ಬೈಂದೂರು: ಬಿಜೂರು ಗ್ರಾಮದಲ್ಲಿ ಶಾಸಕ ಗುರುರಾಜ್ ಗಂಟಿಹೊಳೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆಣ್ಣಮ್ಮ, ಉಪಾಧ್ಯಕ್ಷ ರಂಜಿತ್ ಪೂಜಾರಿ, ಗ್ರಾಮ ಪಂಚಾಯಿತಿ ಸದಸ್ಯರ ಉಪಸ್ಥಿತಿಯಲ್ಲಿ ಗ್ರಾಮ ಸಂವಾದ ಕಾರ್ಯಕ್ರಮ ನಡೆಯಿತು.
ಬಿಜೂರಿನಲ್ಲಿಗ್ರಾಮ ಸಂವಾದ ನಡೆಸಿದ ಶಾಸಕ ಗುರುರಾಜ್ಗಂಟಿಹೊಳೆ ಅವರಿಗೆ ತಮ್ಮ ಸ್ವಕ್ಷೇತ್ರದ ಮತದಾರರು ಸಮಸ್ಯೆಗಳ ಮಹಾಪೂರವನ್ನೇ ಕಣ್ಮುಂದೆ ವಿವರಿಸಿದರು. ಜೆಜೆಎಂ ಪೈಪ್‌ಲೈನ್ ಅವ್ಯವಸ್ಥೆ, ಶಾಲಾ ಮಕ್ಕಳಿಗೆ ಕಾಲುಸಂಕಗಳು, ತೆರೆದ ಅಪಾಯಕಾರಿ ಚರಂಡಿ, ದಾರಿದೀಪದ ಸಮಸ್ಯೆ, ಗ್ರಾಮಕರಣಿಕರ ಅಲಭ್ಯತೆ ಹೀಗೆ ಹಲವು ಸಮಸ್ಯೆಗಳನ್ನು ಬಿಚ್ಚಿಟ್ಟರು.
ಬಿಜೂರಿನಲ್ಲಿ ಜೆಜೆಎಂ ಪೈಪ್‌ಲೈನ್ ಕಾಮಗಾರಿ ಪೂರ್ಣವಾಗಿಲ್ಲ. ಶಾಲಿಮಕ್ಕಿ ಪ್ರದೇಶದಲ್ಲಿ ನಿರ್ಮಿಸಲಾದ ಚರಂಡಿಗೆ ಮುಚ್ಚಳ ಅಳವಡಿಸಿಲ್ಲದ ಕಾರಣ ಶಾಲಾ ಮಕ್ಕಳಿಗೆ, ರಾತ್ರಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಗ್ರಾಮಸ್ಥರು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು, ಮುಖ್ಯ ಎಂಜಿನಿಯರ್ ರಾಜ್‌ಕುಮಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ ಶೀಘ್ರದಲ್ಲಿ ಕಾಮಗಾರಿ ಆರಂಭಿಸುವಂತೆ ಸೂಚಿಸಿದರು. ಕೋಟ್ಯಾಡಿಯಿಂದ ಶಾಲೆಮಕ್ಕಿಗೆ ಹೋಗುವ ದಾರಿಯಲ್ಲಿ ಕಾಲುಸಂಕದ ಅಗತ್ಯವಿದ್ದು, ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಆರಂಭಿಸುವಂತೆ ಸಮಸ್ಯೆ ತೋಡಿಕೊಂಡಾಗ ಶಾಸಕರು, ಬೆಂಗಳೂರಿನ ಅರುಣಾಚಲಂ ಟ್ರಸ್ಟ್ ಮೂಲಕ ಮುಂದಿನ ಮಳೆಗಾಲದ ಒಳಗಾಗಿ ಕಾಲುಸಂಕ ನಿರ್ಮಿಸುವ ಭರವಸೆ ನೀಡಿದರು.
ಶಾಲೆಮಕ್ಕಿ ಹೊಳೆತೋಟ ರಸ್ತೆಗೆ ₹10 ಲಕ್ಷ ಮಂಜೂರಾಗಿದ್ದರೂ ಕಾಮಗಾರಿ ಆರಂಭವಾಗಿಲ್ಲ. ಇನ್ನಾದರೂ ಕಾಮಗಾರಿ ಆರಂಭಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಆದೇಶಿಸುವಂತೆ ಗ್ರಾಮಸ್ಥರು ಮನವಿ ಮಾಡಿದರು. ಇದಕ್ಕೆ ಉತ್ತರಿಸಿದ ಶಾಸಕರು, ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು.
ಬಿಜೂರುಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗ ಗ್ರಾಮ ಅಭಿವೃದ್ಧಿ ಅಧಿಕಾರಿ (ವಿ.ಎ) ಲಭ್ಯವಿಲ್ಲದ ಕಾರಣ ವಾರದಲ್ಲಿ ಕನಿಷ್ಠ ಎರಡು ದಿನಗಳಾದರೂ ಗ್ರಾಮಕರಣಿಕರ ಕಚೇರಿಯಲ್ಲಿ ಲಭ್ಯವಾಗುವಂತೆ ಬೇಡಿಕೆ ಇಟ್ಟರು. ಈ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ಸಮಸ್ಯೆ ಪರಿಹರಿಸುವಂತೆ ಸೂಚಿಸಿದರು.
ಇದೇ ಸಂದರ್ಭ ಗ್ರಾಮದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.