ಅಂಬೇಡ್ಕರ್ ಕಾಲೊನಿಯಲ್ಲಿ ಗೋಪೂಜೆ

ಉಡುಪಿ: ದೊಡ್ಡಣಗುಡ್ಡೆಯ ಅಂಬೇಡ್ಕರ್ ಕಾಲೊನಿಯಲ್ಲಿರುವ ಕಮಲಮ್ಮ ಅವರ ಗೋಶಾಲೆಯಲ್ಲಿ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹಾಗೂ ಶಾಸಕ ಕೆ.ರಘುಪತಿ ಭಟ್ ಗೋ ಪೂಜೆ ನೆರವೇರಿಸಿದರು.
ಸಮಾಜ ಕಲ್ಯಾಣ ಇಲಾಖೆಯಿಂದ ಕಮಲಮ್ಮ ಕುಟುಂಬಕ್ಕೆ ಹೊಸ ಬಟ್ಟೆ ಹಾಗೂ ಸಿಹಿ ತಿಂಡಿ ವಿತರಿಸಿ, ಹಸುಗಳಿಗೆ ಕ್ವಿಂಟಲ್ ಹಿಂಡಿ ಉಡುಗೊರೆ ನೀಡಲಾಯಿತು.
ಗೋಶಾಲೆಯ ಸುರಕ್ಷತೆ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವಂತೆ ಶಾಸಕರು ಮಾಡಿದ ಮನವಿ ಸ್ಪಂದಿಸಿದ ಸಚಿವರು ಶೀಘ್ರ ಸೂಕ್ತ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ರಾಜ್ಯ ಎಸ್‌ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ದಿನಕರ ಬಾಬು ದಿನಕರ ಬಾಬು, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಗೋಪಾಲ ಕಳಂಜೆ, ಸ್ಥಳೀಯ ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ, ಗಿರಿಧರ್ ಆಚಾರ್ಯ, ಕರಂಬಳ್ಳಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಿಶೋರ್ ಕರಂಬಳ್ಳಿ, ಪ್ರೊ.ಸದಾಶಿವ ರಾವ್, ಎಸ್.ವಿ. ಭಟ್, ವಾಸುದೇವ್ ಭಟ್ ಇದ್ದರು.
ಕೃಷಿ ಭೂಮಿಯಲ್ಲಿ ದೀಪಾವಳಿ:
ದಶಕಗಳಿಂದ ಹಡಿಲಿಬಿದ್ದಿದ್ದ ಕೃಷಿ ಭೂಮಿಯಲ್ಲಿ ಕೇದಾರೋತ್ಥಾನ ಟ್ರಸ್ಟ್ ಭತ್ತದ ಕೃಷಿ ಮಾಡಿದ್ದು, ಈ ಗದ್ದೆಗಳಲ್ಲಿ ಶಾಸಕ ಕೆ.ರಘುಪತಿ ಭಟ್ ದೀಪಗಳನ್ನಿಟ್ಟು ವಿಭಿನ್ನವಾಗಿ ದೀಪಾವಳಿ ಆಚರಿಸಿದರು.
ಸಾಂಪ್ರದಾಯಿಕ ಪದ್ಧತಿಯಂತೆ ದೀಪ ಇಟ್ಟು ಬಲೀಂದ್ರ ಪೂಜೆ (ಹೊಲಿ ಕರೆಯುವುದು) ಮಾಡಲಾಯಿತು. ಬಳಿಕ ಪೈರಿನ ಪೂಜೆ, ತಿರಿಗೆ ಭತ್ತವನ್ನು ಹಾಕುವ ಮೂಲಕ ದೀಪಾವಳಿಯನ್ನು ಸಂಭ್ರಮಿಸಲಾಯಿತು.
ಉಡುಪಿಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬನ್ನಂಜೆ, ಕಲ್ಮಾಡಿ, ಸುಬ್ರಹ್ಮಣ್ಯನಗರ, ಮೂಡುಬೆಟ್ಟು, ಗುಂಡಿಬೈಲು, ಪರ್ಕಳ, ತೆಂಕನಿಡಿಯೂರು, ಬಡಾನಿಡಿಯೂರು, ಕಲ್ಯಾಣಪುರ, ಆರೂರು ಸೇರಿದಂತೆ ಹಲವು ಕಡೆಗಳಲ್ಲಿ ಈ ವರ್ಷ 1,500 ಎಕರೆ ಹಡಿಲು ಭೂಮಿ ಕೃಷಿ ನಡೆದಿದ್ದು, ಎಲ್ಲ ಭಾಗಗಳಲ್ಲಿ ಸಾರ್ವಜನಿಕರು ಗದ್ದೆಗಳಲ್ಲಿ ದೀಪಾವಳಿ ಆಚರಿಸಿದ್ದಾರೆ ಎಂದು ಶಾಸಕರು ತಿಳಿಸಿದ್ದಾರೆ.
ಶಾಸಕ ರಘುಪತಿ ಭಟ್ ಅವರ ನಿವಾಸದಲ್ಲೂ ಗೋ ಪೂಜಾ ಕಾರ್ಯಕ್ರಮ ನಡೆಯಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.