ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾತ್ರಿ ರಾಗಗಳ ಮಧುರ ನಾದ ನದಿ

Last Updated 1 ಫೆಬ್ರುವರಿ 2018, 4:57 IST
ಅಕ್ಷರ ಗಾತ್ರ

ನಗರದ ಕೆ.ಆರ್‌.ರಸ್ತೆಯಲ್ಲಿರುವ ಗಾಯನ ಸಮಾಜದ ಸಭಾಂಗಣ ಅಂದು ಸಂಜೆ ನಿರೀಕ್ಷೆಯಂತೆ ಸಂಗೀತ ಕಛೇರಿಗಿಂತ ಸಾಕಷ್ಟು ಸಮಯ ಮೊದಲೇ ಭರ್ತಿಯಾಗಿತ್ತು! ಹಿಂದೂಸ್ತಾನಿ ಗಾಯನದ ಸವಿ ಜೇನು ಅಂದು ಸಂಗೀತ ರಸಿಕರ ಮನದಾಳಕ್ಕೆ ಇಳಿದು ಹೃದಯ ತಟ್ಟಿತ್ತು.

‘ಸಂಗೀತವೇ ನಮಗೆ ಪೂಜೆ’ ಎನ್ನುತ್ತಲೇ ಹಿಂದೂಸ್ತಾನಿ ಸಂಗೀತದ ಬನಾರಸ್‌ ಘರಾಣೆಯ ವಿಶ್ವವಿಖ್ಯಾತ ಕಲಾವಿದರಾದ ಪಂ.ರಾಜನ್‌ ಮಿಶ್ರಾ ತಂಬೂರಿಯ ನಾದಕ್ಕೆ ತಮ್ಮ ಶಾರೀರವನ್ನು ಸೇರಿಸಲಾರಂಭಿಸಿದರು. ಅವರ ಸಹೋದರ ಪಂ.ಸಾಜನ್‌ ಮಿಶ್ರಾ ಇದೇ ಸ್ವರವನ್ನು ಅನುಸರಿಸಿದರು. ಗೋಧೂಳಿ ಸಮಯವಾದರೂ ಈ ಗಾಯಕರು ಆಯ್ದುಕೊಂಡದ್ದು ರಾತ್ರಿಯ ಸುಮಧುರ ರಾಗ ‘ಬಿಹಾಗ್‌’. ಇದಕ್ಕೆ ಕಾರಣವನ್ನೂ ಸ್ಪಷ್ಟಪಡಿಸಿದರು. ಸಂಜೆಯ ಸುಮಧುರ ರಾಗಗಳನ್ನು ಬೆಂಗಳೂರಿನ ಅನೇಕ ವೇದಿಕೆಗಳಲ್ಲಿ ಹಾಡಿದ್ದೇವೆ, ಕೇಳುಗರಿಗೂ ಸಂಜೆಯ ರಾಗಗಳನ್ನು ಸವಿಯುವ ಅವಕಾಶ ಆಗಾಗ್ಗೆ ಸಿಗುತ್ತದೆ. ಆದರೆ ರಾತ್ರಿಯ ರಾಗಗಳ ಮಾಧುರ್ಯ ಸವಿಯುವ ಅವಕಾಶ ಸಿಗಲಿ ಎಂಬುದೇ ನಮ್ಮ ಆಶಯ ಎಂದರು ಪಂ.ರಾಜನ್‌ ಮಿಶ್ರಾ.

ಬಿಹಾಗ್‌ ರಾಗ ಕಲ್ಯಾಣ್‌ ಥಾಟ್‌ನಲ್ಲಿ ಬರುವ ‘ಔಡವ–ಸಂಪೂರ್ಣ–ವಕ್ರ’ ಜಾತಿಯ ರಾಗ. ಈ ರಾಗದ ಬಂದೀಶ್‌ ‘ಏ ಜಗ್‌ ಜೀವನ್‌ ತೋಡಾ.. ಸಮಜ್‌ ಬೂಜ್‌ ಅಬ್‌ ದೇಖಲೇ..’ಯನ್ನು ಹಿತಮಿತವಾದ ಆಲಾಪದೊಂದಿಗೆ ಆರಂಭಿಸಿದರು. ವಿಲಂಬಿತ್‌ ಏಕ್‌ತಾಲ್‌ ಲಯದೊಂದಿಗೆ ಹಾಡಿದ ಈ ಬಂದೀಶ್‌ ಅತ್ಯಂತ ಆಪ್ಯಾಯಮಾನವಾಗಿತ್ತು. ಅಧ್ಯಾತ್ಮ ಚಿಂತನೆಗಳನ್ನು ಬಿಂಬಿಸುವಂಥ ಶಕ್ತಿ ಇರುವ ಈ ಬಂದೀಶ್‌ ಹೊಸ ಅನುಭವವನ್ನು ನೀಡಿತು. ಗಾಯನದ ವಿಲಂಬಿತ್‌ ಹಂತದಿಂದ ಮೆಲ್ಲಮೆಲ್ಲನೆ ಸ್ವರಗಳನ್ನು ಏರಿಸುತ್ತಾ, ಜಾರಿಸುತ್ತಾ ವಾದಿ ಸಂವಾದಿ ಸ್ವರಗಳೊಂದಿಗೆ ಆಟವಾಡುತ್ತಾ ಗಾಯಕರು ಧೃತ್‌ಗೆ ಬರುವಾಗ ಕೇಳುಗರು ಸಂಗೀತ ಸಾಗರದಲ್ಲಿ ಸಂಪೂರ್ಣವಾಗಿ ಮುಳುಗಿದ್ದರು. ಅದಾಗಿ ತುಂಟ ಕೃಷ್ಣನ ಲೀಲೆಗಳನ್ನು ಸಾರುವ ಮತ್ತೊಂದು ರಚನೆ ‘ಜಸುಮತಿ ಜುಲಾಮೆ ಲಗ್‌ನಾ.. ಪಲ್‌ನಾ..’ ತೀನ್‌ತಾಲ್‌ನಲ್ಲಿ ಪ್ರಸ್ತುತಪಡಿಸಿದರು.

ಗಾಯನದಲ್ಲಿ ಆಕರ್ಷಕವಾದ ಸ್ವರಗಳು, ತಾನ್‌ಗಳು, ಆಕಾರ್‌ಗಳು ಮೊಳಮೊಳಗುತ್ತಾ ಸಾಗಿದಾಗ ವಿಶೇಷವಾದ ಸಂಚಲನ ಉಂಟು ಮಾಡುವ ಜತೆಗೆ ಸಂಗೀತ ರಸಿಕರ ಕಲಾ ಸಂವೇದನೆಗೆ ನಾದದ ಸಾಥಿ ನೀಡಿದಂತಾಯಿತು. ಗಾಯನದ ಉತ್ತುಂಗಕ್ಕೇರಿದ ಬಳಿಕ ಹದವರಿತ ರಾಗದ ಛಾಯೆಯನ್ನು ಹಾಗೇ ಸುಂದರವಾದ ‘ತರಾನ’ದೊಂದಿಗೆ ಮಿಳಿತಗೊಳಿಸಿ ಪ್ರಸ್ತುತಪಡಿಸಿದ್ದು ಗಾಯಕರ ನಿಜವಾದ ಕಲಾ ಪಾಂಡಿತ್ಯವನ್ನು ಪ್ರಾಮಾಣಿಕವಾಗಿ ಅನಾವರಣಗೊಳಿಸಿದಂತಿತ್ತು. ಕೇಳುಗರ ಚಪ್ಪಾಳೆಯ ಕರತಾಡನದಿಂದ ಮತ್ತಷ್ಟು ಉತ್ತೇಜಿತರಾದ ಗಾಯಕರು ಮತ್ತೊಂದು ಸುಮಧುರ ರಾಗ ‘ಭಾಗೇಶ್ರೀ’ ಆಯ್ದುಕೊಂಡರು.

‘ಕಾಫಿ ಥಾಟ್‌’ನಲ್ಲಿರುವ ಈ ರಾಗ ಮಧ್ಯರಾತ್ರಿ ರಂಜಿಸುವಂಥದ್ದು. ಈ ರಾಗದಲ್ಲೂ ಕೃಷ್ಣನನ್ನೇ ಆರಾಧಿಸಿದರು ಈ ಗಾಯಕರು. ಧೃತ್‌ ಏಕ್‌ತಾಲ್‌ನಲ್ಲಿ ಹರಿಯುವ ಶುದ್ಧ ಜಲದಂತೆ ಸ್ವರಪುಂಜಗಳು ಮಾಧುರ್ಯಪೂರ್ಣವಾಗಿ ಸಾಗಿದವು. ಈ ಬಂದೀಶ್‌ ಹಾಡಿದ ಬೆನ್ನಲ್ಲೇ ಮತ್ತೊಂದು ‘ತರಾನ’ ಸವಿಯುವ ಅವಕಾಶ ಒದಗಿಸಿಕೊಟ್ಟರು. ಇದು ರೂಪಕ್ ತಾಲ್‌ನಲ್ಲಿತ್ತು.

ಕೇಳುಗರು ಎಂದಿಗೂ ಇಷ್ಟಪಡುವ ರಾಗ ‘ದರ್ಬಾರಿ ಕಾನಡ’. ರಾತ್ರಿಯ ಮೂರನೇ ಪ್ರಹರದ ಈ ರಾಗಕ್ಕೆ ಸಂಪೂರ್ಣ ನ್ಯಾಯ ಒದಗಿಸಿದ ಈ ಜುಗಲ್‌ಬಂದಿ ಗಾಯಕರು ತೀನ್‌ತಾಲ್‌ನಲ್ಲಿ ‘ನಾದ ಅಪಾರ್‌ ಉದದಿ ಗಂಭೀರ್‌..’ ಬಂದೀಶ್‌ ಹಾಡಿದಾಗ ಕೇಳುಗರು ಸಂಗೀತ ನಾದದಲ್ಲಿ ಕರಗಿದರು, ಹಾಲಿನಲ್ಲಿ ಸಕ್ಕರೆ ಕರಗಿದಂತೆ ಮಾರ್ದನಿಸಿತು ಆ ಸುನಾದ.

ಸಂಗೀತ ನಾದ ಎಂದೆಂದಿಗೂ ಅನಂತ, ಅದೂ ಸಾಗರದಂತೆ ಎಂಬ ಉಪಮೆಯನ್ನು ನೀಡುತ್ತಾ ರಾಗವನ್ನು ಸೊಗಸಾಗಿ ಪ್ರಸ್ತುತಪಡಿಸಿದರು. ‘ಅಸಾವರಿ ಥಾಟ್‌’ನಲ್ಲಿ ಬರುವ ಈ ರಾಗದಲ್ಲಿ ದಳದಳವಾಗಿ ಅರಳಿದವು. ಬನಾರಸ್‌ ‘ಗಾಯಕಿ’ಯ ಅಂಗವಾದ ಸ್ವರ, ಆಕಾರ್‌, ಬೋಲ್‌ ತಾನ್‌ಗಳು ಸಹೃದಯರ ಹೃದಯಕ್ಕೆ ಮಾಧುರ್ಯದ ಸಿಂಚನ ನೀಡಿದವು, ಸೊಬಗಿನಿಂದ ವಿಜೃಂಭಿಸಿದವು. ಸ್ವರಗಳು ಮಂದ್ರದಿಂದ ಅತಿತಾರಕದವರೆಗೆ ಲೀಲಾಜಾಲವಾಗಿ ಸಂಚರಿಸಿದವು.

ಸಂಗೀತ ಕಛೇರಿಯ ಕೊನೆಯಲ್ಲಿ ಅತ್ಯಂತ ಜನಪ್ರಿಯ ಬಂದೀಶ್‌ ‘ಕಿನ್‌ ಬ್ಯಾರೆನ್‌ ಖಾನಾಬರೆ..’ ಹಾಡಿದರು. ಹೆಚ್ಚಿನ ಸ್ವರಗಳನ್ನು ಪೋಣಿಸದೆ ರಾಗಕ್ಕೆ, ಭಾವಕ್ಕೆ, ಸಾಹಿತ್ಯಕ್ಕೆ ಒತ್ತು ನೀಡಿ ಹಾಡಿದ್ದು ಕೂಡ ಕೇಳುಗರಿಗೆ ಎಂದೆಂದಿಗೂ ನೆನಪಿನಂಗಳದಲ್ಲಿ ಉಳಿಯುವಂತೆ ಮಾಡಿತ್ತು. ತಬಲಾದಲ್ಲಿ ದೇವಶಿಶ್‌ ಅಧಿಕಾರಿ ಹಾಗೂ ಹಾರ್ಮೋನಿಯಂನಲ್ಲಿ ವ್ಯಾಸಮೂರ್ತಿ ಕಟ್ಟಿ ಸಹಕರಿಸಿದ್ದರು.

ಕೋರಮಂಗಲದ ಸಂಗೀತ ಸಾಧನಾ ಸಂಸ್ಥೆ ಕಾರ್ಯಕ್ರಮವನ್ನು ಆಯೋಜಿಸಿದ್ದು, ಸಂಸ್ಥೆಯ ರೂವಾರಿ ಅನಿಂದಿತಾ ಮುಖರ್ಜಿ ಅವರ ನೇತೃತ್ವದಲ್ಲಿ ಸಂಗೀತ ಕಛೇರಿ ಅಚ್ಚುಕಟ್ಟಾಗಿ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT