ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುತ್ವ ಪ್ರತಿಪಾದಕರು ಹಿಂದೂ ಕೋಡ್‌ ಬಿಲ್ ಜಾರಿಗೆ ತರಲಿ: ದಿನೇಶ್ ಅಮಿನ್‌ಮಟ್ಟು

ಅಂಬೇಡ್ಕರ್ ಬದುಕು, ಹೋರಾಟ ಕುರಿತು ಉಪನ್ಯಾಸ
Last Updated 14 ಏಪ್ರಿಲ್ 2022, 14:22 IST
ಅಕ್ಷರ ಗಾತ್ರ

ಉಡುಪಿ: ಹಿಂದೂ ಧರ್ಮ ಸುಧಾರಣೆಯಾಗದಿದ್ದರೆ ಪ್ರಜಾಪ್ರಭುತ್ವಕ್ಕೆ ಭವಿಷ್ಯವಿಲ್ಲ, ಹಿಂಧೂ ಧರ್ಮ ಬದುಕುವುದಿಲ್ಲ ಎಂದು ಡಾ.ಬಿ.ಆರ್‌.ಅಂಬೇಡ್ಕರ್ ಬಲವಾಗಿ ಪ್ರತಿಪಾದಿಸಿದ್ದರು. ಅವರ ಮಾತುಗಳು ಇಂದು ನಿಜವಾಗುತ್ತಿವೆ ಎಂದು ಚಿಂತಕ ಹಾಗೂ ಹಿರಿಯ ಪತ್ರಕರ್ತ ದಿನೇಶ್ ಅಮಿನ್‌ಮಟ್ಟು ಆತಂಕ ವ್ಯಕ್ತಪಡಿಸಿದರು.

'ಸಹಬಾಳ್ವೆ ಉಡುಪಿ ಹಾಗೂ ದಸಂಸ (ಅಂಬೇಡ್ಕರ್ ವಾದ) ಗುರುವಾರ ಆದಿ ಉಡುಪಿಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ‘ಅಂಬೇಡ್ಕರ್ ಬದುಕು ಹಾಗೂ ಹೋರಾಟ‘ ಕುರಿತು ವಿಶೇಷ ಉಪನ್ಯಾಸ ನೀಡಿದ ಅವರು, ಅಂಬೇಡ್ಕರ್‌ಗೆ ಹಿಂದೂ ವಿರೋಧಿ ಎಂಬ ಹಣೆಪಟ್ಟಿ ಕಟ್ಟಲಾಗಿದೆ. ವ್ಯಕ್ತಿ ಧಾರ್ಮಿಕನಾಗುವುದು ತಪ್ಪಲ್ಲ, ಕೋಮುವಾದಿಯಾಗುವುದು ಅಪರಾಧ. ಅಂಬೇಡ್ಕರ್ ಧಾರ್ಮಿಕ ವ್ಯಕ್ತಿಯಾಗಿದ್ದವರು. ಜೀವನದುದ್ದಕ್ಕೂ ಹಿಂದೂ ಧರ್ಮದ ಸುಧಾರಣೆಗೆ ಶ್ರಮಿಸಿದವರು. ಅದಕ್ಕಾಗಿಯೇ ಹಿಂದೂ ಕೋಡ್‌ ಬಿಲ್‌ ಜಾರಿಗೆ ಮುಂದಾಗಿದ್ದರು ಎಂದರು.

ಮಹಿಳೆಯರಿಗೆ ಆಸ್ತಿಯ ಹಕ್ಕನ್ನು ಕೊಡುವುದು ಹಾಗೂ ವಿವಾಹ ಸಂಬಂಧಗಳಲ್ಲಿ ಜಾತಿ ತೊಡೆದುಹಾಕುವುದು ಹಿಂದೂ ಕೋಡ್‌ಬಿಲ್‌ನ ಮುಖ್ಯ ಆಶಯವಾಗಿತ್ತು. ಆದರೆ, ಅಂಬೇಡ್ಕರ್ ಆಶಯಕ್ಕೆ ಅಂದು ಬಾಬು ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಬಾಯ್‌ ಪಟೇಲ್‌ ವಿರೋಧಿಸಿದರು. ನೆಹರೂ ಬೆಂಬಲ ಕೊಟ್ಟರಾದರೂ ಎಲ್ಲರನ್ನೂ ವಿರೋಧಿಸಿ ಬೆಂಬಲ ನೀಡುವ ಚೈನತ್ಯ ಹೊಂದಿರಲಿಲ್ಲ ಎಂದರು.

ಪ್ರಸ್ತುತ ಹಿಂದುತ್ವದ ಪರವಾಗಿ ಮಾತನಾಡುತ್ತಿರುವ ಎಲ್ಲರೂ ಹಿಂದೂ ಧರ್ಮದ ಸುಧಾರಣೆಗಾಗಿ ಇರುವ ಹಿಂದೂ ಕೋಡ್‌ ಬಿಲ್‌ ಅನ್ನು ಜಾರಿಗೆ ತಂದು ಕಾನೂನಿನ ರೂಪ ಕೊಡಬೇಕು. ಸಾಧ್ಯವಾಗದಿದ್ದರೆ ಬಹಿರಂಗವಾಗಿ ಒಪ್ಪಿಕೊಳ್ಳಬೇಕು ಎಂದು ಅಮಿನ್‌ಮಟ್ಟು ಸವಾಲು ಹಾಕಿದರು.

‘ನಮ್ಮ ಸಂವಿಧಾನ ಬಹುತ್ವವನ್ನು ಪ್ರತಿಪಾದಿಸುತ್ತದೆಯೇ ಹೊರತು ಏಕ ಸಂಸ್ಕೃತಿ, ಭಾಷೆ, ಧರ್ಮವನ್ನಲ್ಲ. ಸಂವಿಧಾನ ಬದಲಿಸುವ ಹೇಳಿಕೆಗಳು ಆಗಾಗ ಕೇಳಿಬಂದರೂ ಅದು ಸಾಧ್ಯವಿಲ್ಲ. ಆದರೆ, ನಿಷ್ಕ್ರಿಯಗೊಳಿಸಲು ಸಾಧ್ಯವಿದೆ. ಸಂವಿಧಾನವನ್ನು ದುರ್ಬಗೊಳಿಸುವ ಪ್ರಯತ್ನಗಳು ನಡೆದಾಗಲೆಲ್ಲ ಪ್ರತಿಭಟಿಸುವ ಎಚ್ಚರ ಸದಾ ಜಾಗೃತವಾಗಿರಬೇಕು’ ಎಂದು ಸಲಹೆ ನೀಡಿದರು.

1991ರಲ್ಲಿ ಬಾಬ್ರಿ ಮಸೀದಿ ಧ್ವಂಸ ಹಾಗೂ ಜಾಗತೀಕರಣದ ಶಕೆ ಆರಂಭವಾಗಿ, ಬಂಡವಾಳ ವಾದ, ಬ್ರಾಹ್ಮಣ ವಾದ ಪ್ರವೇಶವಾಯಿತು. ಕೋಮುವಾದ ಹಾಗೂ ಬಂಡವಾಳವಾದದಲ್ಲಿ ದಲಿತರು, ಹಿಂದುಳಿದ ವರ್ಗ ಬಲಿಪಶುಗಳಾದರೆ, ಮತ್ತೊಂದು ವರ್ಗದವರು ಫಲಾನುಭವಿಗಳಾದರು ಎಂದರು.

ದೇಶದಲ್ಲಿ ಅಂಬೇಡ್ಕರ್ ಬಯಸಿದ ಸಂವಿಧಾನ ರಚನೆಯಾಗಿಲ್ಲ, ಅನಿವಾರ್ಯವಾಗಿ ರಚನೆಯಾದ ಸಂವಿಧಾನ ಅಸ್ತಿತ್ವದಲ್ಲಿದೆ. ಅವರು ಬಯಸಿದ ಸಂವಿಧಾನ ರಚನೆಯಾಗಿದ್ದರೆ ಉದ್ಯಮ ಹಾಗೂ ಕೃಷಿ ಕ್ಷೇತ್ರದ ರಾಷ್ಟ್ರೀಕರಣವಾಗುತ್ತಿತ್ತು. ಚುನಾವಣಾ ವ್ಯವಸ್ಥೆ ಸುಧಾರಣೆಯಾಗುತ್ತಿತ್ತು ಎಂದರು.

ಅಂಬೇಡ್ಕರ್ ಮುಸ್ಲಿಮರಿಗೆ ವಿರುದ್ಧವಾಗಿರಲಿಲ್ಲ. ಮುಸ್ಲಿಂ ಧರ್ಮದೊಳಗಿದ್ದ ದೋಷಗಳ ಬಗ್ಗೆ ಕಟುವಾಗಿ ಮಾತನಾಡಿದ್ದರು. ಸ್ವಾಮಿ ವಿವೇಕಾನಂದ, ಕುವೆಂಪು ಹಾಗೂ ನಾರಾಯಣ ಗುರುಗಳು ಕೂಡ ಹಿಂದೂ ಧರ್ಮದ ಸುಧಾರಣೆಯ ಬಗ್ಗೆ ‌ಧನಿ ಎತ್ತಿದವರೇ ಎಂದು ಅಮಿನ್‌ಮಟ್ಟು ಹೇಳಿದರು.

ಕರಾವಳಿಯಲ್ಲಿ ಬಿಲ್ಲವ ಹಾಗೂ ಮುಸ್ಲಿಮರ ನಡುವೆ ಐಕ್ಯತೆ ತರುವ ಯತ್ನಗಳನ್ನು ಹತ್ತಿಕ್ಕಲಾಯಿತು. ಎರಡೂ ಸಮುದಾಯಗಳನ್ನು ಮತ್ತೆ ಒಟ್ಟಿಗೆ ಸೇರಿಸುವ ಪ್ರಯತ್ನಗಳು ನಡೆಯಬೇಕು. ಮನುಶಾಸ್ತ್ರವನ್ನು ಸುಟ್ಟು ಅಂಬೇಡ್ಕರ್ ಸಂವಿಧಾನ ರಚನೆ ಮಾಡಿದ್ದರು ಎಂಬ ಅರಿವು ಸದಾ ಜಾಗೃತವಾಗಿರಬೇಕು.

ಹಿಂದುತ್ವದ ಪರವಾಗಿ ಕೂಗುತ್ತಿರುವ ಮೋಹನ್ ಭಾಗವತ್‌, ಕಲ್ಲಡ್ಕ ಪ್ರಭಾಕರ್ ಭಟ್‌ ಅಂಥವರಿಂದ ಹಿಂದೂ ಧರ್ಮ ಉಳಿದಿರುವುದಲ್ಲ. ಸ್ವಾಮಿ ವಿವೇಕಾನಂದ, ಕುವೆಂಪು ಹಾಗೂ ನಾರಾಯಣ ಗುರುಗಳಂತವರು ಕಾಲಕಾಲಕ್ಕೆ ಹಿಂದೂ ಧರ್ಮದ ಸುಧಾರಣೆ ಮಾಡಿದ್ದರಿಂದ ಉಳಿದಿದೆ ಎಂದು ಅಮಿನ್‌ಮಟ್ಟು ಹೇಳಿದರು.

ಫಾದರ್ ವಿಲಿಯಂ ಮಾರ್ಟಿಸ್‌ ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ದಲಿತ ಸಂಘರ್ಷ ಸಮಿತಿಯ ಸುಂದರ್ ಮಾಸ್ತರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಿಪಿಐಎಂ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ, ಕಾಂಗ್ರೆಸ್‌ ನಾಯಕಿ ವೆರೊನಿಕಾ ಕರ್ನೆಲಿಯೋ, ಮುಸ್ಲಿಂ ಮುಖಂಡ ಇಬ್ರಾಹಿಂ ಕೋಟ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT