ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಡೆಗೋಲು ಕೃಷ್ಣನಿಗೆ ಬ್ರಹ್ಮಕಲಶೋತ್ಸವ ಸಂಭ್ರಮ

ಅಷ್ಟಮಠಾಧೀಶರಿಂದ 108 ರಜತ ಕಲಶಗಳಿಂದ ದೇವರಿಗೆ ಅಭಿಷೇಕ
Last Updated 9 ಜೂನ್ 2019, 18:30 IST
ಅಕ್ಷರ ಗಾತ್ರ

ಉಡುಪಿ: ಪೊಡವಿಗೊಡೆಯ ಶ್ರೀಕೃಷ್ಣನಿಗೆ ಭಾನುವಾರ ಅಷ್ಠಮಠಾಧೀಶರು ಬ್ರಹ್ಮಕಲಶಾಭಿಷೇಕ ನೆರವೇರಿಸಿದರು. ಶ್ರೀಕೃಷ್ಣನಿಗೆ 108 ರಜತ ಕಲಶಗಳಿಂದ ಅಭಿಷೇಕ ಮಾಡಲಾಯಿತು. ಈ ಸಂಭ್ರಮದ ಕ್ಷಣವನ್ನು ಸಾವಿರಾರು ಭಕ್ತರು ಕಣ್ತುಂಬಿಕೊಂಡರು.

ಶ್ರೀಕೃಷ್ಣಮಠದಲ್ಲಿ ಸುವರ್ಣ ಗೋಪುರ ಸಮರ್ಪಣೋತ್ಸವ ಹಾಗೂ ಬ್ರಹ್ಮಕಲಶಾಭಿಷೇಕ ಮಹೋತ್ಸವದ ಅಂಗವಾಗಿಮೇ 31ರಿಂದ ನಿರಂತರ ಧಾರ್ಮಿಕ ವಿಧಿವಿಧಾನಗಳು ನಡೆದಿದ್ದವು. ಭಾನುವಾರ ಬ್ರಹ್ಮಕಲಶಾಭಿಷೇಕ ನೆರವೇರುವ ಮೂಲಕ 10 ದಿನಗಳ ಉತ್ಸವಕ್ಕೆ ತೆರೆಬಿತ್ತು.

ಬೆಳಗಿನ ಜಾವಶ್ರೀಕೃಷ್ಣನಿಗೆ ನೈರ್ಮಾಲ್ಯ ವಿಸರ್ಜನೆ ಪೂಜೆ ನೆರವೇರಿಸಿತು. ಬಳಿಕ ಅಷ್ಠಮಠಾಧೀಶರು ಶ್ರೀಕೃಷ್ಣನ ಗರ್ಭಗುಡಿಯ ಮುಂದೆ 108 ಕಶಲಗಳನ್ನು ಪ್ರತಿಷ್ಠಾಪಿಸಿ, ಪೂಜಿಸಿದರು. ವಿದ್ವಾಂಸರು ಮಂತ್ರಗಳನ್ನು ಪಟಿಸಿದರು. ನಂತರ ಮಂಗಳಾರತಿ ನೆರವೇರಿತು.

ಬಳಿಕ ಆರಾಧನೆ ಮಾಡಿದ ಕಲಶಗಳನ್ನು ಸ್ವತಃ ಅಷ್ಠಮಠಾಧೀಶರೇ ಗರ್ಭಗುಡಿಯ ಒಳಗೆ ಕೊಂಡೊಯ್ದರು. ಬಳಿಕ ಪಲಿಮಾರು ವಿದ್ಯಾಧೀಶ ಶ್ರೀಗಳು ಅನುಸಂಧಾನ ನಡೆಸಿ ಮೊದಲ ಅಭಿಷೇಕ ಮಾಡಿದರು. ಬಳಿಕ ಪೇಜಾವರಮಠದ ವಿಶ್ವೇಶ ತೀರ್ಥರು ಅಭಿಷೇಕ ಮಾಡಿದರು.

ನಂತರದಲ್ಲಿಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥರು,ಅದಮಾರು ಮಠದ ವಿಶ್ವಪ್ರಿಯ ತೀರ್ಥರು,ಕಾಣಿಯೂರು ಮಠದ ವಿದ್ಯಾ ವಲ್ಲಭತೀರ್ಥರು,ಸೋದೆ ಮಠದ ವಿಶ್ವವಲ್ಲಭ ತೀರ್ಥರು,ಪೇಜಾವರ ಮಠದ ಕಿರಿಯ ಯತಿ ವಿಶ್ವಪ್ರಸನ್ನ ತೀರ್ಥರು,ಅದಮಾರು ಮಠದ ಕಿರಿಯ ಯತಿ ಈಶಪ್ರಿಯ ತೀರ್ಥರು ಶ್ರೀಕೃಷ್ಣನಿಗೆ ಬ್ರಹ್ಮಕಲಶಾಭಿಷೇಕ ಮಾಡಿದರು.

ಬಳಿಕ ಅದಮಾರು ಮಠದ ವಿಶ್ವಪ್ರಿಯ ಶ್ರೀಗಳು, ಸೋದೆ ಮಠದ ವಿಶ್ವವಲ್ಲಭ ಶ್ರೀಗಳು ಸರ್ವಾಲಂಕೃತ ಪೂಜಿತ 2 ಪ್ರಧಾನ ಬ್ರಹ್ಮಕಲಶಗಳನ್ನು ಗರ್ಭಗುಡಿಗೆ ಕೊಂಡೊಯ್ದು ಅಷ್ಠ ಮಠಗಳ ಯತಿಗಳು ಒಟ್ಟಾಗಿ ಅಭಿಷೇಕ ನೆರವೇರಿಸಿದರು.

ಈ ಸಂದರ್ಭ ಕೃಷ್ಣಮಠದ ತುಂಬೆಲ್ಲ ಗೋವಿಂದ..ಗೋವಿಂದ..ಜಯಘೋಷ ಮುಗಿಲುಮುಟ್ಟಿತು. ಮಹಾಮಂಗಳಾರತಿ ನಂತರ ಪಲಿಮಾರು ಶ್ರೀಗಳು ಕೃಷ್ಣನಿಗೆ ಅಲಂಕಾರ ಮಾಡಿದರು.ಪಲಿಮಾರು ಮಠದ ಕಿರಿಯ ಯತಿ ವಿದ್ಯಾರಾಜೇಶ್ವರ ಶ್ರೀಗಳು ಉಪಸ್ಥಿತರಿದ್ದರು.

ಬಳಿಕ ರಾಜಾಂಗಣದಲ್ಲಿ ಸಂಗೀರ್ತನ ಗೋಪುರಂ ಕಾರ್ಯಕ್ರಮ ನೆರವೇರಿತು. ಬೆಂಗಳೂರಿನ ಶ್ರೀರಾಮಕೃಷ್ಣ ಭಜನಾ ಸಭಾ, ಶ್ರೀರಂಗಂನ ಶ್ರೀನಾಮ ಸಂಕೀರ್ತನ ವೃಂದ ಹಾಗೂ ಕರಾವಳಿ ಸಂಗೀತ ಕಲಾವಿದರ ಒಕ್ಕೂಟದಿಂದ ಸಂಕೀರ್ತನೆಗಳು ನಡೆದವು.

ಮಧ್ಯಾಹ್ನ ರಾಜಾಂಗಣದಲ್ಲಿ ಭಕ್ತರಿಗೆ ವಿಶೇಷ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಅನ್ನಸಂತರ್ಪಣೆಗೆ ಹಲವು ಕೌಂಟರ್‌ಗಳನ್ನು ತೆರೆಯಲಾಗಿತ್ತು. ಸಾವಿರಾರು ಭಕ್ತರು ಅನ್ನ ಪ್ರಸಾದ ಸ್ವೀಕರಿಸಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದೆ ಶೋಭಾ ಕೇರಂದ್ಲಾಜೆ ಶ್ರೀಕೃಷ್ಣಮಠಕ್ಕೆ ಭೇಟಿನೀಡಿ ಸುವರ್ಣ ಗೋಪುರ ವೀಕ್ಷಿಸಿದರು. ಮಠದ ಪಿಆರ್‌ಓ ಶ್ರೀಶ ಭಟ್‌ ಕಡೆಕಾರ್‌, ಸಚ್ಚಿದಾನಂದ ರಾವ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT