ ನೀಡುವ ಮೂಲಕ ಆದರ್ಶಗಳನ್ನು ಉಳಿಸುವ ಕಾರ್ಯ ಮಾಡುತ್ತಿದ್ದಾರೆ’ ಎಂದರು.

ಈ ಬಾರಿಯ ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಕೃಷಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಗತಿಪರ ಕೃಷಿಕ ಹಾಗೂ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನಿರ್ದೇಶಕ ಹದ್ದೂರು ರಾಜೀವ ಶೆಟ್ಟಿ, ‘ಮೌಲ್ಯಾಧಾರಿತ ಜೀವನ ನಡೆಸಿದ್ದ ಶೀನಪ್ಪ ಶೆಟ್ಟಿ ಅವರ ಹೆಸರಿನ ಪ್ರಶಸ್ತಿ ಸ್ವೀಕರಿಸುತ್ತಿರುವುದು ಹೆಮ್ಮೆ ಎನಿಸುತ್ತಿದೆ. ಕೃಷಿ, ರಾಜಕೀಯ, ಸಾಮಾಜಿಕ ಕ್ಷೇತ್ರಗಳ ಜತೆಯಲ್ಲಿ ಸಂಸ್ಕಾರ ಹಾಗೂ ಶಿಕ್ಷಣ ಕ್ಷೇತ್ರಕ್ಕೂ ಹೆಚ್ಚಿನ ಸೇವೆ ಸಲ್ಲಿಸಿದ್ದ ಅವರು ಬದುಕಿದ ರೀತಿ ಇತರರಿಗೆ ಮಾದರಿ’ ಎಂದರು.

ಮಾಜಿ ಶಾಸಕ ಬಿ.ಅಪ್ಪಣ್ಣ ಹೆಗ್ಡೆ, ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಚ್‌.ರಾಜು ದೇವಾಡಿಗ, ಭಂಡಾರ್‌ಕಾರ್ಸ್‌ ಕಾಲೇಜಿನ ಉಪನ್ಯಾಸಕಿ ರೇಖಾ ಬನ್ನಾಡಿ, ದಕ್ಷಿಣ ಕನ್ನಡ ಹಾಲು ಒಕ್ಕೂಟದ ಅಧ್ಯಕ್ಷ ರವಿರಾಜ ಹೆಗ್ಡೆ, ಸಬ್ಲಾಡಿ ಕೆ.ಶೀನಪ್ಪ ಶೆಟ್ಟಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಎನ್.ಆನಂದ ಶೆಟ್ಟಿ ಸಬ್ಲಾಡಿ, ಎನ್‌.ರಘುರಾಮ ಶೆಟ್ಟಿ ಸಬ್ಲಾಡಿ, ಗುಲಾಬಿ ಎಸ್‌ ಶೆಟ್ಟಿ, ಶಾಲಿನಿ ಬಿ.ಶೆಟ್ಟಿ, ಎ.ಬಾಲಕೃಷ್ಣ ಶೆಟ್ಟಿ, ಡಾ.ಶಿವರಾಮ ಶೆಟ್ಟಿ, ಎನ್‌.ಜಯರಾಮ ಶೆಟ್ಟಿ ಸಬ್ಲಾಡಿ, ಲೀಲಾ ಆರ್‌.ಶೆಟ್ಟಿ, ವಸಂತಿ ಎಂ.ಶೆಟ್ಟಿ, ವತ್ಸಲಾ ಎ.ಶೆಟ್ಟಿ, ಶಾಲಿನಿ ಎನ್‌.ಶೆಟ್ಟಿ, ಅರ್ಚನಾ ಜೆ.ಶೆಟ್ಟಿ ಇದ್ದರು.

ಟ್ರಸ್ಟ್ ಸಂಚಾಲಕ ಎನ್.ಮಂಜಯ್ಯ ಶೆಟ್ಟಿ ಸಬ್ಲಾಡಿ ಸ್ವಾಗತಿಸಿದರು. ಎನ್‌.ನಾರಾಯಣ ಶೆಟ್ಟಿ ಸಬ್ಲಾಡಿ ಫಲಾನುಭವಿಗಳ ಪಟ್ಟಿ ವಾಚಿಸಿದರು. ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ನಿರೂಪಿಸಿದರು.

ಹುಟ್ಟೂರಿನಲ್ಲಿ ಜನ್ಮ ಶತಾಬ್ದಿ ಆಚರಿಸಿ

‘ಮುಂದಿನ ವರ್ಷ ಸಬ್ಲಾಡಿ ಕೆ.ಶೀನಪ್ಪ ಶೆಟ್ಟರ ಜನ್ಮ ಶತಾಬ್ದಿ ವರ್ಷ. ಅವರು ಹುಟ್ಟಿದ ಊರಿನಲ್ಲಿ ಕೃಷಿಕರ ಜತೆಯಲ್ಲಿ ಶತಮಾನೋತ್ಸವವನ್ನು ಆಚರಿಸಿದರೆ ಅದು ಹೆಚ್ಚು ಅರ್ಥ ಪೂರ್ಣವಾಗುತ್ತದೆ ಹಾಗೂ ಅವರ ಬದುಕಿನ ಮೌಲ್ಯಗಳನ್ನು ಜನರ ಮುಂದೆ ಇಡುವ ಕೆಲಸ ಆಗುತ್ತದೆ’ ಎಂದು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅಭಿಪ್ರಾಯಪಟ್ಟರು.

ಪ್ರತಿಕ್ರಿಯಿಸಿ (+)