ಶುಕ್ರವಾರ, ಸೆಪ್ಟೆಂಬರ್ 30, 2022
25 °C
2021-22ನೇ ಸಾಲಿನಲ್ಲಿ ಉತ್ತಮ ಆರ್ಥಿಕ ಸಾಧನೆ

ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿ ಸಾಮಾನ್ಯ ಸಭೆ ಇಂದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಉಡುಪಿಯ ಬಡಗಬೆಟ್ಟು ಕೋ ಆಪರೇಟಿವ್ ಸೊಸೈಟಿಯ 2021–22ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯು ಅಧ್ಯಕ್ಷ ಸಂಜೀವ್ ಕಾಂಚನ್ ಅಧ್ಯಕ್ಷತೆಯಲ್ಲಿ ಸೆ.11ರಂದು ಬೆಳಿಗ್ಗೆ 9.30ಕ್ಕೆ ಅಮ್ಮಣ್ಣಿ ಶೆಟ್ಟಿ ಸಭಾ ಭವನದಲ್ಲಿ ನಡೆಯಲಿದೆ ಎಂದು ವಿಶೇಷ ಕರ್ತವ್ಯ ನಿರ್ವಹಣಾಧಿಕಾರಿ ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದರು.

ಶನಿವಾರ ಡಯಾನಾ ಹೋಟೆಲ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 1918ರಲ್ಲಿ ಸ್ಥಾಪನೆಗೊಂಡು 1985ರ ನಂತರ ಹೊಸ ಆಡಳಿತ ಮಂಡಳಿಯೊಂದಿಗೆ ರಚನೆಯಾದ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಸಾಧನೆಯ ಹಾದಿಯಲ್ಲಿದ್ದು, ಸತತ 2 ಬಾರಿ ಕೇಂದ್ರ ಸರ್ಕಾರದಿಂದ ಕೊಡಮಾಡುವ ರಾಷ್ಟ್ರಮಟ್ಟದ ಎನ್‌ಸಿಡಿಸಿ ಪ್ರಶಸ್ತಿ, 7 ಬಾರಿ ರಾಜ್ಯ ಮಟ್ಟದ ಸಹಕಾರ ಪ್ರಶಸ್ತಿ, 16 ಬಾರಿ ಅವಿಭಜಿತ ದಕ್ಷಿನ ಜಿಲ್ಲಾ ಮಟ್ಟದ ಪ್ರಶಸ್ತಿಯನ್ನು ಪಡೆದುಕೊಂಡಿದೆ ಎಂದರು.

ಕಳೆದ ವರ್ಷ ₹ 1541 ಕೋಟಿ ವಹಿವಾಟು ನಡೆಸಿರುವ ಸೊಸೈಟಿಯು ₹ 9.11 ಕೋಟಿ ನಿವ್ವಳ ಲಾಭ ಗಳಿಸಿತ್ತು. ಈ ವರ್ಷ ಲಾಭದ ಪ್ರಮಾಣ ಹೆಚ್ಚಾಗಿದೆ. ಸಾಮಾನ್ಯ ಸಭೆಯಲ್ಲಿ 2021–22ನೇ ಸಾಲಿನ ವಾರ್ಷಿಕ ವರದಿ ಮಂಡನೆಯಾಗಲಿದೆ. ಬಳಿಕ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಪೂರ್ಣಾಂಕ ಪಡೆದ ಮಕ್ಕಳನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.

ಸೊಸೈಟಿಯ ಶತಮಾನೋತ್ಸವಕ್ಕೆ ₹ 1.40 ಕೋಟಿಗೂ ಹೆಚ್ಚು ವೆಚ್ಚದಲ್ಲಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ನಡೆಸಲಾಗಿದೆ. ಕೋವಿಡ್‌ ಸಂದರ್ಭ ಸೋಂಕು ತಡೆಗೆ ಜಾಗೃತಿ ಕರಪತ್ರ, ಮಾಸ್ಕ್‌, ಸ್ಯಾನಿಟೈಸರ್ ವಿತರಿಸಲಾಗಿದೆ. ವಲಸೆ ಕಾರ್ಮಿಕರಿಗೆ, ಬಡವರಿಗೆ ಆಹಾರದ ಕಿಟ್‌ಗಳನ್ನು ವಿತರಿಸಲಾಗಿದೆ. ಲೊಂಬಾರ್ಡ್‌ ಆಸ್ಪತ್ರೆಗೆ ₹ 6 ಲಕ್ಷ ಮೌಲ್ಯದ ಐಸಿಯು ವೆಂಟಿಲೇಟರ್‌ ಕೊಡುಗೆ ನೀಡಲಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಗೆ ₹ 5 ಲಕ್ಷ ದೇಣಿಗೆ ನೀಡಲಾಗಿದೆ. ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ವಿವರ ನೀಡಿದರು.

ಸೇಫ್ ಲಾಕರ್‌, ಇ ಸ್ಟಾಂಪಿಂಗ್, ಪಾನ್‌ ಕಾರ್ಡ್‌, ನೆಫ್ಟ್‌, ಆರ್‌ಟಿಜಿಎಸ್‌ ಸೇರಿದಂತೆ ಡಿಜಿಟಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲಾಗಿದೆ. ಸಂಘವು 10 ಶಾಖೆಗಳನ್ನು ಹೊಂದಿದ್ದು ವ್ಯವಹರಿಸುತ್ತಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷರಾದ ಸಂಜೀವ್ ಕಾಂಚನ್‌, ಉಪಾಧ್ಯಕ್ಷ ಎಲ್‌.ಉಮಾನಾಥ್‌ ಇದ್ದರು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.