ಬುಧವಾರ, ಫೆಬ್ರವರಿ 19, 2020
28 °C
ಹೆಬ್ರಿಯಲ್ಲಿ ಬಿಲ್ಲವರ ಬೃಹತ್ ಸಮಾವೇಶ; ಸಂಘದ 30ನೇ ವರ್ಷದ ಸಂಭ್ರಮಾಚರಣೆ

‘ಗುರುಗಳ ತತ್ವದಿಂದ ಬಿಲ್ಲವ ಸಮಾಜ ಬಲಿಷ್ಠ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹೆಬ್ರಿ: ‘ನಾರಾಯಣ ಗುರುಗಳ ತತ್ವದಿಂದ ಇಂದು ಬಿಲ್ಲವ ಸಮಾಜ ಬಲಿಷ್ಠವಾಗಿದೆ. ಸಮಸ್ತ ಮನುಕುಲ ಸ್ವತಂತ್ರ ಜೀವನ ನಡೆಸಲು ಗುರುಗಳ ಆದರ್ಶಗಳನ್ನು ಪಾಲಿಸಬೇಕಿದೆ’ ಎಂದು ಹೊಸ್ಮಾರಿನ ವಿಖ್ಯಾತನಂದ ಸ್ವಾಮೀಜಿ ಹೇಳಿದರು.

ಅವರು ಭಾನುವಾರ ಹೆಬ್ರಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ವತಿಯಿಂದ ನಡೆದ ಬಿಲ್ಲವರ ಬೃಹತ್ ಸಮಾವೇಶ, ಸಂಘದ 30ನೇ ವರ್ಷದ ಸಂಭ್ರಮಾಚರಣೆ, ಭವ್ಯ ಮೆರವಣಿಗೆ, ಯುವ ಘಟಕದ ಲೋಕಾರ್ಪಣೆ ನೆರವೇರಿಸಿ ಆರ್ಶೀವಚನ ನೀಡಿದರು.

‘ನೀವು ಯಾವ ಪಕ್ಷದಲ್ಲಿದ್ದುಕೊಂಡು ಬೇಕಾದರೂ ರಾಜಕೀಯ ಮಾಡಿ. ಆದರೆ, ಮಾನವೀಯತೆಯನ್ನು ಅಳವಡಿಸಿಕೊಳ್ಳಿ. ಗುರುಗಳ ಸಿದ್ಧಾಂತ ಪಾಲಿಸಿ. ರಾಜಕೀಯಕ್ಕಾಗಿ ಬಿಲ್ಲವ ಯುವಕರು ಬಲಿಯಾಗಬೇಡಿ. ಸಮಾಜಮುಖಿ ಕೆಲಸದಲ್ಲಿ ನಿರತರಾಗಬೇಕು. ಪ್ರತಿಷ್ಠಿತ ಹೆಬ್ರಿ ಬಿಲ್ಲವರ ಸಂಘವು ಬಡವರ ಪಾಲಿನ ಆಶ್ರಯ ಕೇಂದ್ರವಾಗಿ ಕೆಲಸ ಮಾಡುವಂತಾಗಲಿ’ ಎಂದು ಆಶಿಸಿದರು.

ಸಮಾವೇಶ ಉದ್ಘಾಟಿಸಿದ ಕಾರ್ಕಳ ಶಾಸಕ ಸುನೀಲ್ ಕುಮಾರ್ ಮಾತನಾಡಿ, ‘ಯುವ ಮನಸ್ಸುಗಳು ಹಿರಿಯರ ಮಾರ್ಗದರ್ಶನದಲ್ಲಿ ಒಂದಾಗಿ ಸಮಾಜದ ಕೆಲಸ ಮಾಡಬೇಕು. ಹೊಸ ಪೀಳಿಗೆಯ ಯುವಕರು ಸಮಾಜ ಕಟ್ಟಬೇಕು. ಶೈಕ್ಷಣಿಕವಾಗಿ ಇನ್ನಷ್ಟು ಮುಂದೆ ಬಂದು ಐಎಎಸ್, ಐಪಿಎಸ್, ಐಎಫ್‍ಎಸ್ ನಂತಹ ಹುದ್ದೆಗೆ ಸೇರಬೇಕು. ₹1.85 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಹೆಬ್ರಿಯ ಬಿಲ್ಲವರ ಸಮುದಾಯ ಭವನಕ್ಕೆ ಸರ್ಕಾರದಿಂದ ಗರಿಷ್ಠ ಅನುದಾನ ಒದಗಿಸುತ್ತೇನೆ’ ಎಂದು ತಿಳಿಸಿದರು.

ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘದ ಅಧ್ಯಕ್ಷ ನಡೋಡಿ ಎಚ್.ಜಯಕರ ಪೂಜಾರಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಮುಂದಿನ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಕೋರಿದರು. ಸಮಾವೇಶ ಯಶಸ್ವಿಗೊಳಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಮಂಗಳೂರು ವಿವಿಯ ನಾರಾಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಪ್ರಧಾನ ಭಾಷಣ ಮಾಡಿದರು.

ಇದೇ ಸಂದರ್ಭದಲ್ಲಿ ವಿವಿಧ ಬೇಡಿಕೆಗಳ ಮನವಿಯನ್ನು ಶಾಸಕರಿಗೆ ಹಸ್ತಾಂತರಿಸಲಾಯಿತು. ಸಂಘದ ಪೂರ್ವಾಧ್ಯಕ್ಷರನ್ನು ಸನ್ಮಾನಿಸಲಾಯಿತು. ಹೆಬ್ರಿ ಅನಂತ ಪದ್ಮನಾಭ ದೇವಸ್ಥಾನದಿಂದ ಸಂಘದ ಸಮುದಾಯ ಭವನದ ತನಕ ಭವ್ಯ ಮೆರವಣಿಗೆ ನಡೆಯಿತು.

ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಜಿಲ್ಲಾ ಪಂಚಾಯಿತಿ ಸದಸ್ಯೆ ಜ್ಯೋತಿ ಹರೀಶ ಪೂಜಾರಿ, ಪೂನಾ ಉದ್ಯಮಿ ಪಂಚಮಿ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪುರಂದರ ಪೂಜಾರಿ, ಸೂರತ್ ಉದ್ಯಮಿ ಮುದ್ರಾಡಿ ಮನೋಜ್ ಸಿ.ಪೂಜಾರಿ, ಮುದ್ರಾಡಿ ಆದಿಶಕ್ತಿ ದೇವಸ್ಥಾನದ ಆಡಳಿತ ಧರ್ಮದರ್ಶಿ ಮೋಹನ್, ಸ್ಥಾಪಕಾಧ್ಯಕ್ಷ ಎಚ್. ನಾರಾಯಣ ಪೂಜಾರಿ, ಪೂರ್ವಾಧ್ಯಕ್ಷರಾದ ಹೆಬ್ರಿಯ ಹಾಡಿಮನೆ ಸೀನಾ ಪೂಜಾರಿ, ಮುದ್ರಾಡಿ ಮಂಜುನಾಥ ಪೂಜಾರಿ, ಸಂಘದ ಗೌರವಾಧ್ಯಕ್ಷ ಭೋಜ ಪೂಜಾರಿ, ಪ್ರಧಾನ ಕಾರ್ಯದರ್ಶಿ ಮುದ್ದು ಪೂಜಾರಿ, ಪ್ರಭಾಕರ ಪೂಜಾರಿ, ಮಹಿಳಾ ಅಧ್ಯಕ್ಷೆ ಶಶಿಕಲಾ ಆರ್.ಪಿ., ಕಾರ್ಯದರ್ಶಿ ಸುಜಾತಾ ಹರೀಶ ಪೂಜಾರಿ, ಯುವ ಘಟಕದ ಅಧ್ಯಕ್ಷ ವಿಶು ಕುಮಾರ್, ಕಾರ್ಯದರ್ಶಿ ವಿನಯ್ ಪೂಜಾರಿ ಇದ್ದರು.

ಶಿಕ್ಷಕ ಪ್ರಕಾಶ ಪೂಜಾರಿ ಮತ್ತು ನಿತೀಶ್ ಎಸ್‍.ಪಿ. ನಿರೂಪಿಸಿದರು. ಮುದ್ದು ಪೂಜಾರಿ ಸ್ವಾಗತಿಸಿದರು. ಪ್ರಭಾಕರ ಪೂಜಾರಿ ವರದಿ ಮಂಡಿಸಿದರು. ಮಂಜುನಾಥ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿದರು.

‘ಸಿಡಿಮದ್ದು ಸಿಡಿಸಬೇಡಿ’

‘ಬಿಲ್ಲವ ಸಮಾಜದ ಯಾವುದೇ ಕಾರ್ಯಕ್ರಮದಲ್ಲಿ ಸಿಡಿಮದ್ದು ಸಿಡಿಸಬಾರದು ಎಂದು ನಾರಾಯಣ ಗುರುಗಳು ಶತಮಾನದ ಹಿಂದೆಯೇ ಪ್ರತಿಪಾದಿಸಿದ್ದಾರೆ. ಸಿಡಿಮದ್ದು ಸಿಡಿಸುವುದರಿಂದ ಪ್ರಕೃತಿಗೆ ದೊಡ್ಡ ಹಾನಿಯಾಗುತ್ತದೆ. ಪ್ರಕೃತಿ ಉಳಿಸುವುದು ನಮ್ಮ ಪ್ರಥಮ ಕರ್ತವ್ಯ. ಅದು ಗುರುಗಳ ಚಿಂತೆನೆಗೆ ವಿರುದ್ಧವಾದುದು’ ಎಂದು ವಿಖ್ಯಾತನಂದ ಸ್ವಾಮೀಜಿ ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು