ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣಿಕರಿಲ್ಲದೆ ಓಡಿಸಿದರೆ ನಷ್ಟ; ಓಡಿಸದಿದ್ದರೆ ಜನರಿಗೆ ಸಂಕಷ್ಟ

ಅಡಕತ್ತರಿಯಲ್ಲಿ ಸಿಲುಕಿದ ಸಾರಿಗೆ ವ್ಯವಸ್ಥೆ: ಬಸ್‌ಗಳಲ್ಲಿ ಓಡಾಡುವವರ ಸಂಖ್ಯೆ ಹೆಚ್ಚಾದರೆ ಸಮಸ್ಯೆ ಪರಿಹಾರ
Last Updated 21 ನವೆಂಬರ್ 2020, 15:36 IST
ಅಕ್ಷರ ಗಾತ್ರ

ಉಡುಪಿ: ಸಾರ್ವಜನಿಕ ಸಾರಿಗೆ (ಖಾಸಗಿ ಹಾಗೂ ಕೆಎಸ್‌ಆರ್‌ಟಿಸಿ ಬಸ್‌) ಬಳಸಲು ಪ್ರಯಾಣಿಕರು ಉತ್ಸಾಹ ತೋರದಿರುವಾಗ ಪೂರ್ಣ ಪ್ರಮಾಣದಲ್ಲಿ ಬಸ್‌ಗಳನ್ನು ರಸ್ತೆಗಿಳಿಸಿದರೆ ನಷ್ಟ ಎನ್ನುತ್ತಾರೆ ಜಿಲ್ಲೆಯ ಖಾಸಗಿ ಬಸ್‌ ಮಾಲೀಕರು ಹಾಗೂ ಸಾರಿಗೆ ಇಲಾಖೆ ಅಧಿಕಾರಿಗಳು. ಸಾರಿಗೆ ವ್ಯವಸ್ಥೆ ಹಿಂದಿನಂತೆ ಹಳಿಗೆ ಬಾರದಿದ್ದರೆ ಗ್ರಾಮೀಣ ಭಾಗದ ಪ್ರಯಾಣಿಕರಿಗೆ ಸಮಸ್ಯೆ ಎನ್ನುತ್ತಾರೆ ಸಾರ್ವಜನಿಕರು. ಜಿಲ್ಲೆಯಲ್ಲಿ ಇಂತಹದ್ದೊಂದು ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಗಿದೆ.

ಲಾಕ್‌ಡೌನ್ ಕಾರಣದಿಂದ ಹಲವು ತಿಂಗಳು ರಸ್ತೆಗಿಳಿಯದೆ ನಿಂತಿದ್ದ ಬಸ್‌ಗಳು ಈಗ ಸಂಚಾರ ಆರಂಭಿಸಿವೆ. ಆದರೆ, ಕೋವಿಡ್‌ ಪೂರ್ವದಲ್ಲಿ ಸಂಚರಿಸಿದಷ್ಟು ಮಾರ್ಗಗಳಲ್ಲಿ ಓಡಾಡುತ್ತಿಲ್ಲ. ಕಾರಣ ಪ್ರಯಾಣಿಕರು ಬಸ್‌ಗಳನ್ನು ಹತ್ತಲು ಮೊದಲಿನಂತೆ ಉತ್ಸಾಹ ತೋರುತ್ತಿಲ್ಲ ಎನ್ನುತ್ತಾರೆ ಅಧಿಕಾರಿಗಳು.

ಲಾಕ್‌ಡೌನ್‌ನಿಂದಾಗಿ ಸಾರಿಗೆ ಸಂಸ್ಥೆಗಳ ಆದಾಯ ಗಣನೀಯವಾಗಿ ಕುಸಿದಿದ್ದು ನಷ್ಟದ ಸುಳಿಯಲ್ಲಿ ಸಿಲುಕಿವೆ. ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸಿದರೆ ಮತ್ತಷ್ಟು ನಷ್ಟ ಅನುಭವಿಸಬೇಕಾಗುತ್ತದೆ. ಹಾಗಾಗಿ, ಬೇಡಿಕೆ ಇರುವ ಮಾರ್ಗಗಳಲ್ಲಿ ಮಾತ್ರ ಬಸ್‌ಗಳನ್ನು ಓಡಿಸಲಾಗುತ್ತಿದೆ ಎನ್ನುತ್ತಾರೆ ಕೆಎಸ್‌ಆರ್‌ಟಿಸಿ ಅಧಿಕಾರಿಗಳು.

ಬಸ್‌ಗಳ ಅಲಭ್ಯತೆಯಿಂದ ನಗರಗಳಲ್ಲಿ ವಾಸಮಾಡುವವರಿಗೆ ಹೆಚ್ಚು ಸಮಸ್ಯೆಯಾಗಿಲ್ಲ. ಹಳ್ಳಿಗಳಲ್ಲಿರುವವರಿಗೆ ಸಮಸ್ಯೆ ಹೆಚ್ಚಾಗಿದೆ. ನಿತ್ಯದ ಕೆಲಸಗಳಿಗೆ ಪೇಟೆಗೆ ಬರುತ್ತಿದ್ದವರಿಗೆ, ನಗರಗಳಲ್ಲಿ ಉದ್ಯೋಗ ಮಾಡುತ್ತಿದ್ದವರಿಗೆ ಸಮಯಕ್ಕೆ ಸರಿಯಾಗಿ ಬಸ್‌ಗಳು ಸಿಗುತ್ತಿಲ್ಲ. ಪರಿಣಾಮ ಬಹುತೇಕರು ದ್ವಿಚಕ್ರ ವಾಹನ ಹಾಗೂ ಗೂಡ್ಸ್‌ ಆಟೊಗಳ ಮೇಲೆ ಅವಲಂಬಿತರಾಗಬೇಕಾಗಿದೆ ಎನ್ನುತ್ತಾರೆ ನಾಗರಿಕರು.

ಜಿಲ್ಲೆಯಲ್ಲಿ 630 ಖಾಸಗಿ ಬಸ್‌ಗಳು (ಸ್ಟೇಜ್ ಕ್ಯಾರೇಜ್‌) ಪರ್ಮಿಟ್‌ ಪಡೆದಿವೆ. ಇವುಗಳ ಪೈಕಿ 450 ಬಸ್‌ಗಳು ಮಾತ್ರ ರಸ್ತೆಗಳಿದಿದ್ದು, ಉಳಿದ ಬಸ್‌ಗಳ ಮಾಲೀಕರು ನಷ್ಟ ಭರಿಸಲಾಗದೆ ಪರ್ಮಿಟ್‌ಗಳನ್ನು ಸಾರಿಗೆ ಇಲಾಖೆಗೆ ಒಪ್ಪಿಸಿದ್ದಾರೆ. ಡೀಸೆಲ್‌ ಬೆಲೆ ಏರಿಕೆ, ತೆರಿಗೆ ಹೊರೆ, ಪೂರ್ಣ ಪ್ರಮಾಣದಲ್ಲಿ ಭರ್ತಿಯಾಗದ ಆಸನಗಳ ಕಾರಣಕ್ಕೆ ಖಾಸಗಿ ಬಸ್‌ ಮಾಲೀಕರು ಬಸ್‌ಗಳನ್ನು ರಸ್ತೆಗಿಳಿಸಲು ಮನಸ್ಸು ಮಾಡುತ್ತಿಲ್ಲ ಎನ್ನುತ್ತಾರೆ ಆರ್‌ಟಿಒ ಅಧಿಕಾರಿಗಳು.

ಇನ್ನು ಜಿಲ್ಲೆಯಲ್ಲಿ 130 ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರಕ್ಕೆ ಪರವಾನಗಿ ನೀಡಲಾಗಿದೆ. ಇವುಗಳಲ್ಲಿ 100ಕ್ಕೂ ಹೆಚ್ಚು ಬಸ್‌ಗಳು ಜಿಲ್ಲಾ ವ್ಯಾಪ್ತಿಯಲ್ಲಿ ಸಂಚರಿಸಿದರೆ, ಶಿವಮೊಗ್ಗ ಜಿಲ್ಲೆಗೆ ಗರಿಷ್ಠ ನಿತ್ಯ 10 ಬಸ್‌ಗಳು ಓಡಾಡುತ್ತಿವೆ ಎನ್ನುತ್ತಾರೆ ಅಧಿಕಾರಿಗಳು.

ಬೇರೆ ಜಿಲ್ಲೆಗಳಿಂದ ಉಡುಪಿ ಮಾರ್ಗವಾಗಿ ಬಂದು ಹೋಗುವ ಬಸ್‌ಗಳ ಸಂಖ್ಯೆ ಹೆಚ್ಚಾಗಿದ್ದು, ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಉಡುಪಿಯಿಂದ ನಿತ್ಯ 80ಕ್ಕೂ ಹೆಚ್ಚು ಬಸ್‌ಗಳು ಸಂಚರಿಸುತ್ತವೆ. ಮೈಸೂರಿಗೆ 10, ಬೆಂಗಳೂರಿಗೆ 20, ಚಿಕ್ಕಮಗಳೂರಿಗೆ 3 ಬಸ್‌ಗಳಿವೆ ಎನ್ನುತ್ತಾರೆ ಉಡುಪಿ ಡಿಪೊ ಮ್ಯಾನೇಜರ್ ಉದಯ್‌ ಶೆಟ್ಟಿ.

ಪ್ರಯಾಣಿಕರ ಬೇಡಿಕೆ, ಖರ್ಚು ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ಬಸ್‌ಗಳನ್ನು ಓಡಿಸಲಾಗುತ್ತಿದೆ. ಇದರ ಜತೆಗೆ ನಷ್ಟವಾಗದಂತೆ ನೋಡಿಕೊಳ್ಳಬೇಕಾದ ಸವಾಲುಗಳೂ ಇವೆ. ಕೋವಿಡ್‌ ಬಳಿಕ ಬಸ್‌ಗಳಲ್ಲಿ ಸಂಚರಿಸುವವರ ಸಂಖ್ಯೆ ಶೇ 30ಕ್ಕೂ ಹೆಚ್ಚು ಕುಸಿತವಾಗಿದೆ. ಪ್ರತಿ ಬಸ್‌ನಲ್ಲಿ ಶೇ 60ರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿವೆ. ಪರಿಸ್ಥಿತಿ ಮೊದಲಿನಂತೆ ಬರುವವರೆಗೂ ಕೆಲವು ಮಾರ್ಗಗಳಿಗೆ ಬಸ್‌ಗಳನ್ನು ಓಡಿಸುವುದು ಕಷ್ಟ ಎನ್ನುತ್ತಾರೆ ಉದಯ್‌ ಶೆಟ್ಟಿ.

‘ಬೇಡಿಕೆ ಬಂದರೆ ಸಂಖ್ಯೆ ಹೆಚ್ಚಳ’

ನವೆಂಬರ್ 2ನೇ ವಾರದ ಬಳಿಕ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದೆ. ಬಹುಶಃ ಹಬ್ಬಗಳ ಕಾರಣಕ್ಕೆ ಇರಬಹುದು. ಉತ್ತರ ಕರ್ನಾಟಕದ ಭಾಗದ ವಲಸೆ ಕಾರ್ಮಿಕರು ಹೆಚ್ಚಾಗಿ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದೆ. ಪರಿಸ್ಥಿತಿ ಹಂತಹಂತವಾಗಿ ಸುಧಾರಿಸುವ ವಿಶ್ವಾಸವಿದೆ. ಪ್ರಯಾಣಿಕರಿಂದ ನಿರ್ದಿಷ್ಟ ಮಾರ್ಗಗಳಲ್ಲಿ ಬಸ್‌ಗಳನ್ನು ಓಡಿಸುವಂತೆ ಬೇಡಿಕೆ ಬಂದರೆ, ಮೇಲಧಿಕಾರಿಗಳಿಂದ ಒಪ್ಪಿಗೆ ಪಡೆದು ಕ್ರಮ ತೆಗೆದುಕೊಳ್ಳಲಾಗುವುದು.

-ಉದಯ್‌ ಶೆಟ್ಟಿ, ಉಡುಪಿ ಡಿಪೊ ವ್ಯವಸ್ಥಾಪಕ

***

‘150 ಬಸ್‌ಗಳು ನಿಂತಿವೆ’

‘ಲಾಕ್‌ಡೌನ್‌ಗೂ ಮುನ್ನ ಉಡುಪಿಯ ಸರ್ವಿಸ್‌ ಬಸ್ ನಿಲ್ದಾಣದಿಂದ 400ಕ್ಕೂ ಹೆಚ್ಚು ಬಸ್‌ಗಳು ಪ್ರತಿದಿನ ಸಂಚರಿಸುತ್ತಿದ್ದವು. ಪ್ರಯಾಣಿಕರ ಕೊರತೆಯಿಂದ ಈಗ 250 ಬಸ್‌ಗಳು ಮಾತ್ರ ಓಡಾಡುತ್ತಿವೆ. ಶೇ 60ರಷ್ಟು ಸೀಟುಗಳು ಮಾತ್ರ ಭರ್ತಿಯಾಗುತ್ತಿವೆ. ದೊಡ್ಡ ಬಸ್‌ಗಳ ಬದಲಾಗಿ ಮಿನಿ ಬಸ್‌ಗಳು ಹೆಚ್ಚು ಸಂಚರಿಸುತ್ತಿವೆ’ ಎನ್ನುತ್ತಾರೆ 27 ವರ್ಷಗಳಿಂದ ಸರ್ವಿಸ್‌ ಬಸ್ ನಿಲ್ದಾಣದಲ್ಲಿ ಏಜೆಂಟ್‌ ಆಗಿರುವ ಲಕ್ಷ್ಮೀಕಾಂತ್.

ಬಸ್‌ ಸಂಪರ್ಕವಿಲ್ಲದ ಜಿಲ್ಲೆಗಳು

ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ರಾಮನಗರ, ಬೀದರ್, ಯಾದಗಿರಿ ಜಿಲ್ಲೆಗಳಿಗೆ ಜಿಲ್ಲೆಯಿಂದ ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಪರ್ಕವಿಲ್ಲ. ಈ ಭಾಗದ ಪ್ರಯಾಣಿಕರು ಹತ್ತಿರದ ಜಿಲ್ಲೆಗಳಿಗೆ ತೆರಳಿ ಅಲ್ಲಿಂದ ಬೇರೆ ಬಸ್‌ ಹಿಡಿದು ಸ್ವಂತ ಊರು ಸೇರಬೇಕು. ಈ ಜಿಲ್ಲೆಗಳಿಗೆ ಬಸ್‌ಗಳನ್ನು ಓಡಿಸಬೇಕು ಎಂಬುದು ಪ್ರಯಾಣಿಕರ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT