ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ

7
ಬೀಡಿ ಕಾರ್ಮಿಕರ ಫೆಡರೇಶನ್ ಪ್ರತಿಭಟನೆ: ಜಿಲ್ಲಾಧಿಕಾರಿಗೆ ಮನವಿ

ಬೀಡಿ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ

Published:
Updated:
Deccan Herald

ಉಡುಪಿ: ಬೀಡಿ ಕಾರ್ಮಿಕರಿಗೆ ಗುರುತಿನ ಚೀಟಿ, ಪಿಎಫ್, ಬೋನಸ್, ವಾರಕ್ಕೆ 6ದಿನ ಕೆಲಸ, ಸಮಾನ ವೇತನ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಬೇಕು ಎಂದು ಒತ್ತಾಯಿಸಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ (ಸಿಐಟಿಯು) ಶನಿವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಮಣಿಪಾಲದ ಟೈಗರ್ ಸರ್ಕಲ್‌ನಿಂದ ಸಿಂಡಿಕೇಟ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ತಲುಪಿದ ಮೆರವಣಿಗೆಯಲ್ಲಿ ನೂರಾರು ಬೀಡಿ ಕಾರ್ಮಿಕ ಮಹಿಳೆಯರು ಭಾಗವಹಿಸಿದ್ದರು. ಬಳಿಕ ಸರ್ಕಾರದ ಹಾಗೂ ಬೀಡಿ ಕಂಪೆನಿ ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 

ಸಾವಿರ ಬೀಡಿಗೆ ₹ 350 ಕೂಲಿ ನೀಡಬೇಕು. ಬಿಪಿಎಲ್ ಪಡಿತರ ಕಾರ್ಡ್ ಹಾಗೂ ಉಚಿತ ವಸತಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.

ಉಡುಪಿ ಜಿಲ್ಲಾ ಬೀಡಿ ಕಾರ್ಮಿಕರ ಫೆಡರೇಶನ್ ಅಧ್ಯಕ್ಷ ಮಹಾಬಲ ವಡೇರ ಹೋಬಳಿ ಮಾತನಾಡಿ, 2020ರ ವೇಳೆಗೆ ತಂಬಾಕು ಉತ್ಪನ್ನಗಳನ್ನು ಸಂಪೂರ್ಣವಾಗಿ ನಿಷೇಧ ಮಾಡುವ ಉದ್ದೇಶವನ್ನು ಕೇಂದ್ರ ಸರ್ಕಾರ ಹೊಂದಿದೆ. ಬೀಡಿ
ಉದ್ದಿಮೆಯನ್ನು ಸಂಪೂರ್ಣವಾಗಿ ಮುಚ್ಚುವ ನಿರ್ಣಯವನ್ನು ಕೈಗೊಂಡಿದೆ. ಕಾರ್ಮಿಕರಿಗೆ ಬದಲಿ ಜೀವನ ವ್ಯವಸ್ಥೆ ಮಾಡಿಕೊಡದ ಹೊರತು ಇಂತಹ ಕಾರ್ಯಕ್ಕೆ ಕೈಹಾಕಬಾರದು ಎಂದು ಒತ್ತಾಯಿಸಿದರು.

ಬೀಡಿ ಕಾರ್ಮಿಕರು ಅತ್ಯಂತ ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಬೀಡಿ ಸೇರಿದಂತೆ ತಂಬಾಕು ಉತ್ಪನ್ನಗಳ ಕೈಗಾರಿಕೆಯಲ್ಲಿ ಸುಮಾರು 3 ಕೋಟಿ ಜನರು ತೊಡಗಿಸಿಕೊಂಡಿದ್ದು, ಉದ್ಯಮ ನೆಲ ಕಚ್ಚಿದರೆ ಅವರೆಲ್ಲರೂ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.‌

ರಾಜ್ಯ ಸರ್ಕಾರ ಕನಿಷ್ಠ ಕೂಲಿ ನೀಡುವಂತೆ ಬೀಡಿ ಕಂಪೆನಿ ಮಾಲೀಕರಿಗೆ ಆದೇಶ ನೀಡಿದೆ. ಏಪ್ರಿಲ್ ಒಂದರಿಂದಲೇ ಹೆಚ್ಚುವರಿ ವೇತನವನ್ನು ಕಾರ್ಮಿಕರಿಗೆ ನೀಡಬೇಕಾಗಿದೆ. ಆದರೆ ಬೀಡಿ ಕಂಪೆನಿ ಮಾಲೀಕರು ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರದ ಕಾರ್ಮಿಕ ವಿರೋಧಿ ಧೋರಣೆಗಳು ಬೀಡಿ ಕಾರ್ಮಿಕರಿಗೆ ಶಾಪವಾಗಿ ಪರಿಣಮಿಸಿದೆ. ಕಾರ್ಮಿಕರ ಕಲ್ಯಾಣ ನಿಧಿಗೆ ನೀಡಲಾಗುತ್ತಿದ್ದ ಅನುದಾನವನ್ನು ಕೇಂದ್ರ ಸರ್ಕಾರ ಕಡಿತಗೊಳಿಸಿದೆ. ಹಾಗಾಗಿ, ಕಾರ್ಮಿಕರ ಕಲ್ಯಾಣ ನಿಧಿಯಿಂದ ಕಾರ್ಮಿಕರಿಗೆ ಸರಿಯಾದ ಸವಲತ್ತುಗಳು ಸಿಗುತ್ತಿಲ್ಲ ಎಂದು ಟೀಕಿಸಿದರು. 

ಪ್ರತಿಭಟನೆಯಲ್ಲಿ ಮುಖಂಡ ವಿಶ್ವನಾಥ ರೈ, ಫೆಡರೇಶನ್ ಕೋಶಾಧಿಕಾರಿ ಕೆ.ಲಕ್ಷ್ಮಣ್, ಕಾರ್ಯದರ್ಶಿ ಉಮೇಶ್‌ ಕುಂದರ್, ಸಂಜೀವ, ಸುನೀತಾ ಶೆಟ್ಟಿ, ನಳಿನಿ, ಕವಿರಾಜ್, ಬಲ್ಕಿಷ್‌ ಭಾನು ಉಪಸ್ಥಿತರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !