ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

150 ಬ್ಲಾಕ್‌ಸ್ಪಾಟ್ ಪತ್ತೆ: ಕಲಾತ್ಮಕತೆಯ ಸ್ಪರ್ಶ

ನಮ್ಮ ಊರು ಸ್ವಚ್ಛ ಊರು ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನ, ತ್ಯಾಜ್ಯ ಸಂಗ್ರಹ ಜಾಗಗಳಲ್ಲಿ ಹೂದೋಟ ನಿರ್ಮಾಣ
Last Updated 19 ಅಕ್ಟೋಬರ್ 2021, 12:14 IST
ಅಕ್ಷರ ಗಾತ್ರ

ಉಡುಪಿ: ‘ನಮ್ಮ ಊರು, ಸ್ವಚ್ಛ ಊರು’ ಎಂಬ ಘೋಷಣೆಯಡಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಜಿಲ್ಲೆಯನ್ನು ‘ಬ್ಲಾಕ್ ಸ್ಪಾಟ್‌ ಮುಕ್ತ’ಗೊಳಿಸುವ ಜಿಲ್ಲಾ ಪಂಚಾಯಿತಿ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.

ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಅನುಷ್ಠಾನಗೊಂಡಿರುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಕೈಜೋಡಿಸಿದ್ದು, ರಸ್ತೆ, ಬಸ್ ನಿಲ್ದಾಣ, ನದಿಯ ಅಕ್ಕಪಕ್ಕದ ಸ್ಥಳ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿರುವ ತ್ಯಾಜ್ಯ ರಾಶಿಗಳನ್ನು ಗುರುತಿಸಿ ಜಿಲ್ಲಾ ಪಂಚಾಯಿತಿಗೆ ಮಾಹಿತಿ ನೀಡಿದ್ದಾರೆ. ಇದುವರೆಗೂ ಜಿಲ್ಲೆಯಲ್ಲಿ 150ಕ್ಕೂ ಹೆಚ್ಚು ತ್ಯಾಜ್ಯದ ರಾಶಿಗಳನ್ನು ಗುರುತಿಸಿ ನಿರ್ಮೂಲನೆ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ವೈ.ನವೀನ್ ಭಟ್‌ ತಿಳಿಸಿದ್ದಾರೆ.

55 ಬ್ಲಾಕ್‌ ಸ್ಪಾಟ್‌ಗಳನ್ನು ಗುರುತಿಸಿ 9483330564 ಸಂಖ್ಯೆಗೆ ಸಾರ್ವಜನಿಕರು ವಾಟ್ಸ್‌ ಆ್ಯಪ್‌ ಮಾಡಿದ್ದು, ಇದರಲ್ಲಿ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 42 ಬ್ಲಾಕ್‌ಸ್ಪಾಟ್‌ಗಳ ಪೈಕಿ 40 ಸ್ಥಳಗಳನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ. ನಗರ ವ್ಯಾಪ್ತಿಗೆ ಸೇರಿದ ಜಾಗಗಳನ್ನು ಸ್ವಚ್ಛಗೊಳಿಸಲು ನಗರಸಭೆಗೆ ಮಾಹಿತಿ ನೀಡಲಾಗಿದೆ.

100ಕ್ಕೂ ಹೆಚ್ಚು ಕಡೆಗಳಲ್ಲಿದ್ದ ಬ್ಲಾಕ್‌ ಸ್ಪಾಟ್‌ಗಳನ್ನು ಗ್ರಾಮ ಪಂಚಾಯಿತಿಗಳು ಸ್ವತಃ ಗುರುತಿಸಿ, ಸ್ವಚ್ಛಗೊಳಿಸಿದೆ. ಸ್ವಚ್ಛಗೊಳಿಸಿದ ಜಾಗಗಳಲ್ಲಿ ಗಿಡ ನೆಡಲಾಗಿದೆ. ಮಿನಿ ಉದ್ಯಾನ ನಿರ್ಮಾಣ, ಬ್ಯಾನರ್, ಸೂಚನಾ ಫಲಕಗಳನ್ನು ಅಳವಡಿಸಿ ಸುಂದರವಾಗಿಸಲಾಗಿದೆ. ಕೋಟೇಶ್ವರ, ಕೋಡಿಬೆಟ್ಟು, ಬೊಮ್ಮರಬೆಟ್ಟು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಸ ಎಸೆಯುವ ಜಾಗಗಳಲ್ಲಿ ಹೂದೋಟಗಳನ್ನು ನಿರ್ಮಿಸಿ ಕಲಾತ್ಮಕತೆಯ ಸ್ಪರ್ಶ ನೀಡಲಾಗಿದೆ ಎಂದರು.

ತ್ಯಾಜ್ಯ ಎಸೆದವರಿಗೆ ದಂಡ ವಿಧಿಸುವುದರೊಂದಿಗೆ ಅವರಿಂದಲೇ ಬ್ಲಾಕ್‌ಸ್ಪಾಟ್‌ಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಮಶಾನದ ಬಳಿ ತ್ಯಾಜ್ಯ ಎಸೆದವರನ್ನು ಪತ್ತೆ ಹಚ್ಚಿ ₹ 1,000 ದಂಡ ವಿಧಿಸಲಾಗಿದೆ. ಸಾಣೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 2,000, ಬಡಾ ಪಂಚಾಯಿತಿಯಲ್ಲಿ ₹ 2,000 ದಂಡ ವಿಧಿಸಲಾಗಿದೆ.

ಕೋಡಿಬೆಟ್ಟು ಗ್ರಾಮ ಪಂಚಾಯಿತಿಯಲ್ಲಿ ಕಸ ಎಸದವರಿಂದಲೇ ಕಸ ಹೆಕ್ಕಿಸಲಾಗಿದ್ದು, ಅಲೆವೂರು ಪಂಚಾಯಿತಿ ವ್ಯಾಪ್ತಿಯ ರಸ್ತೆ ಬದಿಯಲ್ಲಿ ತ್ಯಾಜ್ಯ ಎಸೆದವರನ್ನು ಗುರುತಿಸಿ ಕಸ ಹೆಕ್ಕಿಸಿ ₹ 2,000 ದಂಡ ಹಾಕಲಾಗಿದೆ ಎಂದು ಮಾಹಿತಿ ನೀಡಿದರು.

‘ಮಾಹಿತಿ ನೀಡಿದರೆ ಬಹುಮಾನ’

ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಎಸೆಯುವವರ ಫೋಟೊ, ಕಸ ತಂದು ಸುರಿಯುವ ವಾಹನಗಳ ಫೋಟೊ, ಕಸ ಬಿದ್ದಿರುವ ಜಾಗದ ಫೋಟೊ ಹಾಗೂ ಸ್ಥಳದ ಮಾಹಿತಿಯನ್ನು 9483330564 ವಾಟ್ಸ್‌ ಆ್ಯಪ್‌ ಮಾಹಿತಿ ನೀಡಿದರೆ ಗ್ರಾಮ ಪಂಚಾಯಿತಿಯಿಂದ ಸೂಕ್ತ ಬಹುಮಾನ ನೀಡಲಾಗುವುದು. ಮಾಹಿತಿ ನೀಡಿದವರ ಮೊಬೈಲ್ ಸಂಖ್ಯೆ ಹಾಗೂ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ‘ನಮ್ಮ ಊರು ಸ್ವಚ್ಛ ಊರು’ ಅಭಿಯಾನದ ಯಶಸ್ಸಿಗೆ ಕೈಜೋಡಿಸುವ ಮೂಲಕ ಜಿಲ್ಲೆಯನ್ನು ತ್ಯಾಜ್ಯ ಮುಕ್ತಗೊಳಿಸಲು ಸಹಕಾರ ನೀಡಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT