ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಡುಪಿ: ಉದ್ಯಮಿ ಕಿಶನ್ ಹೆಗ್ಡೆ ಕೊಲೆ ಪ್ರಕರಣ, ಐವರ ಬಂಧನ

ಹಿರಿಯಡ್ಕ ಪೇಟೆಯಲ್ಲಿ ಹಾಡಹಗಲೇ ನಡೆದಿದ್ದ ಕೊಲೆ; ಎಸ್‌ಕೆ ಬಾರ್ಡರ್‌ನಲ್ಲಿ ಆರೋಪಿಗಳ ಬಂಧನ
Last Updated 26 ಸೆಪ್ಟೆಂಬರ್ 2020, 15:30 IST
ಅಕ್ಷರ ಗಾತ್ರ

ಉಡುಪಿ: ಸೆ.24ರಂದು ಹಿರಿಯಡ್ಕ ಪೇಟೆಯಲ್ಲಿ ಹಾಡಹಗಲೇ ನಡೆದಿದ್ದ ರಿಯಲ್ ಎಸ್ಟೇಟ್‌ ಉದ್ಯಮಿ ಕಿಶನ್‌ ಹೆಗ್ಡೆ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಶನಿವಾರ ಬೆಳಗಿನ ಜಾವ ಎಸ್‌ಕೆ ಬಾರ್ಡರ್‌ನಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ಶನಿವಾರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಎಸ್‌ಪಿ ವಿಷ್ಣುವರ್ಧನ್‌ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಿ, ‘ಎಲ್ಲ ಆರೋಪಿಗಳು ದಕ್ಷಿಣ ಕನ್ನಡ ಜಿಲ್ಲೆಯವರು. ಮಂಗಳೂರಿನ ಶೇಡಿಗುರಿ ತೋಕೂರು ನಿವಾಸಿ ಮನೋಜ್ ಕುಲಾಲ್‌ (37), ಕಾಟಿಪಳ್ಳ ಕೃಷ್ಣಾಪುರದ ಚಿತ್ತರಂಜನ್ ಪೂಜಾರಿ (27), ಬಂಟ್ವಾಳ ತಾಲ್ಲೂಕಿನ ಚೇತನ್‌ (32), ಸಂಗಬೆಟ್ಟುವಿನ ರಮೇಶ್‌ ಪೂಜಾರಿ (38), ಸುರತ್ಕಲ್‌ನ ದೀಕ್ಷಿತ್ ಶೆಟ್ಟಿ (29) ಬಂಧಿತರು’ ಎಂದು ವಿವರ ನೀಡಿದರು.

ಆರೋಪಿಗಳ ಮೇಲೆ ಹಲವು ಪ್ರಕರಣ:ಮನೋಜ್‌ ಕುಲಾಲ್‌ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಈತನ ವಿರುದ್ಧ ಮಂಗಳೂರು, ಸುರತ್ಕಲ್‌, ಪಣಂಬೂರು, ಕಾವೂರು, ಬರ್ಕೆ, ಬಜ್ಪೆ ಠಾಣೆಗಳಲ್ಲಿ ಕೊಲೆ, ಹಲ್ಲೆ, ಜೀವ ಬೆದರಿಕೆ, ಸಹಿತ 17 ಪ್ರಕರಣಗಳು ದಾಖಲಾಗಿವೆ. ಮತ್ತೊಬ್ಬ ಆರೋಪಿ ಚಿತ್ತರಂಜನ್‌ ಪೂಜಾರಿ ವಿರುದ್ಧ ಸುರತ್ಕಲ್‌, ಮುಲ್ಕಿ, ಕಾರ್ಕಗಳ ನಗರ ಠಾಣೆಗಳಲ್ಲಿ ಹಲ್ಲೆ, ಜೀವ ಬೆದರಿಕೆ, ಶಸ್ತ್ರಾಸ್ತ್ರ ಕಾಯ್ದೆಯಡಿ 5 ಪ್ರಕರಣಗಳು ಇವೆ.

ಚೇತನ್‌ ಅಲಿಯಾಸ್‌ ಚೇತು ಪಡೀಲ್ ವಿರುದ್ಧ ಕದ್ರಿ, ಬಜ್ಪೆ, ಕಾವೂರು ಠಾಣೆಗಳಲ್ಲಿ ಹಲ್ಲೆ, ಜೀವ ಬೆದರಿಕೆ, ಶಸ್ತ್ರಾಸ್ತ್ರ ಕಾಯ್ದೆ ಸೇರಿ 5 ಪ್ರಕರಣ, ರಮೇಶ್ ಪೂಜಾರಿ ವಿರುದ್ಧ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ 1 ಹಲ್ಲೆ ಪ್ರಕರಣ, ದೀಕ್ಷಿತ್ ಶೆಟ್ಟಿ ವಿರುದ್ಧ ಸುರತ್ಕಲ್ ಠಾಣೆಯಲ್ಲಿ 1 ಹಲ್ಲೆ ಪ್ರಕರಣ ದಾಖಲಾಗಿವೆ ಎಂದು ಎಸ್‌ಪಿ ತಿಳಿಸಿದರು.

ಕೊಲೆಗೆ ಕಾರಣ:ಪ್ರಾಥಮಿಕ ತನಿಖೆಯಲ್ಲಿ ಹಣದ ವ್ಯವಹಾರ ಹಾಗೂ ವೈಷಮ್ಯ ಕೊಲೆಗೆ ಕಾರಣ ಎಂದು ತಿಳಿದುಬಂದಿದೆ. ಆರೋಪಿಗಳನ್ನು ತನಿಖೆಗೆ 15 ದಿನ ವಶಕ್ಕೆ ಕೋರಿ ನ್ಯಾಯಾಯಲಕ್ಕೆ ಮನವಿ ಮಾಡಲಾಗುವುದು. ವಿಚಾರಣೆ ವೇಳೆ ಕೊಲೆಗೆ ನಿಖರ ಕಾರಣ ತಿಳಿದುಬರಲಿದೆ ಎಂದರು.

4 ವಿಶೇಷ ತಂಡ ರಚನೆ:ಆರೋಪಿಗಳ ಪತ್ತೆಗೆ ಮಣಿಪಾಲ, ಕಾಪು, ಬ್ರಹ್ಮಾವರ ಹಾಗೂ ಡಿಸಿಯಬಿ ಇನ್‌ಸ್ಪೆಕ್ಟರ್‌ಗಳ ನೇತೃತ್ವದಲ್ಲಿ 4 ವಿಶೇಷ ತಂಡ ರಚಿಸಲಾಗಿತ್ತು. ಕೊಲೆ ನಂತರ ಹಾಸನ, ಚಿಕ್ಕಮಗಳೂರಿಗೆ ಹೋಗಿದ್ದ ಆರೋಪಿಗಳು ಶನಿವಾರ ಬೆಳಗಿನ ಜಾವ ಎಸ್‌ಕೆ ಬಾರ್ಡರ್‌ಗೆ ಬರುವ ಮಾಹಿತಿ ಮೇರೆಗೆ ದಾಳಿ ನಡೆಸಿ ಬಂಧಿಸಲಾಯಿತು ಎಂದು ವಿವರ ನೀಡಿದರು.

ಕಾರ್ಯಾಚರಣೆಯಲ್ಲಿ ಬ್ರಹ್ಮಾವರ ಸಿಪಿಐ ಅನಂತ ಪದ್ಮನಾಭ ಸಿಬ್ಬಂದಿ ಕೃಷ್ಣಪ್ಪ, ವಾಸು ಪೂಜಾರಿ, ಗಣೇಶ್, ಪ್ರದೀಪ್‌, ರವಿ, ಚಾಲಕ ಶೇಖರ್, ಉಡುಪಿ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಮಣಿಪಾಲ ಇನ್‌ಸ್ಪೆಕ್ಟರ್‌ ಮಂಜುನಾಥ್‌, ಡಿಸಿಐಬಿ ಇನ್‌ಸ್ಪೆಕ್ಟರ್‌ ಮಂಜಪ್ಪ, ಕಾಪು ಇನ್‌ಸ್ಪೆಕ್ಟರ್‌ ಮಹೇಶ್ ಪ್ರಸಾದ್, ಬ್ರಹ್ಮಾವರ ಠಾಣೆ ಪಿಎಸ್‌ಐ ರಾಘವೇಂದ್ರ, ಸಿಬ್ಬಂದಿ ದಿಲೀಪ್‌, ಸತೀಶ್‌, ಅಣ್ಣಪ್ಪ, ಕೋಟ ಪಿಎಸ್‌ಐ ಸಂತೋಚ್‌, ಚಾಲಕ ಮಂಜು, ಹಿರಿಯಡ್ಕ ಪಿಎಸ್‌ಐ ಸುಧಾಕರ ತೋನ್ಸೆ, ಎಎಸ್‌ಐ ಗಂಗಪ್ಪ, ಜಯಂತ್, ಪರಮೇಶ್ವರಪ್ಪ,ಸಿಬ್ಬಂದಿ ದಿನೇಶ್‌, ರಘು, ಸಂತೋಷ್, ಉದಯ ಕಾಮತ್, ಶಶಿಕುಮಾರ್, ನಿತಿನ್‌, ಹರೀಶ್, ಇಂದ್ರೇಶ್‌, ಭೀಮಪ್ಪ ಹಡಪದ, ಚಾಲಕ ಆನಂದ್ ಭಾಗವಹಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿ ಕುಮಾರ ಚಂದ್ರ, ಡಿವೈಎಸ್‌ಪಿ ಜೈಶಂಕರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT