ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್ ಎರಡನೇ ಅಲೆಯ ಅಬ್ಬರ: ಬೆಡ್‌ಗಳಿಗೆ ತತ್ವಾರ

ಜಿಲ್ಲೆಯಲ್ಲಿ ಬೆಡ್ ನಿರ್ವಹಣಾ ಸಮಿತಿ ರಚನೆ; ಕೋವಿಡ್ ಸಹಾಯವಾಣಿ ಮೂಲಕ ಬೆಡ್‌ಗಳ ಹಂಚಿಕೆ
Last Updated 9 ಮೇ 2021, 19:30 IST
ಅಕ್ಷರ ಗಾತ್ರ

ಉಡುಪಿ: ಕೋವಿಡ್‌ 2ನೇ ಅಲೆಯ ತೀವ್ರತೆಯು ಜಿಲ್ಲೆಯಲ್ಲಿ ಬೆಡ್‌ಗಳ ಕೊರತೆ ಸೃಷ್ಟಿಸುತ್ತಿದೆ. ಸೋಂಕು ಹೆಚ್ಚುತ್ತಿದ್ದಂತೆ ಬೆಡ್‌ಗಳ ಅವಶ್ಯಕತೆ ಹೆಚ್ಚುತ್ತಿದೆ. ಈಗಾಗಲೇ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್‌ ರೋಗಿಗಳಿಗೆ ಮೀಸಲಿಟ್ಟದ್ದ ಎಲ್ಲ ಬೆಡ್‌ಗಳು ಭರ್ತಿಯಾಗಿವೆ. ಐಸೊಲೇಷನ್‌ ವಾರ್ಡ್‌ ಕೂಡ ಸೋಂಕಿತರಿಂದ ತುಂಬಿದೆ. ಕಾರ್ಕಳ ಹಾಗೂ ಕುಂದಾಪುರ ತಾಲ್ಲೂಕು ಆಸ್ಪತ್ರೆಯ ಸ್ಥಿತಿಯೂ ಹೆಚ್ಚು ಭಿನ್ನವಾಗಿಲ್ಲ.

ಜಿಲ್ಲೆಯಲ್ಲಿರುವ ಬೆಡ್‌ಗಳೆಷ್ಟು

ಜಿಲ್ಲೆಯ ಎಲ್ಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 4,264 ಬೆಡ್‌ಗಳಿವೆ. ಇವುಗಳ ಪೈಕಿ 1,867 ಬೆಡ್‌ಗಳಿಗೆ ಆಮ್ಲಜನಕ ಪೂರೈಕೆ ವ್ಯವಸ್ಥೆ ಇದೆ. 1,835 ಜನರಲ್ ಬೆಡ್‌, 192 ಎಚ್‌ಡಿಯು (ಹೈ ಡಿಪೆಂಡೆನ್ಸಿ ಯುನಿಟ್‌) ಬೆಡ್‌, 370 ಐಸಿಯು (ತೀವ್ರ ನಿಗಾ ಘಟಕ) ಬೆಡ್‌ಗಳು ಇವೆ.

ಜಿಲ್ಲೆಯಲ್ಲಿ 4,264 ಬೆಡ್‌ಗಳು ಲಭ್ಯವಿದ್ದರೂ ಇತರೆ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ಬೆಡ್‌ ಅವಶ್ಯಕತೆ ಇರುವುದರಿಂದ ಸೋಂಕಿತರ ಚಿಕಿತ್ಸೆಗೆ 2,507 ಬೆಡ್‌ಗಳನ್ನು ಮೀಸಲಿರಿಸಲಾಗಿದೆ. ಅವುಗಳಲ್ಲಿ 1,182 ಆಮ್ಲಜನಕ ಆಧಾರಿತ ಬೆಡ್‌, 973 ಸಾಮಾನ್ಯ, 133 ಎಚ್‌ಡಿಯು ಹಾಗೂ 219 ಐಸಿಯು ಬೆಡ್‌ಗಳು ಸೋಂಕಿತರ ಚಿಕಿತ್ಸೆಗೆ ಮೀಸಲಾಗಿವೆ.

ಲಭ್ಯವಿರುವ ಬೆಡ್‌ಗಳು ಎಷ್ಟು

ಆರೋಗ್ಯ ಇಲಾಖೆ ನೀಡಿರುವ ಅಂಕಿ ಅಂಶಗಳ ಪ್ರಕಾರ (ಮೇ 8ರವರೆಗಿನ ಮಾಹಿತಿರ) ಲಭ್ಯವಿರುವ 2,507 ಬೆಡ್‌ಗಳಲ್ಲಿ 748ರಲ್ಲಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂದರೆ 1,759 ಬೆಡ್‌ಗಳು ಖಾಲಿ ಇವೆ.881 ಆಮ್ಲಜನಕ ವ್ಯವಸ್ಥೆ ಹೊಂದಿರುವ ಬೆಡ್,707 ಸಾಮಾನ್ಯ ಬೆಡ್‌, 63 ಎಚ್‌ಡಿಯು, 108 ಐಸಿಯು ಬೆಡ್‌ಗಳು ಲಭ್ಯವಿದೆ.

ಬೆಡ್‌ ಭರ್ತಿಗೆ ಕಾರಣ

ಜಿಲ್ಲೆಯಲ್ಲಿ ಕೋವಿಡ್‌ ಮೊದಲ ಅಲೆಗಿಂತ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿದೆ. ಕಳೆದ ವರ್ಷ ಗರಿಷ್ಠ ಶೇ 25 ಪಾಸಿಟಿವಿಟಿ ದರ ದಾಖಲಾಗಿತ್ತು. ಹೆಚ್ಚಿನ ಸೋಂಕಿತರು ಹೋಂ ಐಸೊಲೇಷನ್‌ನಲ್ಲಿ ಚಿಕಿತ್ಸೆ ಪಡೆದು ಗುಣಮುಖರಾದರು. ಈ ವರ್ಷ ಪಾಸಿಟಿವಿಟಿ ದರ ಶೇ 50ರ ಆಸುಪಾಸಿನಲ್ಲಿದೆ. ಪ್ರಕರಣಗಳ ಸಂಖ್ಯೆಯೂ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಆಸ್ಪತ್ರೆಗೆ ದಾಖಲಾಗುತ್ತಿರುವ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಬೆಡ್‌ಗಳು ಭರ್ತಿಯಾಗುತ್ತಿವೆ.

ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಯ ಪ್ರಕಾರ ಸಾರ್ವಜನಿಕರು ಸೋಂಕು ಪತ್ತೆಯಾದ ಕೂಡಲೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುತ್ತಿಲ್ಲ. ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯ ಗಂಭೀರವಾದಾಗ ಆಸ್ಪತ್ರೆಯತ್ತ ಧಾವಿಸುತ್ತಿದ್ದಾರೆ. ಪರಿಣಾಮ ಐಸಿಯು ಹಾಗೂ ವೆಂಟಿಲೇಟರ್‌ ಕೊರತೆ ಎದುರಾಗುತ್ತಿದೆ. ಸಾವಿನ ಪ್ರಮಾಣವೂ ಹೆಚ್ಚುತ್ತಿದೆಯಂತೆ.

ಆರೋಗ್ಯ ಇಲಾಖೆ ಸಿದ್ಧತೆ ಹೇಗಿದೆ

ಸೋಂಕು ಹೆಚ್ಚುತ್ತಿರುವ ಕಾರಣ ಬೆಡ್‌ಗಳ ಕೊರತೆ ಕಾಡಲಿದ್ದು, ಈಗಾಗಲೇ ಖಾಸಗಿ ಆಸ್ಪತ್ರೆಗಳ ಮುಖ್ಯಸ್ಥರಿಗೆ ಐಸಿಯು ಬೆಡ್‌ಗಳನ್ನು ಹೆಚ್ಚಿಸುವಂತೆ ಸೂಚಿಸಲಾಗಿದ್ದು, ಸರ್ಕಾರದಿಂದ ಅಗತ್ಯ ನೆರವು ನೀಡುವುದಾಗಿ ತಿಳಿಸಲಾಗಿದೆ. ಜತೆಗೆ ಕಡಿಮೆ ಸೋಂಕಿನ ಲಕ್ಷಣ ಇರುವವರಿಗೆ ಚಿಕಿತ್ಸೆ ನೀಡಲು ಹಾಸ್ಟೆಲ್‌, ಹೋಟೆಲ್‌, ಆಸ್ಪತ್ರೆ, ಗ್ರಂಥಾಲಯ, ಗೆಸ್ಟ್‌ ಹೌಸ್‌ಗಳಲ್ಲಿ 2,500 ಬೆಡ್‌ಗಳನ್ನು ಗುರುತಿಸಲಾಗಿದೆ ಎನ್ನುತ್ತಾರೆ ಆರೊಗ್ಯ ಇಲ್ಲಾಖೆ ಅಧಿಕಾರಿಗಳು.

ಜಿಲ್ಲೆಯಲ್ಲಿ ಹೋಂ ಕ್ವಾರಂಟೈನ್‌ನಲ್ಲಿರುವ ಸೋಂಕಿತರಗೆ ಸೂಕ್ತ ಪ್ರತ್ಯೇಕ ವಾಸದ ವ್ಯವಸ್ಥೆ ಇಲ್ಲದ ಪರಿಣಾಮ ಕುಟುಂಬದ ಸದಸ್ಯರಿಗೆ ಸೋಂಕು ಹೆಚ್ಚಾಗಿ ಹರಡುತ್ತಿರುವುದು ಕಂಡು ಬರುತ್ತಿದ್ದು, ಇದರ ತಡೆಗೆ ಕೋವಿಡ್‌ ಕೇರ್ ಕೇಂದ್ರಗಳನ್ನು ತೆರೆಯಲಾಗುತ್ತಿದೆ. ಆರಂಭಿಕ ಹಂತದಲ್ಲಿ ಮಣಿಪಾಲದಲ್ಲಿ 300 ಬೆಡ್‌, ಕುಂದಾಪುರದ ದೇವರಾಜ ಅರಸು ಹಿಂದುಳಿದ ವರ್ಗಗಳ ಹಾಸ್ಟೆಲ್‌ಗಳಲ್ಲಿ 75 ಬೆಡ್‌, ಮಿಯಾರಿನ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 60 ಬೆಡ್‌ಗಳ ಕೋವಿಡ್‌ ಕೇರ್ ಕೇಂದ್ರಗಳನ್ನು ತೆರೆಯಲಾಗಿದೆ. ಕೋವಿಡ್‌ ಕಾಲ್‌ಸೆಂಟರ್ ಸಂಪರ್ಕಿಸಿ ಕೋವಿಡ್‌ ಕೇರ್ ಸೆಂಟರ್‌ಗೆ ದಾಖಲಾಗಬೇಕು. ಮುಂದೆ ಅಗತ್ಯತೆ ಅನುಗುಣವಾಗಿ ಬೆಡ್‌ಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಶಾಸಕ ರಘುಪತಿ ಭಟ್ ತಿಳಿಸಿದರು.

ಕುಂದಾಪುರ, ಕಾರ್ಕಳ, ಉಡುಪಿ ತಾಲ್ಲೂಕಿನಲ್ಲಿ ತಲಾ 2 ಕೋವಿಡ್ ಕೇರ್ ಕೇಂದ್ರ ಹಾಗೂ ಜಿಲ್ಲೆಯ 6 ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್‌ ಕೇಂದ್ರ ಸ್ಥಾಪಿಸಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.

ಬೆಡ್‌ ನಿರ್ವಹಣೆಗೆ ಸಮಿತಿ

ಜಿಲ್ಲೆಯಲ್ಲಿ ಸೋಂಕಿತರ ಚಿಕಿತ್ಸೆಗೆ ಅಗತ್ಯ ಬೆಡ್‌ಗಳನ್ನು ಪೂರೈಸಲು ಬೆಡ್‌ ನಿರ್ವಹಣಾ ಸಮಿತಿ ರಚಿಸಲಾಗಿದೆ. ಉಡುಪಿ, ಕುಂದಾಪುರ ಹಾಗೂ ಕಾರ್ಕಳ ವ್ಯಾಪ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯವಾಣಿಯನ್ನು ಸಂಪರ್ಕಿಸಿ ಸೋಂಕಿತರು ಬೆಡ್‌ಗಳನ್ನು ಪಡೆಯಬಹುದು. ಆಯುಷ್ಮಾನ್ ಭಾರತ್ ಹಾಗೂ ಆರೋಗ್ಯ ಕರ್ನಾಟಕ ಯೋಜನೆಯಡಿ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಪಡೆಯಬೇಕಾದರೂ ಸೋಂಕಿತರು ಕೋವಿಡ್‌ ಕಾಲ್‌ ಸೆಂಟರ್ ಸಂಪರ್ಕಿಸಿಯೇ ದಾಖಲಾಗಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿರುವ ಬೆಡ್‌ಗಳು ಭರ್ತಿಯಾದ ಬಳಿಕವೇ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳ ವ್ಯವಸ್ಥೆ ಮಾಡಲಾಗುವುದು. ನೇರವಾಗಿ ಖಾಸಗಿ ಆಸ್ಪತ್ರೆಗೆ ತೆರಳಿ ದಾಖಲಾದರೆ ಉಚಿತ ಚಿಕಿತ್ಸೆ ಲಭ್ಯವಾಗುವುದಿಲ್ಲ ಎಂದು ಮಾಹಿತಿ ನೀಡಿದರು ಆರೋಗ್ಯ ಇಲಾಖೆ ಅಧಿಕಾರಿಗಳು.

‘ಕೆಎಂಸಿಯೇ ಬೇಕು ಎಂದರೆ ಕೊಡಲಾಗುವುದಿಲ್ಲ’

ಸೋಂಕಿತರು ನಿರ್ಧಿಷ್ಟವಾದ ಅಸ್ಪತ್ರೆಗಳಲ್ಲಿಯೇ ಉಚಿತ ಚಿಕಿತ್ಸೆ ನೀಡಬೇಕು ಎಂದರೆ ಸಾಧ್ಯವಿಲ್ಲ. ರೋಗಿಗಳ ಪರಿಸ್ಥಿತಿ ನೋಡಿಕೊಂಡು ಯಾವ ಮಾದರಿಯ ಚಿಕಿತ್ಸೆ ನೀಡಬೇಕು, ಯಾವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಬೇಕು ಎಂದು ಬೆಡ್ ನಿರ್ವಹಣಾ ಸಮಿತಿ ನಿರ್ಧರಿಸಲಿದೆ. ಸೋಂಕು ಕಾಣಿಸಿಕೊಂಡ ಕೂಡಲೇ ಪರೀಕ್ಷೆ ಮಾಡಿಸಿಕೊಂಡು ಚಿಕಿತ್ಸೆ ಪಡೆಯಿರಿ. ಸೋಂಕು ನಿರ್ಲಕ್ಷ್ಯ ಮಾಡಿ ಪರಿಸ್ಥಿತಿ ಗಂಭೀರವಾದ ಬಳಿಕ ಐಸಿಯು ಬೆಡ್‌ ಬೇಕು ಎಂದರೆ ಒದಗಿಸಲು ಕಷ್ಟ.

–ಜಿ.ಜಗದೀಶ್‌, ಜಿಲ್ಲಾಧಿಕಾರಿ

ಕೋವಿಡ್‌ ಕಾಲ್ ಸೆಂಟರ್‌

ಉಡುಪಿ–9663957222, 966395022

ಕುಂದಾಪುರ–7483984733, 6363862122

ಕಾರ್ಕಳ–7676227624, 7411323408, 8867292019

ಬೆಡ್‌ಗಳ ಮಾಹಿತಿ (ಮೇ 8ರವರೆಗಿನ ಮಾಹಿತಿ)

ಬೆಡ್ ಮಾದರಿ–ಒಟ್ಟು ಬೆಡ್‌–ಮೀಸಲು–ಭರ್ತಿ–ಲಭ್ಯ

ಆಮ್ಲಜನಕ ವ್ಯವಸ್ಥೆ– 1,867–1,182–301–881

ಸಾಮಾನ್ಯ ಬೆಡ್–1,835–973–266–707

ಎಚ್‌ಡಿಯು–192–133–70–63

ಐಸಿಯು–370–219–111–108

ಎಚ್‌ಎಫ್‌ಎನ್‌ಸಿ–58–31–7–24

ವೆಂಟಿಲೇಟರ್‌–161–104–86–18

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT