ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಮಂದಿರ ರಾಷ್ಟ್ರೀಯ ಸ್ಥಳವಾಗಲಿ; ದೇವರಿಗೆ ಲಕ್ಷ ತುಳಸಿ ಅರ್ಚನೆ

Last Updated 4 ಆಗಸ್ಟ್ 2020, 14:15 IST
ಅಕ್ಷರ ಗಾತ್ರ

ಉಡುಪಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಆ.5ರಂದು ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಲಿದ್ದು, ಉಡುಪಿಯಲ್ಲಿ ರಾಮನ ಭಕ್ತರು ಮನೆಯಲ್ಲಿ ಸಂಭ್ರಮಾಚರಣೆ, ಪೂಜೆ ಪ್ರಾರ್ಥನೆ, ಭಜನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.

ವಿಶ್ವಹಿಂದೂ ಪರಿಷತ್‌ನಿಂದ ಬುಧವಾರ ಬೆಳಿಗ್ಗೆ 11ಕ್ಕೆ ಕೃಷ್ಣಮಠದ ಮಧ್ವ ಮಂಟಪದಲ್ಲಿ ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಪರ್ಯಾಯ ಅದಮಾರು ಮಠದ ಈಶಪ್ರಿಯ ತೀರ್ಥರು, ವಿಶ್ವಪ್ರಿಯ ತೀರ್ಥರು, ಕಾಣಿಯೂರು ಮಠದ ವಿದ್ಯಾವಲ್ಲಭ ತೀರ್ಥ ಸ್ವಾಮೀಜಿ, ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ, ವಿದ್ಯಾ ರಾಜೇಶ್ವರ ತೀರ್ಥ ಸ್ವಾಮೀಜಿ ವೀಕ್ಷಣೆ ಮಾಡಲಿದ್ದಾರೆ. ಸಾರ್ವಜನಿಕರಿಗೆ ವೀಕ್ಷಣೆಗೆ ಅವಕಾಶವಿಲ್ಲ ಎಂದು ಮಠದ ಸಿಬ್ಬಂದಿ ತಿಳಿಸಿದ್ದಾರೆ.

ನೀಲಾವರ ಗೋಶಾಲೆ ಸೇರಿದ ತುಳಸಿದಳ:ರಾಮಮಂದಿರ ಶಿಲಾನ್ಯಾಸದ ದಿನ ದೇವರಿಗೆ ಲಕ್ಷ ತುಳಸಿ ದಳ ಸಮರ್ಪಿಸುವ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರ ಸಂಕಲ್ಪಕ್ಕೆ ಭಕ್ತರು ನಿರೀಕ್ಷೆಗೆ ಮೀರಿ ಸ್ಪಂದಿಸಿದ್ದು, ನೀಲಾವರ ಗೋಶಾಲೆಯ ಮಠಕ್ಕೆ ತುಳಸಿದಳಗಳನ್ನು ಸಮರ್ಪಿಸಿದ್ದಾರೆ.

ಶಿಲಾನ್ಯಾಸದ ದಿನ ಪೇಜಾವರ ಶ್ರೀಗಳು ರಾಮ ಕೃಷ್ಣ ವಿಠಲನಿಗೆ ಲಕ್ಷ ತುಲಸಿ ಅರ್ಚನೆ ಮಾಡಲಿದ್ದು, ಗೋಶಾಲೆಯನ್ನು ಕೇಸರಿ ಪತಾಕೆ ಹಾಗೂ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ.

‘ರಾಮನ ಆದರ್ಶ ಪಾಲಿಸಿ’
ರಾಮಮಂದಿರಕ್ಕೆ ಶಿಲಾನ್ಯಾಸ ನೆರವೇರುತ್ತಿರುವ ಹೊತ್ತಿನಲ್ಲಿ ರಾಮನ ಆದರ್ಶಗಳ ಪಾಲನೆ ಅಗತ್ಯ. ನಿಸ್ವಾರ್ಥ, ಪ್ರಾಮಾಣಿಕತೆ, ಸಹಭಾಳ್ವೆ, ದಾನ ಧರ್ಮಗಳಿಗೆ ಆದ್ಯತೆ ಸಿಗಬೇಕು ಎಂದು ಅದಮಾರು ಮಠದ ಈಶಪ್ರಿಯ ತೀರ್ಥ ಸ್ವಾಮೀಜಿ ತಿಳಿಸಿದ್ದಾರೆ.

ರಾಮ ಸ್ವಂತಿಕೆಯ ಪ್ರತೀಕ, ಸ್ವಾಭಿಮಾನದ ಪ್ರತಿರೂಪವಾಗಿದ್ದು ಆತನ ಗುಣಗಳ ಪಾಲನೆ ಅಗತ್ಯ. ಅವತಾರ ಮಾಡಿದ ಜಾಗದಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವುದು ಬಹಳ ಸಂತಸದ ವಿಚಾರ. ರಾಮಮಂದಿರ ರಾಷ್ಟ್ರೀಯ ಸ್ಥಳವಾಗಿ ಘೋಷಣೆಯಾಗಬೇಕು. 2 ಸಾವಿರ ಎಕರೆಯಲ್ಲಿ ರಾಮನ ಚರಿತ್ರೆ ಬಿಂಬಿಸಲು ಕೆಲಸ ಆಗಬೇಕು ಎಂದು ಸಲಹೆ ನೀಡಿದ್ದಾರೆ.

ಸ್ವಾಭಿಮಾನದ ದಿನ:ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದ ನೆನಪುಗಳನ್ನು ಪಲಿಮಾರು ಮಠದ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಂಚಿಕೊಂಡಿದ್ದಾರೆ.

‘ಅಯೋಧ್ಯೆಯಲ್ಲಿ ಕರಸೇವೆ ಘೋಷಣೆಯಾದಾಗ ಪೇಜಾವರ ಶ್ರೀ, ಅದಮಾರು ಶ್ರೀಗಳ ಜತೆ ಉತ್ತರ ಪ್ರದೇಶಕ್ಕೆ ಹೊರಟಾಗ ಗಡಿಯಲ್ಲಿ ಪೊಲೀಸರು ವಾಹನಗಳನ್ನು ತಡೆದರು. ಹಲವು ಮಠಾಧೀಶರು, ಸಂತರು ಜತೆಗಿದ್ದರು. ಆಗ ಗುಂಪಿನಲ್ಲಿದ್ದ ಒಬ್ಬರು ಪ್ರಯಾಗಕ್ಕೆ ಹೋಗುತ್ತಿರುವುದಾಗಿ ಹೇಳಿದಾಗ, ಪೇಜಾವರ ಶ್ರೀಗಳು ತಡೆದು, ಎಲ್ಲರೂ ಅಯೋಧ್ಯೆಗೆ ಕರಸೇವೆ ಮಾಡಲು ಹೊರಟಿರುವುದಾಗಿ ಸತ್ಯ ನುಡಿದರು. ಆಗ ಕರಸೇವೆಯಲ್ಲಿ ಭಾಗವಹಿಸದಿದ್ದರೂ ರಾಮದೇವರಿಗಾಗಿ ಕೆಲವು ದಿನಗಳ ಕಾಲ ಒಂದೆಡೆ ಸೇರಿದ್ದು ಖುಷಿ ಕೊಟ್ಟಿತ್ತು’ ಎಂದು ಪಲಿಮಾರು ಶ್ರೀಗಳು ಸ್ಮರಿಸಿದರು.

ಕಲ್ಯಾಣಸಿಂಗ್ ಮುಖ್ಯಮಂತ್ರಿಯಾಗಿದ್ದಾಗಲೂ ಪೇಜಾವರ ಶ್ರೀಗಳ ಜತೆ ಭಾಗವಹಿಸಿದ್ದೆವು. ಮಸೀದಿ ಧ್ವಂಸ ಸಂದರ್ಭ, ಇಟ್ಟಿಗೆ ಜೋಡಿಸುವ ಕಾರ್ಯ, ರಾಮಲಲ್ಲನ ಮೂರ್ತಿ ಪ್ರತಿಷ್ಠಾಪನೆಯಲ್ಲಿ ಭಾಗವಹಿಸಿದ್ದ ನೆನಪು ಇಂದಿಗೂ ಕಣ್ಮುಂದೆ ಇದೆ ಎಂದು ಶ್ರೀಗಳು ಹೇಳಿದರು.‌

‘ರಾಮಮಂದಿರ ನಿರ್ಮಾಣವಾಗುವ ಒಳ್ಳೆಯ ಕಾಲಬಂದಿದ್ದು, ಎಲ್ಲರೂ ಸ್ವಾಗತಿಸೋಣ. ಅಯೋಧ್ಯೆಗೆ ಹೋಗಲಾಗಲಿಲ್ಲ ಎಂಬ ಚಿಂತೆ, ಬೇಸರ ಬೇಡ. ಶಿಲಾನ್ಯಾಸದ ದಿನ ಮನೆಯಲ್ಲಿ ಭಜನೆ, ಪ್ರಾರ್ಥನೆ, ರಾಮ, ವಿಷ್ಣುದೇವರ ಮಂತ್ರ ಪಠಿಸಿ’ ಎಂದು ಪಲಿಮಾರು ಸ್ವಾಮೀಜಿ ಸಲಹೆ ನೀಡಿದರು.

ರಾಮಮಂದಿರ ಸಿಮೆಂಟ್‌, ಕಲ್ಲುಗಳಿಂದ ನಿರ್ಮಾಣವಾಗದೆ, ಭಕ್ತಿ, ಪ್ರೀತಿ, ಪ್ರೇಮ ಹಾಗೂ ಜ್ಞಾನದ ಸೌಧವಾಗಲಿ. ಕೊರೊನಾ ಸೋಂಕು ನಾಶವಾಗಲಿ ಎಂದು ಸ್ವಾಮೀಜಿ ಅಪೇಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT