ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಂಚಾಯಿತಿ ಚುನಾವಣೆ: ಕಮಲ ಅರಳಿಸಿ

ನೂತನ ಜಿಲ್ಲಾಧ್ಯಕ್ಷರಿಗೆ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಲಹೆ
Last Updated 25 ಫೆಬ್ರುವರಿ 2020, 8:57 IST
ಅಕ್ಷರ ಗಾತ್ರ

ಉಡುಪಿ: ಪೇಜ್‌ ಪ್ರಮುಖರನ್ನು ಮುಂದಿಟ್ಟುಕೊಂಡು ಮನೆಮನೆಯಲ್ಲಿ ಕಮಲ ಅರಳಿಸುವ ಕೆಲಸವನ್ನು ಪಕ್ಷದ ಮುಖಂಡರು ಮಾಡಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್‌ ಸೂಚನೆ ನೀಡಿದರು.

ಸೋಮವಾರ ಕಿದಿಯೂರು ಹೋಟೆಲ್‌ನ ಶೇಷಶಯನ ಸಭಾಂಗಣದಲ್ಲಿ ನಡೆದ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರ ಪದಗ್ರಹಣ, ಸಂಕಲ್ಪ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಗ್ರಾಮ ಪಂಚಾಯಿತಿ ಚುನಾವಣೆಗಳು ಹತ್ತಿರವಾಗುತ್ತಿದ್ದು, ಪಕ್ಷವನ್ನು ತಳಮಟ್ಟದಿಂದ ಬಲಪಡಿಸಬೇಕು. ನೂತನ ಅಧ್ಯಕ್ಷರು ಅಧಿಕಾರವನ್ನು ತಲೆಯಲ್ಲಿಟ್ಟುಕೊಳ್ಳದೆ ಹೆಗಲ ಮೇಲಿಟ್ಟುಕೊಂಡು ಪಕ್ಷವನ್ನು ಮುನ್ನಡೆಸಬೇಕು. ಎಲ್ಲರನ್ನೂ ಒಟ್ಟಾಗಿ ಕರೆದೊಯ್ಯಬೇಕು ಎಂದು ಕಟೀಲ್‌ ಸಲಹೆ ನೀಡಿದರು.

ಬಿಜೆಪಿ ಹಣ ನೋಡಿ ಅಧಿಕಾರ ನೀಡುವುದಿಲ್ಲ. ಪಕ್ಷಕ್ಕೆ ದುಡಿದವರಿಗೆ ಹಾಗೂ ಪಕ್ಷ ಕಟ್ಟಲು ಸಾಮರ್ಥ್ಯ ಇದ್ದವರಿಗೆ ಅಧಿಕಾರ ಕೊಡುತ್ತದೆ. ಈಗ ಬಿಜೆಪಿಯದ್ದು ಸುವರ್ಣ ಯುಗ. ಈ ಸಂದರ್ಭ ಬಳಸಿಕೊಂಡು ಜಿಲ್ಲೆಯನ್ನು ಕಾಂಗ್ರೆಸ್‌ ಮುಕ್ತಗೊಳಿಸಿ ಎಂದು ಕಿವಿಮಾತು ಹೇಳಿದರು.

ಸಂಸದೆ ಶೋಭಾ ಕರಂದ್ಲಾಜೆ ಮಾತನಾಡಿ, ಪಕ್ಷ ಸಂಘಟನೆ ಹಾಗೂ ತತ್ವ ಸಿದ್ಧಾಂತಗಳಿಗೆ ಬದ್ಧರಾಗಿ ಕೆಲಸ ಮಾಡುವ ಕಾರ್ಯಕರ್ತರಿಗೆ ಜವಾಬ್ದಾರಿ ಸಿಗುತ್ತದೆ. ಪಕ್ಷದಲ್ಲಿ ಹೊಸ ನಾಯಕತ್ವವನ್ನು ಬೆಳೆಸಲು ವಯಸ್ಸಿನ ಆಧಾರದಲ್ಲಿ ಜವಾಬ್ದಾರಿ ನೀಡಲಾಗುತ್ತಿದೆ. ಇದರಿಂದ ಯುವ ನಾಯಕತ್ವ ಹೆಚ್ಚಾಗಿ ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಮತ್ತಷ್ಟು ಸದೃಢವಾಗಲಿದೆ ಎಂದು ಶೋಭಾ ಹೇಳಿದರು.

ಮೇನಲ್ಲಿ ಗ್ರಾಮ ಪಂಚಾಯಿತಿ ಚುನಾವಣೆ ಬರಲಿದ್ದು, ಈ ಬಾರಿ 155 ಪಂಚಾಯಿತಿಗಳ ಪೈಕಿ 140ರಲ್ಲಿ ಬಿಜೆಪಿ ಬೆಂಬಲಿತರು ಗೆಲ್ಲಬೇಕು. ಬೂತ್ ಮಟ್ಟದಲ್ಲಿ ಸಮಿತಿ ರಚಿಸಿ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಿ ಎಂದು ಸಲಹೆ ನೀಡಿದರು.

ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬೂತ್ ಮಟ್ಟದಲ್ಲಿ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು. ಸ್ಥಾನೀಯ ಸಮಿತಿಯ ಅಧ್ಯಕ್ಷನ ಕೈಗೆ ಅಧಿಕಾರ ನೀಡಬೇಕು. ಬಿಜೆಪಿ ಕಾರ್ಯಕರ್ತರ ಆಧಾರಿತ ಪಕ್ಷವಾಗಬೇಕು ಎಂದರು.

ಶಾಸಕ ರಘುಪತಿ ಭಟ್ ಮಾತನಾಡಿ, ‘ಬಿಜೆಪಿಗೆ ಗೆಲ್ಲಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿಯಲ್ಲಿಯೂ ಕಾರ್ಯಕರ್ತರು ಪಕ್ಷ ಕಟ್ಟಿದ್ದಾರೆ. ನಿಕಟಪೂರ್ವ ಅಧ್ಯಕ್ಷ ಮಟ್ಟಾರು ಅಧಿಕಾರ ವಹಿಸಿಕೊಂಡಾಗ ಜಿಲ್ಲೆಯಲ್ಲಿ ಬಿಜೆಪಿಯ ಒಬ್ಬರು ಶಾಸಕರು ಮಾತ್ರ ಇದ್ದರು. ಈಗ ಜಿಲ್ಲೆ ಬಿಜೆಪಿ ಭದ್ರಕೋಟೆಯಾಗಿದೆ. ಇದಕ್ಕೆಲ್ಲ ನಾಯಕರ ಹಾಗೂ ಕಾರ್ಯಕರ್ತರ ಶ್ರಮ ಕಾರಣ ಎಂದರು.

ಕರಾವಳಿ ಪ್ರಾಧಿಕಾರದ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗಡೆ ಅವರನ್ನು ಸನ್ಮಾನಿಸಲಾಯಿತು. ಕಾಪು ಶಾಸಕ ಲಾಲಾಜಿ ಮೆಂಡನ್‌, ಬೈಂದೂರು ಶಾಸಕ ಸುಕುಮಾರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ದಿನಕರ ಬಾಬು, ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಮಂಗಳೂರು ಪ್ರಭಾರಿ ಉದಯ್‌ಕುಮಾರ್ ಶೆಟ್ಟಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

‘ಕಾಂಗ್ರೆಸ್ ಮುಳುಗುತ್ತಿರುವ ಹಡಗು’

ಪಕ್ಷಕ್ಕೆ ರಾಜ್ಯಾಧ್ಯಕ್ಷರನ್ನು ಆಯ್ಕೆಮಾಡಲು ಸಾಧ್ಯವಾಗದ ಕಾಂಗ್ರೆಸ್‌ ಮುಳುಗುವ ಹಡಗಿನಂತೆ. ಗ್ರಾಮ ಪಂಚಾಯಿತಿ ಚುನಾವಣೆಯನ್ನೂ ಕಾಂಗ್ರೆಸ್‌ ಗೆಲ್ಲಲು ಸಾಧ್ಯವಿಲ್ಲ. ಅಧಿಕಾರಕ್ಕಾಗಿ ಡಿಕೆಶಿ, ಸಿದ್ದರಾಮಯ್ಯ ಕಿತ್ತಾಡುತ್ತಿದ್ದಾರೆ. ರಾಷ್ಟ್ರಮಟ್ಟದಲ್ಲೂ ಪಕ್ಷಕ್ಕೆ ನಾಯಕತ್ವ ಇಲ್ಲ. ಅಧಿಕಾರ ದಾಹ, ಭ್ರಷ್ಟಾಚಾರ, ಕುಟುಂಬ ರಾಜಕಾರಣ, ಸಂಘಟನೆಯ ಬಗ್ಗೆ ಅಸಡ್ಡೆ ತೋರಿದ್ದಕ್ಕೆ ಕಾಂಗ್ರೆಸ್‌ ನೆಲಕಚ್ಚಿದೆ ಎಂದು ನಳಿನ್ ಕುಮಾರ್ ಕಟೀಲ್‌ ಟೀಕಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT