ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಆರ್‌ಎಸ್‌ ಆಸ್ಪತ್ರೆ ಸರ್ಕಾರದ ವಶಕ್ಕೆ: ರಘುಪತಿ ಭಟ್‌

Last Updated 30 ಮಾರ್ಚ್ 2022, 15:51 IST
ಅಕ್ಷರ ಗಾತ್ರ

ಉಡುಪಿ: ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯನ್ನು ಸರ್ಕಾರದ ವಶಕ್ಕೆ ಪಡೆಯಲು ಸಚಿವ ಸಂಪುಟ ಸಭೆಯಲ್ಲಿ ಐತಿಹಾಸಿಕ ನಿರ್ಣಯ ತೆಗೆದುಕೊಳ್ಳಲಾಗಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ಖಾಸಗಿಯವರ ನಿರ್ವಹಣೆಯಿಂದ ದುಸ್ಥಿತಿಗೆ ಒಳಗಾಗಿದ್ದ ಪಿಪಿಪಿ ಮಾದರಿಯ ಆಸ್ಪತ್ರೆಯನ್ನು ವಶಕ್ಕೆ ತೆಗೆದುಕೊಳ್ಳಲು ಸಚಿವ ಸಂಪುಟ ಸಭೆ ನಿರ್ಧರಿಸಿದೆ. 200 ಬೆಡ್‌ಗಳ ಆಸ್ಪತ್ರೆಗೆ ಪ್ರಸ್ತುತ ಇರುವ ಎಲ್ಲ ಸಿಬ್ಬಂದಿ ಸಹಿತ 103 ಹೆಚ್ಚುವರಿ ಸಿಬ್ಬಂದಿ ನೇಮಕಕ್ಕೆ ಹಾಗೂ ₹ 9.83 ವಾರ್ಷಿಕ ಅನುದಾನ ನೀಡುವ ಪ್ರಸ್ತಾವಕ್ಕೆ ಅನುಮೋದನೆ ಸಿಕ್ಕಿದೆ ಎಂದು ಶಾಸಕರು ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಉಡುಪಿ ಜನರ ಪರವಾಗಿ ಅಭಿನಂದನೆ ಸಲ್ಲಿಸುತ್ತೇನೆ ಎಂದು ರಘುಪತಿ ಭಟ್ ತಿಳಿಸಿದ್ದಾರೆ.

ಕಾಂಗ್ರೆಸ್‌ ಅವಧಿಯಲ್ಲಿ ಒಪ್ಪಂದ:ಬಡ ಹೆಣ್ಣು ಮಕ್ಕಳಿಗೆ ಉಚಿತ ಹೆರಿಗೆ ಸೇವೆ ನೀಡುವಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಸಂದರ್ಭದಲ್ಲಿ ಖಾಸಗಿ ಸಂಸ್ಥೆಗೆ ನೀಡಲಾಗಿತ್ತು.

ಖಾಸಗಿ ಸಂಸ್ಥೆಯು ಸರಿಯಾಗಿ ಆಸ್ಪತ್ರೆಯನ್ನು ನಿರ್ವಹಣೆ ಮಾಡದ ಪರಿಣಾಮ ಸಿಬ್ಬಂದಿಗೆ ವೇತನ ಸಮಸ್ಯೆ ಉಂಟಾಗಿತ್ತು. ಬಡ ರೋಗಿಗಳಿಗೆ ಸಮರ್ಪಕ ಚಿಕಿತ್ಸೆಯೂ ದೊರೆಯುತ್ತಿರಲಿಲ್ಲ. ಈ ವಿಚಾರವನ್ನು ವಿಧಾನಸಭೆಯ ಅಧಿವೇಶನದಲ್ಲಿ ಪ್ರಸ್ತಾಪಿಸಿ, ಸಮಸ್ಯೆ ಪರಿಹರಿಸುವಂತೆ ಆರೋಗ್ಯ ಸಚಿವ ಸುಧಾರಕರ್ ಅವರಿಗೆ ಮನವಿ ಮಾಡಲಾಗಿತ್ತು.

ಈಚೆಗೆ ಜಿಲ್ಲಾ ಆಸ್ಪತ್ರೆಯ ಕಟ್ಟಡದ ಶಿಲಾನ್ಯಾಸಕ್ಕೆ ಬಂದಿದ್ದ ಮುಖ್ಯಮಂತ್ರಿ ಬೊಮ್ಮಾಯಿ ಅವರೂ ಆಸ್ಪತ್ರೆಯನ್ನು ಸರ್ಕಾರದ ವಶಕ್ಕೆ ಪಡೆಯುವ ಬಗ್ಗೆ ಭರವಸೆ ನೀಡಿದ್ದರು. ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿದೆ ಎಂದು ಶಾಸಕ ರಘುಪತಿ ಭಟ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT