ಸೋಮವಾರ, ನವೆಂಬರ್ 18, 2019
29 °C
ಲಕ್ಷಾಂತರ ಕೃಷಿಕರ ಗಮನ ಸೆಳೆಯುತ್ತಿರುವ ಬ್ರಹ್ಮಾವರ ಕೃಷಿ ಹಬ್ಬ

ಬ್ರಹ್ಮಾವರ: ಹೊಸ ಬೀಜ ತಳಿ–ಸಂವಾದ, ಮಂಥನ

Published:
Updated:

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲ್ಲೂಕಿನ ವಲಯ ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದಲ್ಲಿ ಶನಿವಾರ ಆರಂಭವಾದ ಕೃಷಿ ಮೇಳಕ್ಕೆ ಕೃಷಿಕರು, ಮಹಿಳೆಯರು ಸಾಕಷ್ಟು ಉತ್ಸಾಹ ತೋರಿ ಯಂತ್ರೋಕರಣಗಳು ಮತ್ತು ನರ್ಸರಿ ಗಿಡಗಳ ಬಗ್ಗೆ ಮಾಹಿತಿ ಪಡೆಯುವುದರ ಜತೆಗೆ ಖರೀದಿ ಮಾಡಿದರು.

ಮೂರ‍್ನಾಲ್ಕು ದಿನಗಳಿಂದ ಸುರಿಯುತ್ತಿದ್ದ ಮಳೆ ಶನಿವಾರ ಸ್ವಲ್ಪ ವಿರಾಮ ನೀಡಿದ್ದರಿಂದ ಕೃಷಿ ಹಬ್ಬಕ್ಕೆ ತಂಡೋಪತಂಡವಾಗಿ ಬರುವ ದೃಶ್ಯ ಕಂಡು ಬಂತ್ತು. ಇನ್ನೊಂದೆಡೆ ಈ ಬಾರಿ ಬರಗಾಲದ ಕಾರಣ ಶಿವಮೊಗ್ಗ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕೃಷಿಮೇಳ ಇಲ್ಲದೇ ಇರುವ ಕಾರಣ ಶಿವಮೊಗ್ಗ, ತೀರ್ಥಹಳ್ಳಿ, ಸಾಗರ ಉತ್ತರ ಕನ್ನಡ ಜಿಲ್ಲೆಗಳಿಂದಲೂ ರೈತರು ಈ ಬಾರಿ ಕೃಷಿ ಮೇಳಕ್ಕೆ ಬಂದಿದ್ದು ವಿಶೇಷ.

ತೋಟಗಾರಿಕಾ, ಮೀನು, ಕೃಷಿ, ಹೈನುಗಾರಿಕೆಯ ಹಾಗೂ ವಿವಿಧ ಇಲಾಖೆಗಳ ಮಳಿಗೆಗಳಲ್ಲದೇ, ನರ್ಸರಿ ಮತ್ತು ಇನ್ನಿತರ ಗೃಹೋಪಯೋಗಿ ವಸ್ತುಗಳಿಗೆ ಸಂಬಂಧಿಸಿದಂತೆ ಇನ್ನೂ ರಕ್ಕೂ ಹೆಚ್ಚು ಮಳಿಗೆಗಳು ರೈತರು ಮತ್ತು ಸಾರ್ವಜನಿಕರನ್ನು ಆಕರ್ಷಿಸುತ್ತಿದೆ.

ವಿವಿಧ ತಳಿಯ ಬಾತು ಕೋಳಿಗಳು, ಉಪ್ಪಿನ ಕೋಟೆ ಮನಾಮ ಫಾರ್ಮ್ ಹೌಸ್‌ನ ಶೈವಾಲ್ ತಳಿ (ಎತ್ತು)ಬುಲ್‌ಗಳು, ಕೃಷಿ ಯಂತ್ರೋಪಕರಣಗಳ ಪ್ರಾತ್ಯಕ್ಷಿಕೆ ಎಲ್ಲರ ಗಮನವನ್ನು ಸೆಳೆಯಿತು.

ಹೈಡ್ರೋಫೋನಿಕ್ಸ್ ವಿಧಾನದಲ್ಲಿ ಮೇವಿನ ಬೆಳೆ ಉತ್ಪಾದನೆ, ವಿವಿಧ ಭತ್ತದ ತಳಿ ಮತ್ತು ಬೀಜೋತ್ಪಾದನೆ, ತೆಂಗಿನಲ್ಲಿ ಬಹು ಬೆಳೆ ಯೋಜನೆ ಮತ್ತು ಪೋಷಕಾಂಶಗಳ ನಿರ್ವಹಣೆ, ಗೇರು ಕಸಿ ಕಟ್ಟುವಿಕೆ ಮತ್ತು ತೋಟದಲ್ಲಿ ನೀರು ಹಾಗೂ ಮಣ್ಣು ಸಂರಕ್ಷಣೆ, ಸಾವಯವ ಗೊಬ್ಬರ, ಕಾಂಪೋಸ್ಟ್, ಎರೆಗೊಬ್ಬರ ಮತ್ತು ಅಜೋಲ್ಲಾ ಗೊಬ್ಬರ ತಯಾರಿಕೆಯ ಪ್ರಾತ್ಯಕ್ಷ್ಷಿಕೆ, ಹೈನುಗಾರಿಕೆ, ಮೀನುಗಾರಿಕೆ, ಆಡು, ಮೊಲ, ಕೋಳಿ, ಹಂದಿ ಮತ್ತು ಬಾತುಕೋಳಿ ಸಾಕಾಣಿಕೆ ಪ್ರಾತ್ಯಕ್ಷಿಕೆ, ಕೃಷಿ ಯಂತ್ರೋಪಕರಣಗಳ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ, ಮೌಲ್ಯಾಧಾರಿತ ಆಹಾರ ಉತ್ಪನ್ನಗಳು ಮತ್ತು ಪ್ರಾತ್ಯಕ್ಷಿಕೆ, ಜೈವಿಕ ಅನಿಲ ಉತ್ಪಾದನಾ ಘಟಕಗಳು, ಅಲಂಕಾರಿಕ ಗಿಡಗಳ ಪ್ರದರ್ಶನ ಮತ್ತು ಮಾರಾಟ, ಸಿರಿ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ, ಫೈಬರ್ ಹೂವಿನ ಕುಂಡಗಳ ಪ್ರದರ್ಶನ ಮಾರಾಟ, ವಿವಿಧ ತಳಿಯ ಹಲಸಿನ ಗಿಡಗಳು, ದನದ ಹಾಲು ಕರೆಯಲು ಬಳಸುವ ಯಂತ್ರಗಳ ಪ್ರಾತ್ಯಕ್ಷಿಕೆ, ಮಂಗಗಳನ್ನು ಓಡಿಸಲು ಬಳಸುವ ಗನ್, ಅಡಿಕೆ ಸುಲಿಯುವ ಯಂತ್ರ, ತೆಂಗಿನ ಮರ ಬುಡ ಮಾಡುವ ಯಂತ್ರ ಹೀಗೆ ಅನೇಕ ಕೃಷಿ ಯಂತ್ರೋಪಕರಣಗಳ ಮಳೆಗೆಗಳು ಮತ್ತು ಇತರೆ ಮಳಿಗೆಗಳು ಕೃಷಿಕರನ್ನು ಆಕರ್ಷಿಸಿದೆ.

ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಚೈತನ್ಯ ಅವರ ಮಾರ್ಗದರ್ಶನದಲ್ಲಿ ತಾರಸಿಯಲ್ಲಿ ಬೆಂಡೆ, ಹೀರೆ, ಮೆಣಸು, ಹೂವು ಕೋಸು, ಸಾಂಬ್ರಾಣಿ, ನವಿಲು ಕೋಸು ಹೀಗೆ ಹತ್ತುಹಲವು ತರಕಾರಿಗಳನ್ನು ಕಡಿಮೆ ಖರ್ಚಿನಲ್ಲಿ ಬೆಳೆಸುವ ವಿಧಾನದ ಪ್ರಾತ್ಯಕ್ಷಿಕೆ ಎಲ್ಲರ ಗಮನ ಸೆಳೆಯುತ್ತಿದೆ.

ಕೃಷಿಯೇತರ ಉತ್ಪನ್ನಗಳ ಭರ್ಜರಿ ಮಾರಾಟ: ಕೃಷಿ ಮೇಳದಲ್ಲಿ ಕೃಷಿಗೆ ಸಂಬಂಧಪಟ್ಟ ಮಳಿಗೆಗಳಲ್ಲದೇ ಗೃಹೋಪಯೋಗಿ ವಸ್ತುಗಳ ಮಾರಾಟ ಮಳಿಗೆಯೂ ಇದ್ದುದರಿಂದ ಮಹಿಳೆಯರು, ಮಕ್ಕಳು ತಮ್ಮ ವ್ಯಾಪಾರದಲ್ಲಿ ತೊಡಗಿಸಿಕೊಂಡ ದೃಶ್ಯ ಕಂಡು ಬಂತು.

ಸತತ ಮಳೆ ಸುಳಿಯುತ್ತಿರು ವುದರಿಂದ ಈ ಬಾರಿ ಕಟಾವು ಕಾರ್ಯ ಇನ್ನೂ ಆರಂಭವಾಗದೇ ಇರುವ ಕಾರಣ ರೈತರೂ ಸಹ ಈ ಬಾರಿಯ ಕೃಷಿಮೇಳಕ್ಕೆ ಹೆಚ್ಚಿನ ಆಸಕ್ತಿ ತೋರಿಸಿದ್ದು ಕಂಡು ಬಂತು.

ಉಚಿತ ವಾಹನ ವ್ಯವಸ್ಥೆ
ಕೃಷಿ ವಿಜ್ಞಾನ ಕೇಂದ್ರವಲ್ಲದೇ ಬ್ರಹ್ಮಾವರ ನಗರದ ಮಧ್ಯಭಾಗದಲ್ಲಿರುವ ಬೀಜೋತ್ಪಾದನೆ ಕೇಂದ್ರವೂ ರೈತರನ್ನು ಹೆಚ್ಚು ಆಕರ್ಷಿಸುತ್ತಿದೆ. ವಿವಿಧ ಭತ್ತದ ತಳಿಗಳು, ಭತ್ತದ ಬೀಜೋತ್ಪಾದನೆ ಪ್ರಾತ್ಯಕ್ಷಿಕೆ, ಈಚೆಗೆ ಬಿಡುಗಡೆಗೊಂಡ ಕರಾವಳಿಗೆ ಸೂಕ್ತ ಸಹ್ಯಾದ್ರಿ ಪಂಚಮುಖಿ ತಳಿಯ ಭತ್ತ. ವಿವಿಧ ತಳಿಯ ಗೇರು, ತೆಂಗು, ಅಂತರ ಬೆಳೆಯಾಗಿ ಬೆಳಯುವ ರಾಂಬೂಟಾನ್ ಹೀಗೆ ಅನೇಕ ಕೃಷಿಗೆ ಸಂಬಂಧಪಟ್ಟ ಪ್ರಾತ್ಯಕ್ಷಿಕೆಗಳು ರೈತರ ಗಮನ ಸೆಳೆಯುತ್ತಿದೆ. ಶೂನ್ಯ ಬಂಡವಾಳ ನೈಸರ್ಗಿಕ ಕೃಷಿಯ ಪ್ರಾತ್ಯಕ್ಷಿಕೆ, ವೈಜ್ಞಾನಿಕ ಕೃಷಿ ಮತ್ತು ಸಾಂಪ್ರದಾಯಿಕ ಕೃಷಿಯ ಅಂತರವನ್ನು ಇಲ್ಲಿ ವೀಕ್ಷಿಸಿ ಮಾಹಿತಿ ಪಡದುಕೊಳ್ಳಬಹುದು. ಕೃಷಿ ಮೇಳಕ್ಕೆ ಬರುವ ರೈತರಿಗೆ ಈ ಬೀಜೋತ್ಪಾದನೆ ಕೇಂದ್ರಕ್ಕೆ ಕರೆದುಕೊಂಡು ಹೋಗಲು ಕೃಷಿ ಮೇಳದ ಸ್ಥಳದಿಂದ ಉಚಿತ ವಾಹನ ವ್ಯವಸ್ಥೆ ಮಾಡಲಾಗಿದೆ.

ಪ್ರತಿಕ್ರಿಯಿಸಿ (+)