ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾರಿಗೆ ಮುಷ್ಕರ ನೀರಸ; ತಟ್ಟದ ಬಿಸಿ

ಕೆಎಸ್‌ಆರ್‌ಟಿಸಿ ಸಂಚಾರ ಬಹುತೇಕ ಬಂದ್; ರಸ್ತೆಗಳಿದಿದ್ದ ಹೆಚ್ಚುವರಿ ಖಾಸಗಿ ಬಸ್‌ಗಳು
Last Updated 7 ಏಪ್ರಿಲ್ 2021, 16:05 IST
ಅಕ್ಷರ ಗಾತ್ರ

ಉಡುಪಿ: ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾರಿಗೆ ಸಂಸ್ಥೆ ನೌಕರರು ಬುಧವಾರದಿಂದ ರಾಜ್ಯದಾದ್ಯಂತ ಕರೆನೀಡಿದ್ದ ಮುಷ್ಕರಕ್ಕೆ ಜಿಲ್ಲೆಯಲ್ಲಿ ಖಾಸಗಿ ಬಸ್‌ಗಳ ಬೆಂಬಲ ಇರಲಿಲ್ಲ. ಪರಿಣಾಮ ಪ್ರಯಾಣಿಕರಿಗೆ ಮುಷ್ಕರದ ಬಿಸಿ ಹೆಚ್ಚು ತಟ್ಟಲಿಲ್ಲ. ಕೆಎಸ್‌ಆರ್‌ಟಿಸಿ ಬಸ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆಗಿಳಿಯದಿದ್ದರೂ, ಹೆಚ್ಚುವರಿ ಖಾಸಗಿ ಬಸ್‌ಗಳು ಸಂಚರಿಸಿದ ಕಾರಣ ಹೆಚ್ಚಿನ ಸಮಸ್ಯೆಯಾಗಲಿಲ್ಲ.

ಹೆಚ್ಚಿನ ಕೆಎಸ್‌ಆರ್‌ಟಿಸಿ ಬಸ್‌ಗಳು ಇಲ್ಲ:

ಕೆಎಸ್‌ಆರ್‌ಟಿಸಿ ಬಹುತೇಕ ಚಾಲಕರು ಹಾಗೂ ನಿರ್ವಾಹಕರು ಕರ್ತವ್ಯಕ್ಕೆ ಹಾಜರಾಗಿರಲಿಲ್ಲ. ಪರಿಣಾಮ ಬಹುತೇಕ ಬಸ್‌ಗಳು ಡಿಪೋದಲ್ಲಿ ನಿಂತಿದ್ದವು. ಮಂಗಳೂರಿನಿಂದ ಉಡುಪಿ ನಿಲ್ದಾಣಕ್ಕೆ ಬಂದಿದ್ದ ಮೂರು ಬಸ್‌ಗಳು ಕ್ರಮವಾಗಿ ಗುಳೇದಗುಡ್ಡ, ತಾಳಿಕೋಟೆ, ಸಿಂಧಗಿಗೆ ಹೊರಟವು. ರಾತ್ರಿ 8ಕ್ಕೆ ಮೈಸೂರಿಗೆ ಒಂದು, ಬೆಂಗಳೂರಿಗೆ 2 ಬಸ್‌ಗಳು ಹೊರಟವು ಎಂದು ಅಧಿಕಾರಿಗಳು ಮಾಹಿತಿ ನೀಡಿದರು.

ಹೊರ ಜಿಲ್ಲೆಯ ಪ್ರಯಾಣಿಕರಿಗೆ ಸಮಸ್ಯೆ

ಮುಷ್ಕರದ ಬಗ್ಗೆ ಮಾಹಿತಿ ಇಲ್ಲದ ಹೊರ ಜಿಲ್ಲೆಗಳಿಗೆ ತೆರಳಲು ಬಂದಿದ್ದ ಪ್ರಯಾಣಿಕರಿಗೆ ಸಮಸ್ಯೆಯಾಯಿತು. ಬಸ್‌ಗಳನ್ನು ಬಿಡಬಹುದು ಎಂದು ಹಲವರು ನಿಲ್ದಾಣದಲ್ಲಿಯೇ ಕಾದು ಕುಳಿತಿದ್ದ ದೃಶ್ಯ ಕಂಡುಬಂತು. ಬಳಿಕ ಅನಿವಾರ್ಯವಾಗಿ ಖಾಸಗಿ ಬಸ್‌ಗಳಲ್ಲಿ ಹೊರಟರು.

ಮುಂಗಡ ಟಿಕೆಟ್ ಕಾಯ್ದಿರಿಸಿದವರು ನಿಲ್ದಾಣಕ್ಕೆ ಕರೆ ಮಾಡಿ ಬಸ್‌ಗಳು ಹೊರಡುತ್ತವೆಯೇ ಎಂದು ವಿಚಾರಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಮುಂಗಡ ಕಾಯ್ದಿರಿಸಿದವರ ಮೊಬೈಲ್‌ಗೆ ಟಿಕೆಟ್ ರದ್ದಾದ ಮಾಹಿತಿ ಕಳುಹಿಸಲಾಗಿದೆ ಎಂದು ನಿಲ್ದಾಣದ ಸಿಬ್ಬಂದಿ ಮಾಹಿತಿ ನೀಡಿದರು.

ಕೆಎಸ್‌ಆರ್‌ಟಿಸಿ ನಿಲ್ದಾಣಕ್ಕೆ ಪ್ರತಿದಿನ 320 ಬಸ್‌ಗಳು ಜಿಲ್ಲೆ, ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬಂದು ಹೋಗುತ್ತವೆ. 40 ಬಸ್‌ಗಳು ಉಡುಪಿಯಲ್ಲಿಯೇ ನಿಲುಗಡೆಯಾಗುತ್ತವೆ. ಬೆಳಿಗ್ಗೆ 10ಗಂಟೆಯವರೆಗೆ ಶಿವಮೊಗ್ಗ, ಹುಬ್ಬಳ್ಳಿ, ಮೈಸೂರಿಂದ ತಲಾ 4, ಬೆಂಗಳೂರಿನಿಂದ 8, ಕುಮಟಾದಿಂದ ಒಂದು ಬಸ್ಸು ನಿಲ್ದಾಣಕ್ಕೆ ಬಂದು ಉಡುಪಿ ಘಟಕದಲ್ಲಿ ನಿಲುಗಡೆಯಾಗಿವೆ ಎಂದು ತಿಳಿಸಿದರು.

ರಸ್ತೆಗಿಳಿದ ಹೆಚ್ಚುವರಿ ಖಾಸಗಿ ಬಸ್‌

ಖಾಸಗಿ ಬಸ್‌ಗಳು ಹೆಚ್ಚುವರಿಯಾಗಿ ರಸ್ತೆಗಿಳಿದ ಪರಿಣಾಮ ಸಾರ್ವಜನಿಕರಿಗೆ ಮುಷ್ಕರದ ಬಿಸಿ ಹೆಚ್ಚು ತಟ್ಟಲಿಲ್ಲ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2000 ಖಾಸಗಿ ಬಸ್ಸುಗಳಿದ್ದು, ಹೆಚ್ಚಿನ ಬಸ್‌ಗಳು ರಸ್ತೆಗಿಳಿದಿದ್ದವು. ಜತೆಗೆ ತೆರಿಗೆ ಕಟ್ಟಲಾಗದೆ ಕೋವಿಡ್‌ ಸಂದರ್ಭ ಸರೆಂಡರ್ ಮಾಡಿದ್ದ ಬಸ್‌ಗಳಿಗೆ ಸಾರಿಗೆ ಇಲಾಖೆ ತೆರಿಗೆ ವಿನಾಯಿತಿ ನೀಡಿರುವುದರಿಂದ ಪ್ರಯಾಣಿಕರ ಸೇವೆಗೆ ಲಭ್ಯವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT