ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮಹಾಂತ ಜೋಳಿಗೆ’ ಹರಿಕಾರ ಇನ್ನಿಲ್ಲ!

ದುಶ್ಚಟಗಳ ವಿರುದ್ಧ ಜನಾಂದೋಲನ ರೂಪಿಸಿದ್ದ ಶ್ರೀಗಳು
Last Updated 20 ಮೇ 2018, 13:29 IST
ಅಕ್ಷರ ಗಾತ್ರ

ಬಾಗಲಕೋಟೆ: ಪ್ರತಿರೋಧಗಳೊಂದಿಗೆ ಮುಖಾಮುಖಿಯಾಗುತ್ತಲೇ ನಾಲ್ಕು ದಶಕಗಳ ಕಾಲ ನಾಡಿನಾದ್ಯಂತ ಬಸವಣ್ಣನ ಆಶಯಗಳ ನಿಜ ಸಾಕಾರಕ್ಕೆ ಇಂಬು ನೀಡಿದ್ದ ಇಳಕಲ್‌ನ ಡಾ.ಮಹಾಂತ ಸ್ವಾಮೀಜಿ ನಿಧನದಿಂದ ಬಸವ ಪರಂಪರೆಯ ದೊಡ್ಡ ಕೊಂಡಿ ಕಳಚಿದಂತಾಗಿದೆ.

ನೇಕಾರಿಕೆಯನ್ನು ಜೀವ ವಾಗಿಸಿಕೊಂಡ ಪುಟ್ಟ ನಗರ ಇಳಕಲ್‌ ಅನ್ನು ಕಾರ್ಯಕ್ಷೇತ್ರವಾಗಿಸಿಕೊಂಡ ಚಿತ್ತರಗಿ ವಿಜಯಮಹಾಂತೇಶ ಮಠದ 16ನೇ ಪೀಠಾಧಿಪತಿಯಾಗಿದ್ದ ಮಹಾಂತ ಶ್ರೀಗಳು, ನಿತ್ಯದ ಬದುಕಲ್ಲಿ ಬಸವಣ್ಣನ ತತ್ವಗಳ ಸ್ಥಿರೀಕರಿಸುವ ಕಾಯಕ ಕೈಗೊಂಡಿದ್ದರು. ಆ ಹಾದಿಯಲ್ಲಿಯೇ, ಅಡ್ಡಪಲ್ಲಕ್ಕಿಯಲ್ಲಿ ವಿರಾಜಮಾನವಾಗಿ ಭಕ್ತರಿಂದ ಹೊತ್ತು ಮೆರೆಸಿಕೊಳ್ಳುವ ಅವಕಾಶ ನಿರಾಕರಿಸಿದರು. ಅಲ್ಲಿ ವಚನ ತಾಡೋಲೆಗಳ ಕಟ್ಟು ಇಡಿಸಿದರು. ಕಳಶದ ಮೆರುಗಿನಡಿ ವಚನಗ್ರಂಥಗಳನ್ನು ಇರಿಸಿ ತೇರು ಎಳೆಸಿ, ಅದನ್ನು ಶರಣ ಪರಂಪರೆಯ ಚಲನಶೀಲತೆಗೆ ಅಸ್ಮಿತೆಯಾಗಿಸಿದರು.

ಈ ಪ್ರಯೋಗದಲ್ಲಿ ಮಹಾಂತರಿಗೆ ಸದಾ ಸಾಥ್ ನೀಡಿ, ಅವರಿಗೆ ಅಗಾಧ ಶಕ್ತಿ ತುಂಬಿದ್ದು ಮಾತ್ರ ಪುಟ್ಟ ಜೋಳಿಗೆ ಹಾಗೂ ಅಸಂಖ್ಯಾತ ಅನುಯಾಯಿಗಳ ಬಳಗ. ‘ಮಹಾಂತ ಜೋಳಿಗೆ’ ಎಂದೇ ಜನಜನಿತವಾಗಿದ್ದ ಬಟ್ಟೆಯ ತುಂಡು ಹೆಗಲಿಗೆ ಹಾಕಿಕೊಂಡು ದುಶ್ಚಟಗಳ ವಿರುದ್ಧ ಸಮರವನ್ನೇ ಸಾರಿದ್ದರು.

ಆರೋಗ್ಯಯುತ ಸಮಾಜ ನಿರ್ಮಾಣಕ್ಕೆ ಪ್ರವಚನಗಳು ದೀರ್ಘಕಾಲ ಪ್ರಭಾವಿಯಾಗುವುದಿಲ್ಲ. ಜನರಲ್ಲಿನ ಕರ್ತೃತ್ವ ಶಕ್ತಿ ಬಲಗೊಳಿಸುವುದೊಂದೇ ಹಾದಿ ಎಂಬುದನ್ನ ಅರಿತಿದ್ದರು. ಅದೊಮ್ಮೆ ಜೋಳಿಗೆ ಹಿಡಿದು ಸಮಾಜಮುಖಿಯಾದರು. ಅವರ ಜೋಳಿಗೆ, ಯಾವತ್ತೂ ಸಂಪತ್ತು ಬೇಡಲಿಲ್ಲ. ಬದಲಿಗೆ ದುಶ್ಚಟಗಳ ಬಿಡುವಂತೆ ಯುವಜನರನ್ನು ಬೇಡಿತು. ಶ್ರೀಗಳು ಜೋಳಿಗೆ ಹಿಡಿಯುತ್ತಿದ್ದಂತೆಯೇ ರಾಶಿ ರಾಶಿ ಮದ್ಯದ ಬಾಟಲಿ, ಬೀಡಿ, ಸಿಗರೇಟ್, ತಂಬಾಕು, ಗುಟ್ಕಾ ಸ್ಯಾಶೆಗಳು ಅದರಲ್ಲಿ ಬಂದು ಬಿದ್ದವು.

ಎಲ್ಲವನ್ನೂ ಸಾರ್ವಜನಿಕವಾಗಿ ಸುಟ್ಟು ಹಾಕಿದರು. ಚಟ ಮಾಡುತ್ತಿದ್ದವರ ಆತ್ಮಸಾಕ್ಷಿ ಇಲ್ಲವೇ, ಅವರು ನಂಬಿದ್ದ ದೇವರನ್ನೇ ಕಾವಲಿಗೆ ನೇಮಿಸಿ ಮುಂದಡಿ ಇಡುತ್ತಿದ್ದರು. ಈ ಕಾರ್ಯ ಅಂದೊಮ್ಮೆ ಜನಾಂದೋಲನವಾಗಿ ರೂಪುಗೊಂಡಿತ್ತು.

ರಾಜ್ಯದ ಉದ್ದಗಲಕ್ಕೂ ಸಾವಿರಾರು ಹಳ್ಳಿ, ಪಟ್ಟಣ ಸುತ್ತಿದರು. ದಲಿತರ ಕೇರಿಗಳಿಗೂ ಹೋಗಿ, ಕೈಹಿಡಿದು ದುಶ್ಚಟಗಳಿಂದ ದೂರ ಇರುವಂತೆ ಮನವೊಲಿಸಿದರು. ಈ ಪರಿವರ್ತನೆ ಹಾದಿಯಲ್ಲಿ ಸಾವಿರಾರು ಮಂದಿ ವ್ಯಸನ ಮುಕ್ತಗೊಂಡರು.

ಇಳಕಲ್ ಮಠಕ್ಕೆ ವಚನಗಳೇ ಸಂವಿಧಾನ, ಬಸವಣ್ಣನೇ ಆರಾಧ್ಯ ಗುರು ಎಂಬುದನ್ನು ಒತ್ತಿ ಹೇಳಿದ ಶ್ರೀಗಳು, ಮಠದಿಂದಲೇ ಬಸವತತ್ವದ ಅನುಷ್ಠಾನ ಆರಂಭಿಸಿದರು. ಮೌಢ್ಯಗಳಿಗೆ ಮಣಿಯದಂತೆ ಭಕ್ತರಿಗೆ ತಿಳಿವಳಿಕೆ ನೀಡಿ, ನಾಗರಪಂಚಮಿಯನ್ನು ಹಾಲು ಕುಡಿಯುವ ಹಬ್ಬವಾಗಿಸಿದರು.

ಶ್ರಾವಣ ಮಾಸದ ಜಾತ್ರೆ ಶರಣ ಸಂಸ್ಕೃತಿ ಮಹೋತ್ಸವವಾಗಿ ಬದಲಾಯಿತು. ಜಾತಿ ಭೇದವಿಲ್ಲದೇ ಲಿಂಗದೀಕ್ಷೆ ನೀಡಿ, ಸಹಪಂಕ್ತಿ ಭೋಜನದ ವ್ಯವಸ್ಥೆ ಮಾಡಿದರು. ಅಕ್ಷತೆ ಚೆಲ್ಲುವ ಬದಲಿಗೆ ಪುಷ್ಪವೃಷ್ಟಿಗೈದು ಮದುವೆ ಮಾಡಿಸಿದರು. ಮದುವೆಯ ಧಾರೆ ಕಾರ್ಯದ ವೇಳೆ ವಚನ ಮಂತ್ರಗಳ ಬಳಕೆಗೆ ತಂದರು. ವಿಧವೆಯರಿಗೂ ಧಾರ್ಮಿಕ ಕಾರ್ಯಕ್ಕೆ ಅವಕಾಶ ನೀಡಿದ್ದರು.

ಸವಾಲು ಸ್ವೀಕರಿಸಿದ್ದ ಬಗೆ..

ಬೀದರ್‌ನಲ್ಲಿ ನಡೆದ ಬಸವತತ್ವ ಸಮಾವೇಶಲ್ಲಿ ಪಾಲ್ಗೊಂಡಿದ್ದ ಆಗಿನ ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್, ಬಸವ ಧರ್ಮ ನಿಷ್ಠ ಮಠಾಧೀಶರು ಮಠಗಳಿಗೆ ದಲಿತರನ್ನು ಪೀಠಾಧಿಪತಿಯಾಗಿ ನೇಮಕ ಮಾಡುವ ಧೈರ್ಯ ತೋರಬಲ್ಲಿರಾ? ಎಂದು ಸವಾಲು ಹಾಕಿದ್ದರು. ಅದನ್ನು ಸ್ವೀಕರಿಸಿದ್ದ ಶ್ರೀಗಳು, ತಮ್ಮ ಪೀಠದ ಲಿಂಗಸೂರು ಶಾಖಾ ಮಠಕ್ಕೆ ಲಂಬಾಣಿ ಸಮುದಾಯದ ಸಿದ್ದಲಿಂಗ ಸ್ವಾಮೀಜಿ, ಕೆ.ಆರ್.ಪೇಟೆ ತಾಲ್ಲೂಕಿನ ಸಿದ್ದಯ್ಯನಕೋಟೆ ಮಠಕ್ಕೆ ದಲಿತರಾದ ಬಸವಲಿಂಗ ಸ್ವಾಮೀಜಿ ಅವರನ್ನು ನೇಮಕ ಮಾಡಿದ್ದರು.

ಇಳಕಲ್‌ ಮಠದ ಉತ್ತರಾಧಿಕಾರಿಯಾಗಿ ಜಂಗಮರಲ್ಲದ ಗುರು ಮಹಾಂತ ಶ್ರೀಗಳನ್ನು ನೇಮಕ ಮಾಡಿದ್ದನ್ನು ವಿರೋಧಿಸಿ ಕೆಲವರು 2004ರ ಆಗಸ್ಟ್ 30 ರಂದು ಶ್ರೀಗಳ ಮೇಲೆ ಹಲ್ಲೆ ನಡೆಸಿದ್ದರು. ಅದಕ್ಕೆ ಜಗ್ಗದ ಶ್ರೀಗಳು ಗುರು ಮಹಾಂತರಿಗೆ ದೀಕ್ಷೆ ನೀಡಿದ್ದರು.

‘ಲಿಂಗಾಯತ ಧರ್ಮದ ಕೊಂಡಿ ಕಳಚಿದೆ’ ಸ್ವಾಮೀಜಿ ಬಸವತತ್ವ ಪ್ರೇಮಿಗಳು. ಶರಣ ಪರಂಪರೆಯನ್ನು ಚಾಚೂ ತಪ್ಪದೇ ಅನುಷ್ಠಾನದಲ್ಲಿ ತರುತ್ತಿದ್ದರು. ನಮ್ಮೊಂದಿಗೆ ವಿಶೇಷ ಸಂಬಂಧ ಇಟ್ಟುಕೊಂಡಿದ್ದರು. ಜನರಲ್ಲಿನ ದುಶ್ಚಟ ಬಿಡಿಸಲು ಜೋಳಿಗೆ ಹಾಕಿ ಬಿಡಿಸಿದವರು. ಇಂತಹ ಹಿರಿಯ ಚೇತನ ಅಗಲಿದ್ದು, ಬಸವ ತತ್ವ, ಸಿದ್ಧಾಂತಗಳನ್ನು ಪ್ರಚಾರ ಮಾಡುವ ವ್ಯಕ್ತಿಗಳಿಗೆ ತುಂಬಾ ನೋವು ಉಂಟು ಮಾಡಿದೆ. ಲಿಂಗಾಯತ ಧರ್ಮದ ಒಂದು ಕೊಂಡಿ ಕಳಚಿದಂತಾಗಿದೆ.
–ಪಂಡಿತಾರಾಧ್ಯ ಸ್ವಾಮೀಜಿ, ತರಳಬಾಳು ಶಾಖಾಮಠ, ಸಾಣೆಹಳ್ಳಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT