ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರರ ಪಟ್ಟಿಯಲ್ಲಿ ಹೆಸರು ಅದಲು ಬದಲು: ಬಿ.ಕೆ.ಹರಿಪ್ರಸಾದ್ ಆರೋಪ

ಮತದಾರರಲ್ಲಿ ಗೊಂದಲ ಸೃಷ್ಟಿಸುತ್ತಿರುವ ಅಧಿಕಾರಿಗಳು:
Last Updated 15 ಅಕ್ಟೋಬರ್ 2020, 13:48 IST
ಅಕ್ಷರ ಗಾತ್ರ

ಉಡುಪಿ: ‘ಮತದಾರರ ಪಟ್ಟಿಯಲ್ಲಿ ಗೊಂದಲ ಸೃಷ್ಟಿಸುವ ಮೂಲಕ ಚುನಾವಣಾ ಆಯೋಗ ಹಾಗೂ ಜಿಲ್ಲಾಡಳಿತ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿದೆಯೇ’ ಎಂಬ ಅನುಮಾನ ಮೂಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಆರೋಪ ಮಾಡಿದರು.

ಗುರುವಾರ ಕಾಂಗ್ರೆಸ್‌ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ತಂದೆ, ತಾಯಿ, ಮಗ, ಸೊಸೆ, ಹೀಗೆ ಕುಟುಂಬದ ಸದಸ್ಯರ ಹೆಸರುಗಳು ಒಂದು ನಿರ್ದಿಷ್ಟ ಬೂತ್‌ನಲ್ಲಿರುವುದು ಸಾಮಾನ್ಯ. ಆದರೆ, ಜಿಲ್ಲೆಯಲ್ಲಿ ಕೆಲವು ಕಡೆ ಒಂದೇ ಮನೆಯಲ್ಲಿ ವಾಸವಿರುವ ಕುಟುಂಬ ಸದಸ್ಯರ ಹೆಸರು ಬೇರೆ ಬೇರೆ ಬೂತ್‌ನಲ್ಲಿರುವುದು ಕಂಡುಬಂದಿದೆ. ಮತದಾರರಲ್ಲಿ ಗೊಂದಲ ಸೃಷ್ಟಿಸಲು ಇಂತಹ ಕೆಲಸ ಮಾಡಲಾಗಿದೆ’ ಎಂದರು.

ಕಾಂಗ್ರೆಸ್‌ ಬೆಂಬಲಿತರು ಹೆಚ್ಚಾಗಿರುವ ಬೂತ್‌ಗಳಲ್ಲಿ ಮತದಾರರ ಪಟ್ಟಿಯಲ್ಲಿರುವ ಹೆಸರುಗಳನ್ನು ಬೇರೆ ಬೇರೆ ಬೂತ್‌ಗಳಿಗೆ ಹಾಕಲಾಗುತ್ತಿದೆ. ಈ ಮೂಲಕ ವಾಮಮಾರ್ಗದಿಂದ ಅಧಿಕಾರ ಹಿಡಿಯು ಬಿಜೆಪಿ ಯತ್ನಿಸುತ್ತಿದೆ ಎಂದು ಹರಿಪ್ರಸಾದ್‌ ಆರೋಪಿಸಿದರು.

ರೈತರ ಸಹಿ ಸಂಗ್ರಹ ಅಭಿಯಾನ:

ಪ್ರಧಾನಿ ನರೇಂದ್ರ ಮೋದಿ ಅಸಾಂವಿಧಾನಿಕವಾಗಿ ಭೂಸುಧಾರಣಾ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಗೌರವ ತೋರಿದ್ದಾರೆ. ಪ್ರಧಾನಿಯ ಸರ್ವಾಧಿಕಾರಿ ಧೋರಣೆ ವಿರುದ್ಧ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ದೇಶದಾದ್ಯಂತ 5 ಕೋಟಿ ರೈತರ ಸಹಿ ಸಂಗ್ರಹಿಸಿ ರಾಷ್ಟ್ರಪತಿಗೆ ಸಲ್ಲಿಸಲಿದ್ದಾರೆ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್‌ ಹಿರಿಯ ಮುಖಂಡ ಆಸ್ಕರ್ ಫರ್ನಾಂಡಿಸ್‌ ರೈತರ ಸಹಿ ಸಂಗ್ರಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದು, ಕಾರ್ಯಕರ್ತರು ರೈತರ ಮನೆಮನೆಗೆ ತೆರಳಿ ಸಹಿ ಸಂಗ್ರಹ ಮಾಡಬೇಕು ಎಂದು ಸೂಚಿಸಿದರು.

ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಮುಚ್ಚಿಹಾಕಲು ಬಿಜೆಪಿ ನಾಯಕರು ಕಾಂಗ್ರೆಸ್‌, ನೆಹರೂ ಹಾಗೂ ದೇವರತ್ತ ಬೊಟ್ಟು ತೋರಿಸುತ್ತಿದ್ದಾರೆ. ರಾಷ್ಟ್ರವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ಬದಲು ಹಿಂದಕ್ಕೆ ಎಳೆದೊಯ್ಯಲಾಗುತ್ತಿದೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಪ್ರಕೃತಿ ವಿಕೋಪ ಪರಿಹಾರ ನೀಡಲು ಬಿಜೆಪಿ ಸಂಪೂರ್ಣ ವಿಫಲವಾಗಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರೈತರಿಗೆ ಹಾಗೂ ಮೀನುಗಾರರಿಗೆ ಆಗಿರುವ ನಷ್ಟವನ್ನು ಸರ್ಕಾರ ಕೂಡಲೇ ಭರಿಸಬೇಕು ಎಂದು ಹರಿಪ್ರಸಾದ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಾಜಿ ಶಾಸಕ ಗೋಪಾಲ ಪೂಜಾರಿ ಮುಖಂಡರಾದ ಎಂ.ಎ.ಗಫೂರ್, ವೆರೊನಿಕಾ ಕರ್ನೆಲಿಯೊ, ಮೋಹನ್‌, ದಿನೇಶ್ ಪುತ್ರನ್‌, ಗೀತಾ ವಾಗ್ಳೆ, ನವೀನ್‌ಚಂದ್ರ ಶೆಟ್ಟಿ, ಡಾ.ಸುನಿತಾ ಶೆಟ್ಟಿ, ದೇವಿಪ್ರಸಾದ್ ಶೆಟ್ಟಿ, ಭಾಸ್ಕರ್ ರಾವ್ ಕಿದಿಯೂರು, ಬಿ.ನರಸಿಂಹ ಮೂರ್ತಿ, ಕುಶಲ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT