ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾ ವಿಚಾರ: ಸಾಂಸ್ಕೃತಿಕ ರಾಜಕಾರಣ ಸಲ್ಲದು

ಶಿಕ್ಷಣ ತಜ್ಞ ಮಹಾಬಲೇಶ್ವರ ರಾವ್‌ ಅಭಿಮತ
Last Updated 24 ಜನವರಿ 2022, 16:01 IST
ಅಕ್ಷರ ಗಾತ್ರ

ಉಡುಪಿ: ಜನಗಣತಿಯಲ್ಲಿ ಸಂಸ್ಕೃತ ತಾಯ್ನುಡಿ, ಮಾತೃಭಾಷೆ ಎಂದು ದಾಖಲಿಸಿರುವವರ ಸಂಖ್ಯೆ ಕೇವಲ 24,000 ಇದ್ದರೂ ಕರ್ನಾಟಕದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ಸ್ಥಾಪನೆಗೆ ₹ 359 ಕೋಟಿ ಮೀಸಲಿರಿಸಿರುವುದು ಸಾಂಸ್ಕೃತಿಕವಾದ ರಾಜಕಾರಣ ಎಂದು ಶಿಕ್ಷಣ ತಜ್ಞ ಡಾ.ಮಹಾಬಲೇಶ್ವರ ರಾವ್‌ ಅಭಿಪ್ರಾಯಪಟ್ಟರು.

ಬಡಗುಬೆಟ್ಟು ಸೈಸೈಟಿಯ ಸಭಾಭವನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅವರ ಸಂಸತ್ ಭಾಷಣಗಳ ಭಾಗ–1, ತುಳು ಕೊಡವ ಭಾಷೆಗಳ ಅಳಿವು ಉಳಿವು ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು.

ಕನ್ನಡ ವಿಶ್ವವಿದ್ಯಾಲಯಕ್ಕೆ ₹ 1 ಕೋಟಿ ಆರ್ಥಿಕ ನೆರವು ನೀಡಲು, ಗಂಗೂಬಾಯಿ ಹಾನಹಲ್‌ ಸಂಗೀತ ವಿವಿ, ಅಕ್ಕಮಹಾದೇವಿ ವಿವಿ ಸೇರಿದಂತೆ ರಾಜ್ಯದ ಇತರ ವಿವಿಗಳಿಗೆ ನೆರವು ನೀಡಲು ಸರ್ಕಾರದ ಬಳಿ ಹಣವಿಲ್ಲ. ಆದರೆ, ಸಂಸ್ಕೃತಿ ವಿವಿಗೆ ನೀಡಲು ದುಡ್ಡಿದೆ ಎಂದರು.

ಭಾಷಾ ಮಾಧ್ಯಮದ ಆಯ್ಕೆ ಮಗುವಿನ ಆಯ್ಕೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಅದರಂತೆ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಬೆಲೆ ಇಲ್ಲದಂತಾಗಿದೆ. ಮುಂದೆ, ತುಳು ಬಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸಿದರೂ ತುಳು ಮಾಧ್ಯಮವನ್ನು ಕಡ್ಡಾಯಗೊಳಿಸಲು ಸಾಧ್ಯವಿಲ್ಲ ಎಂದರು.

ಸಂವಿಧಾನದಲ್ಲಿ ಭಾಷೆಗೆ ಸಂಬಂಧಿಸಿದ ಪರಿಚ್ಛೇಧವನ್ನು ತಿದ್ದುಪಡಿ ಮಾಡುವ ಮೂಲಕ ಕರ್ನಾಟಕದಲ್ಲಿ 1ರಿಂದ 10ನೇ ತರಗತಿವರೆಗೆ ಪ್ರಾದೇಶಿಕ ಭಾಷೆ ಹಾಗೂ ಆಡಳಿತ ಭಾಷೆಯಲ್ಲಿ ಕನ್ನಡ ಕಡ್ಡಾಯ ಸಾಧ್ಯವಿದೆ ಎಂದು ರಾಮಚಂದ್ರಪ್ಪನಂತಹ ಭಾಷಾ ತಜ್ಞರು ರಾಜ್ಯ ಸರ್ಕಾರಕ್ಕೆ ಶಿಪಾರಸು ಮಾಡಿದ್ದು ಅನುಷ್ಠಾನವಾಗಬೇಕು ಎಂದರು.

ದೇಶದಲ್ಲಿ ಹಿಂದಿ ಭಾಷೆಯ ಬೆಳವಣಿಗೆಗೆ ಸಂಸ್ಕೃತವನ್ನು ಸೇರಿಸಿಕೊಳ್ಳುವ ಪ್ರಯತ್ನಗಳು ನಡೆದ್ದು, ವೈದಿಕಶಾಯಿಗಳು ಸಂಸ್ಕೃತ ಭಾಷೆಗೆ ಇಲ್ಲದ ಪ್ರಚಾರ ಹಾಗೂ ಪ್ರೋತ್ಸಾಹ ನೀಡುತ್ತಿದ್ದಾರೆ. 24 ಸಾವಿರ ಸಂಸ್ಕೃತ ಭಾಷಿಕರು ಇರುವ ದೇಶದಲ್ಲಿ 16 ಸಂಸ್ಕೃತ ವಿಶ್ವವಿದ್ಯಾಲಯಗಳಿದ್ದರೂ, ರಾಜ್ಯದಲ್ಲಿ ಸಂಸ್ಕೃತ ವಿವಿ ಸ್ಥಾಪನೆಗೆ ಸರ್ಕಾರ ಒಲವು ತೋರುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಮೂಹಿಕವಾಗಿ ಉತ್ತರ ಭಾರತೀಯರು ದಕ್ಷಿಣ ಭಾರತದ ಭಾಷೆಗಳನ್ನು ಕಲಿಯುವುದಿಲ್ಲ. ಆದರೆ, ದಕ್ಷಿಣ ಭಾರತೀಯರು ವಿಶಾಲ ಹೃದಯದವರಾಗಿದ್ದು ಎಲ್ಲ ಭಾಷೆಗಳನ್ನು ಕಲಿಯಲು ಮುಂದಾಗುತ್ತಿರುವ ಪರಿಣಾಮ ಬೆಂಗಳೂರಿನಂತಹ ನಗರಗಳಲ್ಲಿ ಕನ್ನಡ ಭಾಷೆಯ ಬಳಕೆಯೇ ಕಡಿಮೆಯಾಗುತ್ತಿದೆ. ತ್ರಿಭಾಷಾ ಸೂತ್ರ ಅವೈಜ್ಞಾನಿಕವಾಗಿದ್ದು ರಾಷ್ಟ್ರೀಯ ಶಿಕ್ಷಣ ನೀತಿಗೆ ಅಳವಡಿಸುವುದು ಸರಿಯಲ್ಲ ಎಂದು ವಿರೋಧ ವ್ಯಕ್ತಪಡಿಸಿದರು.

ಬಿ.ಕೆ.ಹರಿಪ್ರಸಾದ್ ಮಾತನಾಡಿ, ಒಂದು ರಾಷ್ಟ್ರ, ಒಂದು ಚುನಾವಣೆ, ಒಂದು ಪಡಿತರದಂತೆ ದೇಶದಾದ್ಯಂತ ಒಂದೇ ಭಾಷೆ ಹೇರುವ ಪ್ರಯತ್ನಗಳು ನಡೆಯುತ್ತಿದ್ದು ಅದು ಎಂದಿಗೂ ಫಲಿಸುವುದಿಲ್ಲ. ತುಳು ಭಾಷೆ ಮಾತೃಭಾಷೆ ಮಾತ್ರವಲ್ಲ ಕರಾವಳಿಯ ಸಂಸ್ಕೃತಿ, ಕಲೆ ಆಚಾರ ವಿಚಾರ ಎಂದರು.

ಜಾನಪದ ವಿದ್ವಾಂಸ ಬನ್ನಂಜೆ ಬಾಬು ಅಮೀನ್ ಪುಸ್ತಕ ಬಿಡುಗಡೆ ಮಾಡಿದರು. ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಅಮೃತ್ ಶೆಣೈ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT