ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ಲಾಸ್ಟಿಕ್ ಜೋಪಡಿ’ಮುಕ್ತಿಗೆ ಬೇಕು ದಾನಿಗಳ ನೆರವು

ಬೇಲಿಕೇರಿ ಕೃಷ್ಣ ಖಾರ್ವಿಗೆ ’ಸೇವಾ ಸಂಕಲ್ಪ’ದಿಂದ ಬೆಳಕಿನ ಕಿರಣ
Last Updated 12 ಜೂನ್ 2020, 12:10 IST
ಅಕ್ಷರ ಗಾತ್ರ

ಬೈಂದೂರು: ಗಂಗೊಳ್ಳಿ ಬಂದರು ಪ್ರದೇಶದ ಬೇಲಿಕೇರಿಯಲ್ಲಿ ಕಡುಬಡತನ ಮತ್ತು ಅಸಹಾಯಕತೆಯ ರೂಪಕದಂತಿರುವ ಪ್ಲಾಸ್ಟಿಕ್‌ ಶೀಟ್‌ನ ಜೋಪಡಿಯಲ್ಲಿ 4 ಜನರ ಕುಟುಂಬ 14 ವರ್ಷಗಳಿಂದ ಬದುಕು ಸವೆಸುತ್ತಿದೆ.

ತಳಪಾಯ ಇಲ್ಲದ, ಪ್ಲಾಸ್ಟಿಕ್ ಹಾಳೆಯೇ ಗೋಡೆ, ಮಾಡು, ಬಾಗಿಲು ಎಲ್ಲವೂ ಆಗಿರುವ ಈ ‘ಪ್ಲಾಸ್ಟಿಕ್ ಜೋಪಡಿ’ ಕೃಷ್ಣ ಖಾರ್ವಿ ಅವರ ವಸತಿ. ಪತ್ನಿ, ಇಬ್ಬರು ಮಕ್ಕಳ ಜತೆ ಮಳೆ, ಗಾಳಿ, ಬಿಸಿಲು, ಚಳಿಯೊಂದಿಗೆ ಹೋರಾಡಿ ಬದುಕಿದ್ದಾರೆ. ಗುಡಿಸಲು ರಹಿತ ರಾಜ್ಯ ನಿರ್ಮಾಣಕ್ಕೆ ಪಣತೊಟ್ಟಿರುವ ಸರ್ಕಾರಗಳು ಇದನ್ನು ಗುಡಿಸಲು ಎಂದು ಗುರುತಿಸಿಲ್ಲ. ಆದರೆ, ಕೃಷ್ಣ ಖಾರ್ವಿ ಕುಟುಂಬದ ಕತ್ತಲ ಬದುಕಿಗೆ ಅಲ್ಲಿನ ’ಸೇವಾ ಸಂಕಲ್ಪ’ ತಂಡ ಮನೆನಿರ್ಮಿಸಲು ಸಂಕಲ್ಪ ಮಾಡಿದೆ.

ಖಾರ್ವಿ ಅವರಈ ‘ಪ್ಲಾಸ್ಟಿಕ್ ಜೋಪಡಿ’ ಇರುವುದು ಸರ್ಕಾರಿ ಜಮೀನಿನಲ್ಲಿ. ಅದರ ಮೇಲೆ ಅವರಿಗೆ ಹಕ್ಕು ದಕ್ಕಿಲ್ಲ. ಹಾಗಾಗಿ ಶಾಶ್ವತ ಮನೆ ನಿರ್ಮಿಸುವಂತಿಲ್ಲ. ಹೀಗಾಗಿ ಸರ್ಕಾರಿ ಯೋಜನೆಗಳ ಸೌಲಭ್ಯಗಳೂ ಇವರಿಗೆ ಲಭಿಸದು. ನೆಲೆ, ಸೂರು ಇಲ್ಲದ ಬದುಕಿನಿಂದ ಮುಕ್ತಿ ಪಡೆಯಲು ಅವರು ನಡೆಸಿದ ಎಲ್ಲ ಪ್ರಯತ್ನಗಳಿಗೂ ತಾಂತ್ರಿಕ ಕಾರಣಗಳು ಅಡ್ಡಿಯಾಗಿವೆ. ಪರ್ಯಾಯ ವ್ಯವಸ್ಥೆಯೂ ಅವರ ಕೈಹಿಡಿಯದಿರುವುದನ್ನು ನೋಡಿದರೆ ಅವರ ಈ ಹರಕಲು-ಮುರುಕುಲು ಗುಡಿಸಲು ಹೊಣೆಗಾರರ ಹೃದಯ ಹಿಂಡಿಲ್ಲ. ಈ ಕುಟುಂಬಕ್ಕೆ ಮೀನುಗಾರಿಕೆಯಿಂದ ಬರುವ ಆದಾಯವೇ ಜೀವನಾಧಾರ. ಅಷ್ಟರಲ್ಲೇ ಎಲ್ಲ ವೆಚ್ಚಗಳನ್ನು ನಿಭಾಯಿಸಬೇಕು. ಹೀಗಾಗಿ ಸುಸಜ್ಜಿತ ಮನೆ ನಿರ್ಮಿಸಿಕೊಳ್ಳುವುದು ದೂರದ ಮಾತು.

ಬೆಳಕಿನ ಕಿರಣ: ಕೃಷ್ಣ ಖಾರ್ವಿ ಕುಟುಂಬದ ದುರ್ಭರ ಸ್ಥಿತಿ ಕಂಡು ಮರುಕ ತಾಳಿರುವ ಸಚಿನ್ ಖಾರ್ವಿ ನೇತೃತ್ವದ ತಂಡ ಇದೀಗ ಅವರಿಗೆ ಸುಮಾರು ₹3 ಲಕ್ಷ ವೆಚ್ಚದಲ್ಲಿ 300 ಚದರ ಅಡಿ ವಿಸ್ತೀರ್ಣದ ಪುಟ್ಟ ಮನೆ ನಿರ್ಮಿಸಿಕೊಡಲು ಟೊಂಕಕಟ್ಟಿದೆ. ‘ದಾನಿಗಳ ನೆರವು ಯಾಚಿಸಿದೆ. ದಾನಿಗಳು, ಸಂಘಸಂಸ್ಥೆಗಳು 1 ಚದರ ಅಡಿಗೆ ₹1 ಸಾವಿರದಂತೆ ಮನೆಯ ಭಾಗವನ್ನು ಪ್ರಾಯೋಜಿಸಬಹುದು; ಅಗತ್ಯ ಇರುವ ಸಾಮಗ್ರಿಗಳನ್ನೂ ದಾನ ರೂಪದಲ್ಲಿ ನೀಡಬಹುದು’ ಎಂದು ವಿನಂತಿ ಮಾಡಿಕೊಂಡಿದೆ.

ದಾನಿಗಳು ಸಚಿನ್ ಖಾರ್ವಿ ಹೆಸರಿನಲ್ಲಿರುವ ಕೆನರಾ ಬ್ಯಾಂಕ್ ಗಂಗೊಳ್ಳಿ ಶಾಖೆಯ 0604108019266 ಉಳಿತಾಯ ಖಾತೆಗೆ (ಐಎಫ್‌ಎಸ್‌ಸಿ ಕೋಡ್ : ಸಿಎನ್‌ಆರ್‌ಬಿ 0000604)ದೇಣಿಗೆಯನ್ನು ಜಮೆ ಮಾಡಬಹುದು. ಹೆಚ್ಚಿನ ಮಾಹಿತಿಗಾಗಿ ರಾಮಪ್ಪ ಖಾರ್ವಿ (9242389567), ಬಿ.ಗಣೇಶ ಶೆಣೈ (9008979520) ಅಥವಾ ಯಶವಂತ ಖಾರ್ವಿ (9902526061) ಅವರನ್ನು ಸಂಪರ್ಕಿಸಬಹುದು ಎಂದು ತಂಡ ಪ್ರಕಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT