ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ ಸಮಾಧಾನ: ₹7 ಕೋಟಿ ಉಳಿತಾಯ

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ದಂಡ ಮನ್ನಾ: ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ
Last Updated 5 ಆಗಸ್ಟ್ 2022, 2:27 IST
ಅಕ್ಷರ ಗಾತ್ರ

ಬ್ರಹ್ಮಾವರ: ‘ರಾಜ್ಯ ಸರ್ಕಾರದ ಕರಸಮಾಧಾನ ಯೋಜನೆಯನ್ನು ಬಳಸಿಕೊಂಡ ಬ್ರಹ್ಮಾವರ ಸಕ್ಕರೆ ಕಾರ್ಖಾನೆಯು₹7ಕೋಟಿ ದಂಡವನ್ನು ಮನ್ನಾ ಮಾಡಿಸಿಕೊಂಡಿದ್ದಲ್ಲದೆ ಮಾರಾಟ ತೆರಿಗೆ ಇಲಾಖೆಯವರು ಹರಾಜಿಗೆ ಇಟ್ಟಿದ್ದ, ಸಂಸ್ಥೆಯ 10 ಎಕರೆ ಜಾಗವನ್ನೂ ಉಳಿಸಿಕೊಂಡಿದೆ. ಇದು ಆಡಳಿತ ಮಂಡಳಿಯ ಬಹುದೊಡ್ಡ ಸಾಧನೆ’ ಎಂದು ಬ್ರಹ್ಮಾವರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಬೈಕಾಡಿ ಸುಪ್ರಸಾದ್ ಶೆಟ್ಟಿ ಹೇಳಿದರು.

‘ಕಾರ್ಖಾನೆಯು 1997ರಿಂದ 2022ರವರೆಗೆಗಿನ ಬಾಕಿ ತೆರಿಗೆ, ಬಡ್ಡಿ ಹಾಗೂ ದಂಡದ ರೂಪದಲ್ಲಿ ಸುಮಾರು ₹8.75 ಕೋಟಿ ಪಾವತಿಸಬೇಕಾಗಿತ್ತು. ಸರ್ಕಾರದ ಕರಸಮಾಧಾನ ಯೋಜನೆಯನ್ನು ಬಳಸಿಕೊಂಡು, ₹1.75 ಕೋಟಿ ಮೂಲ ತೆರಿಗೆಯನ್ನು ಪಾವತಿಸಿ, ಉಳಿದ ಮೊತ್ತವನ್ನು ಮನ್ನಾ ಮಾಡಿಸಲಾಗಿದೆ’ ಎಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

2000ನೇ ಇಸವಿಯಿಂದ ಕೋಟ ಸಹಕಾರಿ ವ್ಯವಸಾಯ ಬ್ಯಾಂಕ್‌ನ ಸಾಲ ಮರುಪಾವತಿ ಮಾಡದಿರುವುದರಿಂದ ಬಡ್ಡಿ, ಚಕ್ರಬಡ್ಡಿ ಸೇರಿ ಅದು ₹1.44 ಕೋಟಿಯಾಗಿತ್ತು. ಈ ವಿಚಾರವಾಗಿ ಬ್ಯಾಂಕ್‌ನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಜತೆ ಮಾತುಕತೆ ನಡೆಸಿದ್ದೇವೆ. ₹56 ಲಕ್ಷವನ್ನು ಏಕಗಂಟಿನಲ್ಲಿ ಪಾವತಿಸಲಾಗಿದೆ. ಸುಮಾರು ₹88 ಲಕ್ಷ ಬಡ್ಡಿಯನ್ನು ಬ್ಯಾಂಕ್‌ ಮನ್ನಾ ಮಾಡಿದ್ದರಿಂದ ಸಾಲ ಸಂಪೂರ್ಣ ಮರುಪಾವತಿಯಾದಂತಾಗಿದೆ. ಇದರಿಂದ ಸಕ್ಕರೆ ಕಾರ್ಖಾನೆಯ ಮರು ನಿರ್ಮಾಣ ಯೋಜನೆಗೆ ವೇಗ ಸಿಕ್ಕಂತಾಗಿದೆ ಎಂದು ತಿಳಿಸಿದ್ದಾರೆ.

ಎಥೆನಾಲ್ ಯೋಜನೆಗೆ ಸಿದ್ಧತೆ: ಸಕ್ಕರೆ ಕಾರ್ಖಾನೆಯು ಶೀಘ್ರದಲ್ಲೇ ಸಾಲ ಮುಕ್ತವಾಗಲಿದೆ. ಎಥೆನಾಲ್, ಸಕ್ಕರೆ ಮತ್ತು ವಿದ್ಯುತ್‌ ಉತ್ಪಾದನಾ ಯೋಜನೆಗಳ ಜಾರಿಗೆ ಚಿಂತನೆ ನಡೆದಿದೆ. ಪುಣೆಯ ವಸಂತ ದಾದ ಶುಗರ್ ಇನ್‌ಸ್ಟಿಟ್ಯೂಟ್ ಹಾಗೂ ಬೆಂಗಳೂರಿನ ಬಿ-ಕ್ವೆಸ್ಟ್ ಟೆಕ್ನೋ ಫೈನಾನ್ಶಿಯಲ್ ಕನ್ಸಲ್ಟೆನ್ಸಿ ಸಂಸ್ಥೆಗಳೊಂದಿಗೆ ಮಾತುಕತೆ ನಡೆದಿದೆ. ಇನ್ನೂ ಕೆಲವು ಯೋಜನೆಗಳ ಬಗ್ಗೆಯೂ ಆಡಳಿತ ಮಂಡಳಿ ರೂಪುರೇಷೆ ಹಾಕಿಕೊಂಡಿದೆ. ಎಲ್ಲಾ ಯೋಜನೆಗಳು ಅನುಷ್ಠಾನಗೊಂಡಲ್ಲಿ 5 ಸಾವಿರ ರೈತ ಕುಟುಂಬಗಳ ಆದಾಯ ಹೆಚ್ಚುವುದರ ಜತೆಗೆ 10 ಸಾವಿರ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದರು.

ಕಬ್ಬು-ಕೃಷಿ ಕ್ರಾಂತಿ ಅಭಿಯಾನ: ಎಥೆನಾಲ್, ಸಕ್ಕರೆ ಉತ್ಪಾದನೆ ಸಾಕಾರಗೊಳ್ಳಬೇಕಾದರೆ ಉಡುಪಿ, ದ.ಕ. ಜಿಲ್ಲೆಯಾದ್ಯಂತ 10 ಸಾವಿರ ಎಕರೆ ಕಬ್ಬು ಬೆಳೆಯುವ ಅಗತ್ಯವಿದೆ.
ಅದಕ್ಕೆ ಪೂರಕವಾಗಿ ನವೆಂಬರ್‌ ತಿಂಗಳಿಂದ ಜಿಲ್ಲೆಯಾದ್ಯಂತ ‘ಕಬ್ಬು-ಕೃಷಿ-ಕ್ರಾಂತಿ’ ಅಭಿಯಾನ ಪ್ರಾರಂಭಿಸಿ ಕಬ್ಬಿನ ಸಸಿಗಳನ್ನು ವಿತರಣೆ ಮಾಡಲಾಗುವುದು. ಪ್ರಾರಂಭಿಕ ಹಂತವಾಗಿ 2ಸಾವಿರ ಎಕರೆ ಪ್ರದೇಶದಲ್ಲಿ ಕಬ್ಬು ಬೆಳೆಯುವ ಯೋಜನೆಯನ್ನು ಆಡಳಿತ ಮಂಡಳಿ ಹಾಕಿಕೊಳ್ಳಲಿದೆ. ಇದಕ್ಕೆ ಉಭಯ ಜಿಲ್ಲೆಯ ರೈತರು, ವಿವಿಧ ರೈತ ಸಂಘಗಳು, ರಾಜಕೀಯ ಪಕ್ಷಗಳ ಪ್ರಮುಖರು, ಜನಪ್ರತಿನಿಧಿಗಳು ಹಾಗೂ ಜಿಲ್ಲೆಯ ಜನರ ಸಹಕಾರ ಬೇಕು ಎಂದು ಅವರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT