ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಸಿಟಿವಿಟಿ ದರ ಶೇ5ಕ್ಕಿಂತ ಕಡಿಮೆಯಾಗಲಿ: ಬಸವರಾಜ ಬೊಮ್ಮಾಯಿ ಸೂಚನೆ

ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿ: ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಸೂಚನೆ
Last Updated 21 ಜೂನ್ 2021, 14:24 IST
ಅಕ್ಷರ ಗಾತ್ರ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ 5 ಕ್ಕಿಂತ ಕಡಿಮೆಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ಸೂಚಿಸಿದರು.

ವಿಡಿಯೋ ಸಂವಾದದ ಮೂಲಕ ಜಿಲ್ಲೆಯ ಕೋವಿಡ್ ಸ್ಥಿತಿಗತಿ ಕುರಿತು ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಪಾಸಿಟಿವಿಟಿ ದರ ಶೇ 5ಕ್ಕಿಂತ ಕಡಿಮೆಗೊಳಿಸಬೇಕು ಎಂಬ ಷರತ್ತಿನೊಂದಿಗೆ ಜಿಲ್ಲೆಯನ್ನು ಸರ್ಕಾರ ಅನ್‌ಲಾಕ್ ಮಾಡಿದೆ. ಅನ್‌ಲಾಕ್ ಅವಧಿಯಲ್ಲಿ ಜನಜಂಗುಳಿ ಉಂಟಾಗದಂತೆ ನೋಡಿಕೊಳ್ಳಬೇಕು. ಸಾರ್ವಜನಿಕರು ಮಾಸ್ಕ್ ಧರಿಸುವುದು, ಅಂತರ ಪಾಲಿಸುವುದು ಕಡ್ಡಾಯವಾಗಬೇಕು. ಪೊಲೀಸ್‌ ಇಲಾಖೆಯಿಂದ ಪರಿಶೀಲಿಸಬೇಕು ಎಂದು ಎಸ್‌ಪಿ ವಿಷ್ಣುವರ್ಧನ್ ಅವರಿಗೆ ಬೊಮ್ಮಾಯಿ ಸೂಚಿಸಿದರು.

ಐಎಲ್‌ಐ ಮತ್ತು ಸಾರಿ ಪ್ರಕರಣಗಳನ್ನು ಶೀಘ್ರ ಗುರುತಿಸಿ ಚಿಕಿತ್ಸೆ ನೀಡಬೇಕು. ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು, ಮಾರ್ಗಸೂಚಿಯಲ್ಲಿ ಹೊರತಾದ ಚಟುವಟಿಕೆಗಳಿಗೆ ಅನುಮತಿ ಕೊಡಬೇಡಿ ಎಂದು ಸಚಿವರು ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಸೋಮವಾರ ಕೋವಿಡ್ ಲಸಿಕಾ ಮೇಳದ ಮೂಲಕ 30,000 ಡೋಸ್ ಲಸಿಕೆ ಹಾಕಲಾಗಿದೆ. ಜಿಲ್ಲೆಗೆ ಪ್ರತಿ ವಾರ ಸರಾಸರಿ 5,000 ಡೋಸ್ ಮಾತ್ರ ಲಸಿಕೆ ಬರುತ್ತಿದ್ದು, ಈ ಪ್ರಮಾಣವನ್ನು ಹೆಚ್ಚಳ ಮಾಡುವಂತೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮನವಿ ಮಾಡಿದರು.

ಕೋವಿಡ್ ಲಸಿಕೆ ಡೋಸ್ ಪ್ರಮಾಣವನ್ನು ದಿನಕ್ಕೆ 10,000 ರಿಂದ 12,000 ದವರೆಗೆ ಹೆಚ್ಚಳ ಮಾಡಲಾಗುವುದು. ಆಮ್ಲಜನಕ ಸ್ಥಾವರ ಕಾಮಗಾರಿ ಶೀಘ್ರ ಮುಕ್ತಾಯಗೊಳಿಸುವಂತೆ ಸೂಚಿಸಿದರು.

ಮಳೆ ಹಾನಿ ಮನೆಗಳ ಸಮೀಕ್ಷೆ ನಡೆಸಿ ಅಂದಾಜು ವರದಿ ಸಲ್ಲಿಸಬೇಕು. ಮನೆ ಹಾನಿ ಪ್ರದೇಶಗಳಲ್ಲಿ ಎಂಜಿನಿಯರ್ ಹಾಗೂ ಪಿಡಿಒ ಹಾಜರಿದ್ದು ಪರಿಶೀಲಿಸಿ ವರದಿ ಸಿದ್ಧಪಡಿಸಬೇಕು. ಸ್ಥಳಕ್ಕೆ ಭೇಟಿ ನೀಡಿದ ಛಾಯಾಚಿತ್ರ ಪಡೆಯಬೇಕು. ಕಾಲಮಿತಿಯೊಳಗೆ ಹಾನಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಮಂಗಳೂರಿನಲ್ಲಿ ಎಸ್.ಡಿ.ಆರ್.ಎಫ್ ಮತ್ತು ಎನ್.ಡಿ.ಆರ್.ಎಫ್ ತಂಡಗಳಿದ್ದು ತುರ್ತು ಸಂದರ್ಭ ಏಕಕಾಲದಲ್ಲಿ ಎರಡೂ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸಲು ಸಮಸ್ಯೆಯಾಗುತ್ತಿದೆ. ಉಡುಪಿ ಜಿಲ್ಲೆಗೆ ಪೂರ್ಣ ಪ್ರಮಾಣದ ತಂಡ ನೀಡುವಂತೆ ಜಿಲ್ಲಾಧಿಕಾರಿ ಕೋರಿದರು.

ಸಭೆಯಲ್ಲಿ ಕಾರ್ಕಳ ಶಾಸಕ ಸುನೀಲ್ ಕುಮಾರ್, ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಕರಾವಳಿ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾ ಪಂಚಾಯಿತಿ ಸಿಇಒ ಡಾ.ನವೀನ್ ಭಟ್, ಎಸ್‌ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿಲ್ಲಾ ಸರ್ಜನ್ ಮಧುಸೂದನ್ ನಾಯಕ್, ಡಿಎಚ್‌ಒ ಡಾ.ನಾಗಭೂಷಣ ಉಡುಪ ಉಪಸ್ಥಿತರಿದ್ದರು.

ಶಾಲಾ ಮಕ್ಕಳ ಆರೋಗ್ಯ ತಪಾಸಣೆ ಮಾಡಿ: ಬೊಮ್ಮಾಯಿ‌

ಕೋವಿಡ್ 3ನೇ ಅಲೆ ತಡೆಗೆ ಜಿಲ್ಲೆಯ ಎಲ್ಲ ಶಾಲಾ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು. ಶಾಲಾ ಮಕ್ಕಳ ವಿವರ ಸಂಗ್ರಹಿಸಿ, ವ್ಯಾಸಾಂಗ ಮಾಡುತ್ತಿರುವ ಶಾಲೆಯಲ್ಲಿಯೇ ಆರೋಗ್ಯ ತಪಾಸಣೆಗೆ ವ್ಯವಸ್ಥೆ ಮಾಡಿ. ಒಬ್ಬರು ಎಂಬಿಬಿಎಸ್ ವೈದ್ಯರು, ಆಯುಷ್ ವೈದ್ಯರು ಹಾಗೂ ಮಕ್ಕಳ ತಜ್ಞರನ್ನು ತಂಡದಲ್ಲಿರಬೇಕು. ಎಲ್ಲ ಗ್ರಾಮಗಳಲ್ಲಿನ ಶಾಲೆಗಳಿಗೆ ಭೇಟಿ ನೀಡಲು ಯೋಜನೆ ರೂಪಿಸಬೇಕು. ಮಕ್ಕಳ ಅಪೌಷ್ಠಿಕತೆಯನ್ನೂ ಪರಿಶೀಲಿಸಿ, ಉಚಿತ ಔಷಧ ವಿತರಿಸಿ. ಕಾರ್ಯಕ್ರಮ ಆಯೋಜನೆ ಕುರಿತು ಶಾಲಾ ಮುಖ್ಯೋಪಧ್ಯಾಯರು ಮತ್ತು ಅಂಗನವಾಡಿ ಕಾರ್ಯಕರ್ತರ ಮೂಲಕ ಮಕ್ಕಳ ಪೋಷಕರಿಗೆ ಮುಂಚಿತಾಗಿ ಮಾಹಿತಿ ನೀಡಬೇಕು. ತಪಾಸಣೆ ಸಂದರ್ಭ ಕೋವಿಡ್ ಮಾರ್ಗಸೂಚಿ ಪಾಲಿಸಬೇಕು. ಆರೋಗ್ಯ ತಪಾಸಣೆ ಜುಲೈ ಅಂತ್ಯದೊಳಗೆ ಮುಕ್ತಾಯಗೊಳಿಸಿ, ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯ ವೈದ್ಯರು, ಸಿಬ್ಬಂದಿ ಹಾಗೂ ಸಂಪನ್ಮೂಲ ಕುರಿತ ಸಮಗ್ರ ಯೋಜನೆ ಸಿದ್ದಪಡಿಸಿ ಎಂದು ಸಚಿವ ಬಸವರಾಜ ಬೊಮ್ಮಾಯಿ ಸೂಚಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT