ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಪೆ ಬೀಚ್‌ ಅಭಿವೃದ್ಧಿಗೆ ಸಮಗ್ರ ನೀಲನಕ್ಷೆ: ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್

ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್
Last Updated 28 ಸೆಪ್ಟೆಂಬರ್ 2021, 15:11 IST
ಅಕ್ಷರ ಗಾತ್ರ

ಉಡುಪಿ: ಮಲ್ಪೆ ಬೀಚ್‌ಗೆ ಬರುವ ಪ್ರವಾಸಿಗರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸುವುದರ ಜತೆಗೆ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್ ಹೇಳಿದರು.

ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ನಡೆದ ಮಲ್ಪೆ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಮಾತನಾಡಿ, ಮಲ್ಪೆ ಬೀಚ್‌ಗೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಿದ್ದು, ಕುಡಿಯುವ ನೀರು, ವಾಹನಗಳ ಸುಗಮ ಸಂಚಾರಕ್ಕೆ ಉತ್ತಮ ರಸ್ತೆ, ಪಾರ್ಕಿಂಗ್, ಶೌಚಾಲಯಗಳ ವ್ಯವಸ್ಥೆ ಮಾಡಬೇಕು. ಪ್ರವಾಸಿಗರನ್ನು ಆಕರ್ಷಿಸಲು ಕ್ರಮಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಮಲ್ಪೆ ಬೀಚ್‌ನಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿ ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು, ಕಾಲಮಿತಿಯೊಳಗೆ ಮುಗಿಸಿ ಪ್ರವಾಸಿಗರ ಉಪಯೋಗಕ್ಕೆ ಅನುವು ಮಾಡಿಕೊಡಬೇಕು ಎಂದರು.

ಮುಂದಿನ 20 ವರ್ಷಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಮಲ್ಪೆ ಬೀಚ್‌ಗೆ ಅತ್ಯಾಧುನಿಕ ಮೂಲಸೌಕರ್ಯಗಳನ್ನೊಳಗೊಂಡ ಸಮಗ್ರ ಅಭಿವೃದ್ದಿಯ ನೀಲ ನಕಾಶೆ ಸಿದ್ಧಪಡಿಸಬೇಕು. ಮಲ್ಪೆಯಿಂದ ಸೇಂಟ್‌ಮೇರಿಸ್ ದ್ವೀಪಕ್ಕೆ ಪ್ರವಾಸಿಗರನ್ನು ಕರೆದೊಯ್ಯುವ ಸ್ಪೀಡ್‌ ಬೋಟ್‌ಗಳು, ಬಂದರಿನಿಂದ ದ್ವೀಪಕ್ಕೆ ತೆರಳುವ ದೊಡ್ಡ ಬೋಟ್‌ಗಳು, ಬೀಚ್‌ನಲ್ಲಿ ತಿರುಗುವ ರೌಂಡಿಂಗ್ ಬೋಟ್ ಹಾಗೂ ವಾಟರ್ ಬೋಟ್‌ಗಳು, ಜಲಕ್ರೀಡೆಗಳನ್ನು ಆಯೋಜಿಸಲು ಟೆಂಡರ್ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

ಸಮುದ್ರದದಲ್ಲಿ ಅಪಾಯಕಾರಿ ಸ್ಥಳಗಳ ಬಗ್ಗೆ ಮಾಹಿತಿ ಕೊರತೆಯಿಂದಾಗಿ ಪ್ರಾಣಾಪಾಯಗಳು ಸಂಭವಿಸುತ್ತಿವೆ. ಈ ಬಗ್ಗೆ ಪ್ರವಾಸಿಗರಿಗೆ ಅರಿವು ಮೂಡಿಸಬೇಕಿದ್ದು, ತೀರದಲ್ಲಿ ಮೈಕ್ ಮೂಲಕ ಎಚ್ಚರಿಕೆ ಸಂದೇಶಗಳನ್ನು ರವಾನಿಸಬೇಕು. ಅಪಾಯಕ್ಕೆ ಒಳಗಾದವರನ್ನು ರಕ್ಷಿಸಲು ಅಗತ್ಯ ಜೀವರಕ್ಷಕ ಸಿಬ್ಬಂದಿ ನಿಯೋಜಿಸಬೇಕು ಎಂದು ಸೂಚಿಸಿದರು.

ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಪಡುಕೆರೆ ಬೀಚ್ ಉತ್ತಮ ಪ್ರವಾಸಿ ಸ್ಥಳವಾಗಿದ್ದು, ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ. ಅಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸಬೇಕು. ಬೀಚ್ ನಿರ್ವಹಣೆಗೆ ಸ್ಥಳೀಯರನ್ನು ಒಳಗೊಂಡಂತೆ, ಭಜನಾ ಮಂದಿರಗಳ ಸದಸ್ಯರು ಮತ್ತು ಸಂಘ ಸಂಸ್ಥೆಗಳ ಪದಾಧಿಕಾರಿಗಳ ಸಮಿತಿ ರಚಿಸಬೇಕು ಎಂದರು.

ಬೀಚ್‌ನಲ್ಲಿ ಪ್ರವಾಸಿಗರಿಗೆ ಮನರಂಜನೆ ಹಾಗೂ ಪ್ರಕೃತಿ ಸೌಂದರ್ಯ ಸವಿಯಲು ಪ್ರವಾಸಿ ಬೋಟುಗಳ ಸಂಖ್ಯೆ ಹೆಚ್ಚಿಸಿ, ಜಲಕ್ರೀಡೆ ಹಾಗೂ ಇತರೆ ಚಟುವಟಿಕೆಗಳಿಗೆ ಆದ್ಯತೆ ನೀಡಿ ಎಂದು ಸಲಹೆ ನೀಡಿದರು.

ಪಡುಕೆರೆ ಸಮುದ್ರತೀರಕ್ಕೆ ಹೊಂದಿಕೊಂಡಿರವ ಸರ್ಕಾರಿ ಜಾಗವನ್ನು ಮರಿನ್ ಬೋರ್ಡ್‌ ಹಸ್ತಾಂತರಿಸಲು ಸರ್ಕಾರಕ್ಕೆ ಪತ್ರ ಬರೆಯುವಂತೆ ಶಾಸಕರು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮಾತನಾಡಿ, ಜಿಲ್ಲೆಯ ಕಲೆ, ಸಂಸ್ಕೃತಿ ಪ್ರತಿಬಿಂಬಿಸುವ ಕರಕುಶಲ ವಸ್ತಗಳನ್ನು ಮಾರಾಟಕ್ಕೆ ಅನುಕೂಲವಾಗುವಂತೆ ಸೀವಾಕ್ ಪ್ರದೇಶದಲ್ಲಿ ಮಳಿಗೆ ಆರಂಭಿಸಬೇಕು. ಇದರಿಂದ ಸ್ಳೀಯರಿಗೆ ಉದ್ಯೋಗದ ಜತೆಗೆ ಆರ್ಥಿಕ ಶಕ್ತಿ ಸಿಗಲಿದೆ ಎಂದು ಸಲಹೆ ನೀಡಿದರು.

ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಉಪಾಧ್ಯಕ್ಷೆ ಲಕ್ಷ್ಮಿ ಮಂಜುನಾಥ್ ಕೊಳ, ಹೆಚ್ಚುವರಿ ಎಸ್‌ಪಿ ಕುಮಾರಚಂದ್ರ, ನಗರಾಭಿವೃದ್ಧಿ ಪ್ರಾಧಿಕಾರದ ಅದ್ಯಕ್ಷ ರಾಘವೇಂದ್ರ ಕಿಣಿ, ನಗರಸಭಾ ಪೌರಾಯುಕ್ತ ಉದಯ ಶೆಟ್ಟಿ, ನಗರಸಭಾ ಸದಸ್ಯರಾದ ಎಡ್ಲಿನ್ ಕರ್ಕಡ, ಸುಂದರ್ ಕಲ್ಮಾಡಿ, ವಿಜಯ್ ಕೊಡವೂರು, ವಿಜಯ್ ಕುಂದೂರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT