ಬೈಕುರ– ಜೆಸಿಕೆರೆ ಸಂಪರ್ಕ ಸೇತುವೆ ಕುಸಿತ

7

ಬೈಕುರ– ಜೆಸಿಕೆರೆ ಸಂಪರ್ಕ ಸೇತುವೆ ಕುಸಿತ

Published:
Updated:
ಚಿತ್ರ(೨೮ಬಿವಿಆರ್೪) ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಿತ್ರಪಾಡಿ ಗ್ರಾಮದ ಬೈಕುರ ಜೆಸಿಕೆರೆ ಪ್ರದೇಶವನ್ನು ಸಂಪರ್ಕಿಸುವ ಸೇತುವೆ ಕುಸಿತ ಕಂಡಿದೆ.

ಸಾಲಿಗ್ರಾಮ (ಬ್ರಹ್ಮಾವರ): ಸಾಲಿಗ್ರಾಮ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಚಿತ್ರಪಾಡಿ ಗ್ರಾಮದ ಬೈಕುರ– ಜೆಸಿಕೆರೆ ಪ್ರದೇಶವನ್ನು ಸಂಪರ್ಕಿಸುವ ಸೇತುವೆ ಕುಸಿತ ಕಂಡುಬಂದಿರುವ ಕಾರಣ ಗುರುವಾರದಿಂದ ಈ ಮಾರ್ಗದಲ್ಲಿ ವಾಹನ ಸಂಚಾರ ಸ್ಥಗಿತಗೊಳ್ಳುವ ಆತಂಕ ಎದುರಾಗಿದೆ.

ಹಲವು ದಿನಗಳಿಂದ ಸುರಿಯುತ್ತಿದ್ದ ಭಾರೀ ಮಳೆಗೆ ಚಿತ್ರಪಾಡಿಯ ಬಹುತೇಕ ಪ್ರದೇಶಗಳು ನೀರಿನಿಂದ ಆವೃತವಾಗಿದ್ದು, ನೀರಿನ ರಭಸಕ್ಕೆ ಈ ಭಾಗದಿಂದ ಇನ್ನೊಂದು ಭಾಗಕ್ಕೆ ಸಂಪರ್ಕಿಸುವ ಸೇತುವೆಯ ಸುತ್ತಮುತ್ತ ಹಾಕಿರುವ ಮಣ್ಣು ಮತ್ತು ಕಲ್ಲುಗಳು ಕುಸಿಯುತ್ತಿದೆ. ಪಕ್ಕದಲ್ಲೇ ಹಾದು ಹೋಗಿರುವ ವಿದ್ಯುತ್ ಕಂಬಗಳು ಈಗಾಗಲೇ ವಾಲಿವೆ.

ಈ ಬಗ್ಗೆ ಸ್ಥಳೀಯ ನಿವಾಸಿ ಜಗನ್ನಾಥ ಪೂಜಾರಿ ಮಾಧ್ಯಮ ಪ್ರತಿನಿಧಿಗಳೊಡನೆ ಮಾತನಾಡಿ, ‘ಚಿತ್ರಪಾಡಿಯ ಈ ಸೇತುವೆ ಬೈಕುರ್ ಜೆಸಿಕೆರೆಗೆ ಹಾದು ಹೋಗಲು ಅನುಕೂಲ ಮಾಡಿಕೊಡುತ್ತದೆ. ಸೇತುವೆ ಇಲ್ಲವಾದರೆ ಸುತ್ತು ತಿರುಗಿ ಬರಬೇಕಾದ ಪರಿಸ್ಥಿತಿ ಇರುತ್ತದೆ. ಶಾಲಾ ವಿದ್ಯಾರ್ಥಿಗಳಿಂದ ಹಿಡಿದು ರೈತರ ಕೃಷಿ ಚಟುವಟಿಕೆಗೂ ಈ ಸೇತುವೆ ಅನುಕೂಲತೆಯನ್ನು ಕಲ್ಪಿಸಿದೆ. ಇಲ್ಲಿ ನೆರೆಯ ನೀರಿನಿಂದ ಆವೃತ್ತವಾಗಿರುವ ಸಮಯದಲ್ಲಿ ತುರ್ತು ಎಲ್ಲಿಗಾದರೂ ಹೋಗಬೇಕಾದರೆ ನಡೆದುಕೊಂಡೇ ಹೋಗಬೇಕಾದ ಪರಿಸ್ಥಿತಿ ಬಂದೊಗುತ್ತದೆ. ಇಂತಹ ಸಮಸ್ಯೆಗೆ ವ್ಯವಸ್ಥಿತ ದೊಡ್ಡ ಸೇತುವೆ ನಿರ್ಮಿಸಿಕೊಡುವುದೇ ಉತ್ತಮ’ ಎಂದು ತಿಳಿಸಿದರು.

ಪೈಪ್ ಬದಲು ಸೇತುವೆ ನಿರ್ಮಿಸಲಿ: ನೆರೆ ಹಾವಳಿ ಪ್ರದೇಶವಾದ ಕೋಟ, ತೆಕ್ಕಟ್ಟೆ, ಬೇಳೂರು, ಸಾಲಿಗ್ರಾಮ, ಬನ್ನಾಡಿ, ಕಾವಡಿ ಇನ್ನಿತರ ಪ್ರದೇಶಗಳಲ್ಲಿ ಸೇತುವೆ ಬದಲು ಪೈಪ್ ಅಳವಡಿಸಿದ್ದು, ಆ ಭಾಗಳಲ್ಲಿ ನೆರೆ ನೀರು ಸರಾಗವಾಗಿ ಹರಿಯಲಾಗದೆ ಇಂಥಹ ಸಮಸ್ಯೆಗಳಿಗೆ ಎಡೆಮಾಡಿಕೊಡುತ್ತಿದೆ. ಇದಕ್ಕೆಲ್ಲ ಪರಿಹಾರ ಕೊಂಡುಕೊಳ್ಳಬೇಕಾದರೆ ಪೈಪ್ ಅನ್ನು ನಿಷ್ಕ್ರಿಯಗೊಳಿಸಿ ಆ ಭಾಗದಲ್ಲಿ ಸೇತುವೆ ನಿರ್ಮಿಸಿದರೆ ಯಾವುದೇ ಹಾನಿಯಾಗದು ಮತ್ತು ನೆರೆ ನೀರು ಸರಾಗವಾಗಿ ಹರಿಯುವಂತಾಗುತ್ತದೆ. ಅಲ್ಲದೆ, ಮಡಿವಾಳ ಸೇತುವೆ ಅಚ್ಚುಕಟ್ಟಾಗಿದ್ದು ಈ ಸೇತುವೆ ದೊಡ್ಡಪ್ರಮಾಣದಲ್ಲಿ ನಿರ್ಮಿಸಿದರೆ ಈ ರೀತಿಯ ಹಾನಿಯಾಗದು ಎಂಬುವುದು ಸ್ಥಳೀಯ ಅಭಿಪ್ರಾಯವಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !