ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂತನ ಸಚಿವರೇ ರೈತರ ಬೇಡಿಕೆ ಈಡೇರಿಸಿ: ಭಾರತೀಯ ಕಿಸಾನ್ ಸಂಘ ಆಗ್ರಹ

Last Updated 18 ಆಗಸ್ಟ್ 2021, 12:11 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯ ಇಬ್ಬರು ಶಾಸಕರು ಸಚಿವರಾಗಿದ್ದಾರೆ, ಸಂಸದರು ಕೇಂದ್ರದ ಕೃಷಿ ಹಾಗೂ ರೈತರ ಕಲ್ಯಾಣ ರಾಜ್ಯ ಖಾತೆ ಸಚಿವರಾಗಿದ್ದಾರೆ. ಈಗಲಾದರೂ ನನೆಗುದಿಗೆ ಬಿದ್ದಿರುವ ಜಿಲ್ಲೆಯ ರೈತರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಒತ್ತಾಯಿಸಿದರು.

ಭಾರತೀಯ ಕಿಸಾನ್ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ನವೀನ್‍ಚಂದ್ರ ಜೈನ್ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಜಿಲ್ಲಾ ಸಮಿತಿಯ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ರೈತರ ಬೆಳೆಗೆ ಕಾಡುಪ್ರಾಣಿಗಳ ಉಪಟಳ ಹೆಚ್ಚಗಿದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ನೂತನ ಸಚಿವರು ಕ್ರಮ ವಹಿಸಬೇಕು. ಪಶ್ಚಿಮ ಘಟ್ಟದ ಸಂರಕ್ಷಣೆಗೆ ಜಾರಿಗೊಳ್ಳುತ್ತಿರುವ ಕಸ್ತೂರಿ ರಂಗನ್ ವರದಿಯ ಪರಿಣಾಮಗಳನ್ನು ಅಧ್ಯಯನ ಮಾಡಬೇಕು ಎಂದು ಒತ್ತಾಯಿಸಿದರು.

ಮುಚ್ಚಿ ಹೋಗಿರುವ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆಯ ಪುನಶ್ಚೇತನಕ್ಕೆ ರೂಪುರೇಷೆ ಸಿದ್ಧಪಡಿಸಬೇಕು. ಜಿಲ್ಲೆಯಲ್ಲಿ 13 ನದಿಗಳು ಹರಿಯುತ್ತಿದ್ದರೂ ಬೇಸಿಗೆಯ ಕೊನೆಯಲ್ಲಿ ನೀರಿನ ಅಭಾವ ಎದುರಾಗುತ್ತಿದ್ದು ಅಂತರ್ಜಲ ವೃದ್ಧಿ ಸೇರಿದಂತೆ ಕುಡಿಯುವ ಹಾಗೂ ರೈತರ ಬೆಳೆಗಳಿಗೆ ನೀರಿನ ಸಮಸ್ಯೆ ಎದುರಾಗದಂತೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಕುಂಟುತ್ತಾ ಸಾಗುತ್ತಿರುವ ವರಾಹಿ ನೀರಾವರಿ ಯೋಜನೆಗೆ ವೇಗ ನೀಡಬೇಕು. ಕುಮ್ಕಿ ಜಮೀನು, ಅಕ್ರಮ-ಸಕ್ರಮದಡಿ ಭೂಮಿ ಮಂಜೂರಾತಿ, ಕಂದಾಯ ವಿಭಾಗದಲ್ಲಿರುವ ಸಮಸ್ಯೆಗಳು, ವಿದ್ಯುತ್ ಕಡಿತ, ಅರಣ್ಯ ಇಲಾಖೆಯಿಂದ ರೈತರಿಗಾಗುತ್ತಿರುವ ತೊಂದರೆಗಳನ್ನು ನಿವಾರಿಸಲು ಮುಂದಾಗಬೇಕು.

ಈಗಾಗಲೇ ಬೇಡಿಕಗಳ ಈಡೇರಿಕೆಗೆ ಭಾರತೀಯ ಕಿಸಾನ್ ಸಂಘ ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಸಮರ್ಪಕ ಪರಿಹಾರ ಸಿಕ್ಕಿಲ್ಲ. ಈಗ ಕರಾವಳಿ ರೈತರ ಹಾಗೂ ಜನರ ಕಷ್ಟಗಳನ್ನು ಹತ್ತಿರದಿಂದ ನೋಡಿರುವ ಜನಪ್ರತಿನಿಧಿಗಳು ರಾಜ್ಯ ಹಾಗೂ ಕೇಂದ್ರ ಸರ್ಕಾರದಲ್ಲಿ ಸಚಿವರಾಗಿದ್ದಾರೆ. ಪರಿಣಾಮ ನನೆಗುದಿಗೆ ಬಿದ್ದಿರುವ ಬೇಡಿಕೆಗಳು ಈಡೇರಬಹುದು ಎಂಬ ಭರವಸೆಯಲ್ಲಿ ರೈತರು ಕಾದು ಕುಳಿತಿದ್ದಾರೆ ಎಂದು ಸತ್ಯನಾರಾಯಣ ಉಡುಪ ಹೇಳಿದರು.

ಜಿಲ್ಲೆಯಲ್ಲಿ ಹವಾಮಾನ ಆಧಾರಿತ ಬೆಳೆ ವಿಮೆ ಪರಿಹಾರ ನಾಲ್ಕು ವರ್ಷಗಳಿಂದ ರೈತರಿಗೆ ಪೂರ್ಣ ಪಾವತಿಯಾಗಿಲ್ಲ. 2000ಕ್ಕೂ ಹೆಚ್ಚು ರೈತರಿಗೆ ಪರಿಹಾರ ಪಾವತಿಯಾಗಲು ಬಾಕಿಯಿದೆ. ಕಂದಾಯ ದಾಖಲೆಗಳಾದ ಪಹಣಿ ಪತ್ರದಲ್ಲಿ ಆಗಿರುವ ಲೋಪಗಳನ್ನು ಸರಿಪಡಿಸಲು ರೈತರು ವರ್ಷಗಟ್ಟಲೆ ಸರ್ಕಾರಿ ಕಚೇರಿಗಳಿಗೆ ಅಲೆಯಬೇಕಾಗಿದೆ.

ಜಾಗದ ಸರ್ವೆ, ನೋಂದಣಿ ಪ್ರಕ್ರಿಯೆಗಳು ತುಂಬಾ ಕ್ಲಿಷ್ಟಕರವಾಗಿದ್ದು, ರೈತರು ನೆರವು ಪಡೆಯಲು ಹಣ ಕೊಡಬೇಕಾಗಿದೆ. ಕಳೆದ 70 ವರ್ಷಗಳಿಂದ ಗೇರು ಲೀಸ್ ಭೂಮಿಗಳನ್ನು ಪಡೆದಿರುವ ರೈತರು ಅತಂತ್ರದಲ್ಲಿದ್ದಾರೆ. ಕುಮ್ಕಿ, ಅಕ್ರಮ-ಸಕ್ರಮ ಭೂಮಿಗಳಿಗೆ ಮಂಜೂರಾತಿ ನೀಡಿ ಶಾಶ್ವತ ಪರಿಹಾರ ಒದಗಿಸಬೇಕಾಗಿದೆ. ಮಂಗಗಳ ಹಾವಳಿಗೆ ಪರಿಹಾರ ನೀಡಲು ಮಂಕಿ ಸ್ಟರ್ಲೈಸೇಷನ್ ಸೆಂಟರ್ ಮಾಡುವ ಯೋಜನೆ ನನೆಗುದಿಗೆ ಬಿದ್ದಿದ್ದು ಗಮನ ಹರಿಸಬೇಕಿದೆ ಎಂದರು.

ಉಪಾಧ್ಯಕ್ಷ ರಾಮಚಂದ್ರ ಅಲ್ಸೆ, ಕೋಶಾಧಿಕಾರಿ ವಾಸುದೇವ ಶ್ಯಾನುಭಾಗ್, ಮಾಜಿ ಅಧ್ಯಕ್ಷ ಬಿ.ವಿ. ಪೂಜಾರಿ, ಪದಾಧಿಕಾರಿಗಳಾದ ಸೀತಾರಾಮ ಗಾಣಿಗ, ಮಹಾಬಲ ಬಾಯರಿ, ಸುಂದರ ಶೆಟ್ಟಿ, ಆಸ್ತಿಕ ಶಾಸ್ತ್ರಿ, ಉಮಾನಾಥ ರಾನಡೆ, ಗೋವಿಂದರಾಜ ಭಟ್, ಪ್ರವೀಣ ಗುರ್ಮೆ ಸಭೆಯಲ್ಲಿ ಇದ್ದರು. ಹಾಗೂ ತಾಲೂಕು ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT