ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿ ವಿಜಿಲ್: ಉಡುಪಿ ರಾಜ್ಯಕ್ಕೆ ಪ್ರಥಮ

ಚುನಾವಣೆಯ ಯಶಸ್ಸಿಗೆ ಶ್ರಮಿಸಿದ ಎಲ್ಲರಿಗೂ ಡಿಸಿ ಧನ್ಯವಾದ ಸಮರ್ಪಣೆ
Last Updated 25 ಮೇ 2019, 14:15 IST
ಅಕ್ಷರ ಗಾತ್ರ

ಉಡುಪಿ: ಲೋಕಸಭಾ ಚುನಾವಣೆಯ ಮತ ಎಣಿಕೆ ಶಾಂತಿಯುತವಾಗಿ ಮುಕ್ತಾಯವಾಗಿದ್ದು, 27ರಂದು ನೀತಿ ಸಂಹಿತೆ ಕೊನೆಗೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ ತಿಳಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮತ ಎಣಿಕೆ ಮುಗಿದ ನಂತರದ ದಿನ ಉಡುಪಿ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಇವಿಎಂ, ವಿವಿ ಪ್ಯಾಟ್‌ ಹಾಗೂ ಇತರ ಪರಿಕರಗಳನ್ನು ಜಿಲ್ಲಾಧಿಕಾರಿ ಕಚೇರಿಗೆ ತರಲಾಗಿದೆ.45 ದಿನ ಬಿಗಿ ಭದ್ರತೆಯಲ್ಲಿ ಇಡಲಾಗುವುದು. ನಂತರ ಚುನಾವಣಾ ಆಯೋಗದ ಸೂಚನೆಯಂತೆ ಮುಂದಿನ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿಳಿಸಿದರು.

ಮಾರ್ಚ್‌ 10ರಿಂದ ಮೇ 23ರವರೆಗೂ ನೀತಿ ಸಂಹಿತೆ ಜಾರಿಯಲ್ಲಿತ್ತು. ಜಿಲ್ಲೆಯಲ್ಲಿ 2 ಹಂತದ ಮತದಾನ ನಡೆದು, 23ರಂದು ಮತ ಎಣಿಕೆಯೂ ಮುಗಿದಿದೆ. ಚುನಾವಣೆಯ ಯಶಸ್ಸಿಗೆ ಶ್ರಮಿಸಿದ ಸಿಬ್ಬಂದಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಮತ ಎಣಿಕೆಯ ದಿನ ಆಯೋಗದ ಸೂಚನೆಯಂತೆ ಬೆಳಿಗ್ಗೆ 7.30ಕ್ಕೆ ಸ್ಟ್ರಾಂಗ್ ರೂಂಗಳನ್ನು ತೆರೆಯಲಾಯಿತು. 8ಕ್ಕೆ ಅಂಚೆಮತಗಳ ಎಣಿಕೆ, ಬಳಿಕ ಇವಿಎಂಗಳ ಮತ ಎಣಿಕೆ ನಡೆಯಿತು. ಮೊದಲ ಎರಡು ಸುತ್ತು ನಿಧಾನಗತಿಯಲ್ಲಿ ಸಾಗಿ ಉಳಿಕೆ ಸುತ್ತುಗಳು ವೇಗವಾಗಿ ಮುಕ್ತಾಯಗೊಂಡವು. ಯಾವುದೇ ತಾಂತ್ರಿಕ ಸಮಸ್ಯೆಗಳು ಎದುರಾಗಲಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.

21 ಸುತ್ತುಗಳಲ್ಲಿ ಎಣಿಕೆ ನಡೆದು ಸಂಜೆ 6.30ಕ್ಕೆ ಎಣಿಕೆ ಪ್ರಕ್ರಿಯೆ ಮುಕ್ತಾಯವಾಗಿ 7ಕ್ಕೆ ವಿಜೇತರ ಹೆಸರನ್ನು ಘೋಷಿಸಿ, ಅಂದೇ ಗೆದ್ದವರಿಗೆ ಚುನಾವಣಾ ದೃಢಪತ್ರ ವಿತರಿಸಲಾಯಿತು. ವಿಧಾನಸಭಾ ಕ್ಷೇತ್ರದಲ್ಲಿ ತಲಾ 5 ಮತಗಟ್ಟೆಯಂತೆ 80 ಮತಗಟ್ಟೆಯ ವಿವಿ ಪ್ಯಾಟ್‌ ಸ್ಲಿಪ್‌ ಹಾಗೂ ಚಿಕ್ಕಮಗಳೂರಿನ ಒಂದು ಮತಗಟ್ಟೆಯ ವಿವಿ ಪ್ಯಾಟ್‌ ಸ್ಲಿಪ್‌ಗಳನ್ನು ಎಣಿಕೆ ಮಾಡಲಾಯಿತು. ಎಣಿಕೆಯ ವರದಿಗಳನ್ನು ಆಯೋಗಕ್ಕೆ ಕಳುಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಮತದಾರರು ಮತದಾನದಿಂದ ವಂಚಿತರಾಗಬಾರದು ಎಂದು ಜಿಲ್ಲೆಯಾದ್ಯಂತ ಮಿಂಚಿನ ನೋಂದಣಿ ಮಾಡಿಕೊಳ್ಳಲಾಗಿತ್ತು. ಮನೆಮನೆಗೆ ತೆರಳಿ ಫೋಟೊ ವೋಟರ್ ಸ್ಲಿಪ್‌ ನೀಡಲಾಗಿತ್ತು. ಜತೆಗೆ, ಸ್ವೀಪ್ ಸಮಿತಿ ಜಿಲ್ಲೆಯಾದ್ಯಂತ ಚುನಾವಣಾ ಪ್ರಚಾರ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದರು.

ಪರಿಸರ ಸ್ನೇಹಿ ಚುನಾವಣೆ:

ಪರಿಸರ ಸ್ನೇಹಿ ಚುನಾವಣೆ ನಡೆಸಬೇಕು ಎಂಬ ಉದ್ದೇಶದಿಂದ ಜಿಲ್ಲಾಡಳಿತ ರಾಜಕೀಯ ಪಕ್ಷಗಳಿಗೆ ಕೆಲವು ಸಲಹೆಗಳನ್ನು ನೀಡಿತ್ತು. ಅದರಂತೆ ರಾಜಕೀಯ ಪಕ್ಷಗಳು ನಡೆದುಕೊಂಡಿದ್ದು, ಶ್ಲಾಘನೀಯ ಎಂದರು.

ಈ ಸಂದರ್ಭ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್‌, ಹೆಚ್ಚುವರಿ ಜಿಲ್ಲಾಧಿಕಾರಿ ವಿದ್ಯಾಕುಮಾರಿ, ಕೃಷಿ ಇಲಾಖೆ ಅಧಿಕಾರಿ ಕೆಂಪೇಗೌಡ ಅವರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT