ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ಶಾಲೆಗಳ ಉಳಿವಿಗಾಗಿಕಾರ್ಕಳದಿಂದ ಅಭಿಯಾನ

ರಾಜ್ಯ ವ್ಯಾಪ್ತಿ ಹೋರಾಟ: ಪೂಜಾ ರಮೇಶ್‌
Last Updated 21 ಸೆಪ್ಟೆಂಬರ್ 2022, 6:16 IST
ಅಕ್ಷರ ಗಾತ್ರ

ಹೆಬ್ರಿ: ‘ರಾಜ್ಯದಲ್ಲಿ ಮುಚ್ಚಿರುವ ಕನ್ನಡ ಶಾಲೆಗಳನ್ನು ಮರು ಆರಂಭಿಸುವಂತೆ ಒತ್ತಾಯಿಸಿ ಕನ್ನಡ ರಾಜ್ಯೋತ್ಸವದಂದು ಕಾರ್ಕಳದಿಂದ ಅಭಿಯಾನ ಆರಂಭಿಸಲಾಗುವುದು’ ಎಂದು ಚಿತ್ರನಟಿ, ವಸಂತ ಲಕ್ಷ್ಮಿ ಫೌಂಡೇಷನ್ ಅಧ್ಯಕ್ಷೆ ಪೂಜಾ ರಮೇಶ್‌ ತಿಳಿಸಿದ್ದಾರೆ.

‘ವಿದ್ಯಾರ್ಥಿಗಳಿದ್ದರೆ ಶಿಕ್ಷಕರಿಲ್ಲ. ಶಿಕ್ಷಕರಿದ್ದರೆ ವಿದ್ಯಾರ್ಥಿಗಳಿಲ್ಲ. ಇಬ್ಬರೂ ಇರುವ ಶಾಲೆಗಳಲ್ಲಿ ಕೊಠಡಿಗಳಿಲ್ಲ. ಇಂಥ ದುಃಸ್ಥಿತಿ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿದೆ. ಯಾವ ಸರ್ಕಾರವೂ ಈ ಬಗ್ಗೆ ಗಂಭೀರವಾದ ಚಿಂತನೆ ಮಾಡುತ್ತಿಲ್ಲ. ಇಂಥ ಶಾಲೆಗಳಲ್ಲಿ ಓದುವವರೆಲ್ಲ ಬಡ, ಮಧ್ಯಮ, ಅಲೆಮಾರಿ ಮತ್ತು ಕೂಲಿಕಾರ್ಮಿಕರ ಮಕ್ಕಳು. ಹೀಗಾಗಿ, ಸರ್ಕಾರಿ ಶಾಲೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ’ ಎಂದು ಪತ್ರಿಕಾ ಹೇಳಿಕೆಯಲ್ಲಿ ದೂರಿದ್ದಾರೆ.

‘ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವರು ಪ್ರತಿನಿಧಿಸುವ ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದಿಂದಲೇ ಕನ್ನಡ ಶಾಲೆಗಳ ಉಳಿವಿಗಾಗಿ ಅಭಿಯಾನ ಆರಂಭಿಸುತ್ತಿದ್ದೇನೆ. ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಶಾಲೆಗಳು ಮುಚ್ಚಿ ಹೋಗಿವೆ. ಅಭಿಯಾನ ಅಲ್ಲಿಂದಲೇ ಆರಂಭಿಸಿ ರಾಜ್ಯದಾದ್ಯಂತ ಹಮ್ಮಿಕೊಳ್ಳಲಾಗುವುದು. ನಾನು ಅಪ್ಪಟ ಕನ್ನಡತಿ ಆಗಿರುವುದರಿಂದ ಕನ್ನಡ ಶಾಲೆಗಳ ಬಗ್ಗೆ ನನಗೆ ಬಹಳ ಗೌರವವಿದೆ’ ಎಂದು ಹೇಳಿದ್ದಾರೆ.

‘ಕನ್ನಡ ಶಾಲೆಗಳ ಉಳಿವಿಗಾಗಿ ಮುಖ್ಯಮಂತ್ರಿ ಮತ್ತು ಶಿಕ್ಷಣ ಸಚಿವರಿಗೆ ಮನವಿ ಪತ್ರವನ್ನು ವಸಂತ ಲಕ್ಷ್ಮಿ ಫೌಂಡೇಷನ್ ವತಿಯಿಂದ ನೀಡಲಾಗುವುದು. ಕರ್ನಾಟಕದ ಗಡಿ ಜಿಲ್ಲೆಗಳಲ್ಲಿ ಇರುವ ಸಾಕಷ್ಟು ಹಳ್ಳಿಗಳಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಿ ಹೋಗಿವೆ. ಅವುಗಳನ್ನು ಆರಂಭಿಸಲೇಬೇಕೆನ್ನುವುದು ನನ್ನ ಒಂದು ಒತ್ತಾಯವಾಗಿದೆ. ಕನ್ನಡ ರಾಜ್ಯೋತ್ಸವ ಆಚರಣೆ ಮಾಡಿ ಕನ್ನಡದ ಬಗ್ಗೆ ನಾವು ಮಾತನಾಡುತ್ತೇವೆ. ಆದರೆ, ಕನ್ನಡ ಶಾಲೆಗಳ ಬಗ್ಗೆ ಗಂಭೀರವಾದ ಚಿಂತನೆ ಮಾಡುತ್ತಿಲ್ಲ’ ಎಂದು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT