ಸೋಮವಾರ, ಮೇ 16, 2022
30 °C
ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಸಭೆಯಲ್ಲಿ ಸದಸ್ಯರ ಅಸಮಾಧಾನ

ವರ್ಷವಾದರೂ ಪಿಂಚಣಿ ಇಲ್ಲ; ಅಶಕ್ತರ ಗೋಳು ಕೇಳುವರಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ಸಾಮಾಜಿಕ ಭದ್ರತಾ ಯೋಜನೆಯಡಿ ವೃದ್ಧರು, ಅಶಕ್ತರು, ಅಂಗವಿಕಲರು ಹಾಗೂ ಬಡ ವರ್ಗದವರಿಗೆ ನೀಡಲಾಗುವ ಮಾಸಿಕ ಪಿಂಚಣಿ ವರ್ಷವಾದರೂ ಕೈಸೇರುತ್ತಿಲ್ಲ. ಫಲಾನುಭವಿಗಳು ಅಂಚೆ ಕಚೇರಿಗಳಿಗೆ ಅಲೆದು ಸಾಕಾಗಿದೆ. ಪಿಂಚಣಿ ಸಮಸ್ಯೆ ಕುರಿತು ಪ್ರತಿ ಸಭೆಯಲ್ಲಿ ಧನಿ ಎತ್ತಿದರೂ ಪರಿಹಾರ ಸಿಕ್ಕಿಲ್ಲ ಎಂದು ಸದಸ್ಯೆಯರಾದ ಡಾ.ಸುನಿತಾ ಶೆಟ್ಟಿ ಹಾಗೂ ನಳಿನಿ ಪ್ರದೀಪ್ ರಾವ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬುಧವಾರ ಉಡುಪಿ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಮೊದಲಿಗೆ ವಿಷಯ ಪ್ರಸ್ತಾಪಿಸಿದ ನಳಿನಿ ಪ್ರದೀಪ್ ರಾವ್‌, ‘ತಾಂತ್ರಿಕ ಸಮಸ್ಯೆ ಕಾರಣದಿಂದ ಫಲಾನುಭವಿಗಳಿಗೆ ಹಲವು ತಿಂಗಳುಗಳಿಂದ ಪಿಂಚಣಿ ಸಿಗುತ್ತಿಲ್ಲ. ಪಿಂಚಣಿಗಾಗಿ ರಿಕ್ಷಾ ಬಾಡಿಗೆಗೆ ನೂರಾರು ರೂಪಾಯಿ ಖರ್ಚು ಮಾಡಿಕೊಂಡು ಅಂಚೆ ಕಚೇರಿಗೆ ಅಲೆಯುವಂತಾಗಿದೆ. ಪಿಂಚಣಿ ಕೊಡದಿದ್ದರೆ ಅವರು ಜೀವನ ನಿರ್ವಹಣೆ ಮಾಡುವುದು ಹೇಗೆ. ಪೋಸ್ಟ್‌ಮ್ಯಾನ್‌ಗಳ ಮೂಲಕ ಫಲಾನುಭವಿಗಳ ಮನೆ ಬಾಗಿಲಿಗೆ ಪಿಂಚಣಿ ಮುಟ್ಟಿಸುವ ವ್ಯವಸ್ಥೆಯಾಗಬೇಕು ಎಂದು ಒತ್ತಾಯಿಸಿದರು.

ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಅಧಿಕಾರಿ ಪಿಂಚಣಿಯನ್ನು ಖಚಾನೆ 2ರ ಮೂಲಕ ಪಾವತಿಸಲು ಮಾತ್ರ ಅವಕಾಶವಿದೆ. ಸಮಸ್ಯೆ ಸಂಬಂಧ ಅಂಚೆ ಅಧೀಕ್ಷಕರ ಬಳಿ ಚರ್ಚಿಸಲಾಗಿದ್ದು, ಪೋಸ್ಟ್‌ಮ್ಯಾನ್‌ಗಳು ಗ್ರಾಮದ ಫಲಾನುಭವಿಗಳ ಮನೆಗಳಿಗೆ ತೆರಳಿ ಸ್ವೈಪಿಂಗ್ ಮೆಷಿನ್‌ಗಳ ಮೂಲಕ ಪಿಂಚಣಿ ಪಾವತಿಸಲು ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ವರ್ಷದ ಹಿಂದೆ ಬಸವ ವಸತಿ ಯೋಜನೆಯಡಿ ವಸತಿ ವಿತರಿಸಲು 20 ಫಲಾನುಭವಿಗಳ ಪಟ್ಟಿ ಪಡೆಯಲಾಗಿದೆ. ಆದರೆ, ಇದುವರೆಗೂ ವಸತಿ ಹಂಚಿಕೆಯಾಗಿಲ್ಲ. ಹಿಂದೆ ಆಯ್ಕೆಯಾದ ಫಲಾನುಭವಿಗಳಿಗೂ ಹಣ ಬಿಡುಗಡೆಯಾಗಿಲ್ಲ. ಉಪ್ಪೂರಿನಲ್ಲಿ ಅಂಗವಿಕಲರೊಬ್ಬರು ಸಾಲಮಾಡಿ ಮನೆಕಟ್ಟಿಕೊಂಡಿದ್ದು, ಸರ್ಕಾರದಿಂದ ಕಂತು ಬಿಡುಗಡೆಯಾಗದೆ ಸಮಸ್ಯೆಗೆ ಸಿಲುಕಿದ್ದಾರೆ ಎಂದು ನಳಿನಿ ಪ್ರದೀಪ್‌ ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅಧಿಕಾರಿ, 147 ಫಲಾನುಭವಿಗಳಿಗೆ ₹ 78 ಲಕ್ಷ ಅನುದಾನ ಬಿಡುಗಡೆ ಬಾಕಿ ಇದೆ. ಜಿಲ್ಲೆಯಲ್ಲಿ 3,021 ಫಲಾನುಭವಿಗಳಿಗೆ ವಸತಿ ಹಂಚಿಕೆ ಬಾಕಿ ಇದ್ದು, ಈ ಅರ್ಜಿಗಳು ವಿಲೇವಾರಿ ನಂತರವಷ್ಟೆ ಹೊಸ ಫಲಾನುಭವಿಗಳ ಆಯ್ಕೆ ಸಾಧ್ಯ ಎಂದು ಉತ್ತರಿಸಿದರು.

ನರೇಗಾ ಯೋಜನೆಯಡಿ ಕೋಳಿಗೂಡು ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ಆದರೆ, ಸಣ್ಣಪುಟ್ಟ ಕಾಮಗಾರಿಗೂ ಜಿಎಸ್‌ಟಿ ಬಿಲ್‌ ಸಲ್ಲಿಕೆ ಕಡ್ಡಾಯ ಮಾಡಲಾಗಿದ್ದು, ಫಲಾನುಭವಿಗಳಿಗೆ ಸಮಸ್ಯೆಯಾಗಿದೆ. ನಿಯಮ ಸಡಿಲಿಸಿದರೆ ಹೆಚ್ಚು ಅನುಕೂಲ ಎಂದು ಸುನಿತಾ ಶೆಟ್ಟಿ ಅಭಿಪ್ರಾಯ ಮಂಡಿಸಿದರು. ನರೇಗಾದಲ್ಲಿ ಹಣ ದುರುಪಯೋಗ ತಡೆಗೆ ಕಡ್ಡಾಯವಾಗಿ ಜಿಎಸ್‌ಟಿ ಬಿಲ್‌ ಸಲ್ಲಿಸಬೇಕು ಎಂಬ ನಿಯಮ ಮಾಡಲಾಗಿದ್ದು, ಬದಲಿಸಲು ಅವಕಾಶವಿಲ್ಲ ಎಂದು ಉಪಾಧ್ಯಕ್ಷ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಪಡಿತರ ಪಡೆಯಲು ತಾಂತ್ರಿಕ ಸಮಸ್ಯೆ ಅಡ್ಡಿಯಾಗಿದೆ. ಸರ್ವರ್ ಕೈಕೊಡುತ್ತಿದ್ದು, ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇದೆ. ಸರ್ಕಾರ ಕೊಡುತ್ತಿರುವ ಕುಚ್ಚಿಗೆ ಅಕ್ಕಿ ತಿನ್ನಲು ಯೋಗ್ಯವಾಗಿಲ್ಲ. ಮೂರು ತಿಂಗಳಿಗೊಮ್ಮೆ ಬೆಳ್ತಿಗೆ ಅಕ್ಕಿ ಕೊಡಿ, ಇಲ್ಲವಾದರೆ, ಕರಾವಳಿಯಲ್ಲಿ ಸಿಗುವ ಗುಣಮಟ್ಟದ ಕೆಂಪು ಕುಚ್ಚಿಗೆ ಅಕ್ಕಿ ಕೊಡಿ ಎಂದು ಸುನಿತಾ ಶೆಟ್ಟಿ, ನಳಿನಿ ಒತ್ತಾಯಿಸಿದರು. ಈ ಬಗ್ಗೆ ಪರಿಶೀಲಿಸುವುದಾಗಿ ಅಧಿಕಾರಿ ಭರವಸೆ ನೀಡಿದರು.

ಬ್ರಹ್ಮಾವರ ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಉದಯ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ವಸಂತಿ ಪೂಜಾರಿ, ಬ್ರಹ್ಮಾವರ ಇಒ ಎಚ್‌.ವಿ.ಇಬ್ರಾಹಿಂಪುರ ವೇದಿಕೆಯಲ್ಲಿದ್ದರು. ಕಾಡೂರು ಪಿಡಿಒ ಮಹೇಶ್‌ ಸಭೆಯ ನಡಾವಳಿ ಮಂಡಿಸಿದರು.

‘ಮಹಿಳಾ ಕಾಯಕೋತ್ಸವಕ್ಕೆ ಬೇಡಿಕೆ’

ಉದ್ಯೋಗ ಖಾತ್ರಿಯ ಮೂಲಕ ಮಹಿಳಾ ಸಬಳೀಕರಣಕ್ಕೆ ಮುಂದಾಗಿರುವ ಸರ್ಕಾರ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ‘ಮಹಿಳಾ ಕಾಯಕೋತ್ಸವ’ ಕಾರ್ಯಕ್ರಮ ಅನುಷ್ಠಾನಗೊಳಿಸಿದೆ. ಜಿಲ್ಲೆಯ 7 ತಾಲ್ಲೂಕುಗಳ 28 ಗ್ರಾಮ ಪಂಚಾಯಿತಿಗಳಲ್ಲಿ ಮೊದಲ ಹಂತದಲ್ಲಿ ಯೋಜನೆ ಅನುಷ್ಠಾನಗೊಂಡಿದ್ದು, ಬ್ರಹ್ಮಾವರ ತಾಲ್ಲೂಕಿನ ಕರ್ಜೆ, ಯಡ್ತಾಡಿ, ಆರೂರು, ಚೆರ್ಕಾಡಿ ಪಂಚಾಯಿತಿಗಳಲ್ಲಿ ಜಾರಿಯಾಗಿದೆ. ಇದುವರೆಗೂ 4,867 ಕುಟುಂಬಗಳ ಸಮೀಕ್ಷೆ ನಡೆದಿದ್ದು, 458 ಕುಟುಂಬಗಳು ಜಾಬ್‌ ಕಾರ್ಡ್‌ಗೆ ಬೇಡಿಕೆ ಸಲ್ಲಿಸಿವೆ. ನರೇಗಾ ಅಡಿ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಮಹಿಳೆಯರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕು ಎಂಬುದು ಈ ಯೋಜನೆಯ ಉದ್ದೇಶಗಳಲ್ಲಿ ಒಂದು. ಬೇಡಿಕೆ ಸಲ್ಲಿಸಿರುವ ಎಲ್ಲರಿಗೂ ಜಾಬ್‌ಕಾರ್ಡ್ ಸಿಗಲಿದೆ. ತಾಲ್ಲೂಕಿನಲ್ಲಿ ಯೋಜನೆ ಉತ್ತಮ ಪ್ರಗತಿ ಕಂಡಿದೆ ಎಂದು ಕಾಡೂರು ಗ್ರಾಮಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಹೇಶ್ ಸಭೆಯಲ್ಲಿ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು