ಭಾನುವಾರ, ಅಕ್ಟೋಬರ್ 20, 2019
21 °C
ಸಚಿವ ಕೋಟ ಶ್ರೀನಿವಾಸ ಪೂಜಾರಿ

‘ನೆರೆ ನಷ್ಟ ವರದಿ ತಿರಸ್ಕರಿಸಿಲ್ಲ; ಹೆಚ್ಚುವರಿ ಮಾಹಿತಿ ಕೇಳಿದೆ’

Published:
Updated:
Prajavani

ಉಡುಪಿ: ರಾಜ್ಯ ಸರ್ಕಾರ ಸಲ್ಲಿಸಿದ್ದ ನೆರ ನಷ್ಟದ ವರದಿಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿಲ್ಲ. ಹೆಚ್ಚುವರಿ ಮಾಹಿತಿ ಕೇಳಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಅಗತ್ಯ ಮಾಹಿತಿ ಕೇಳಿದೆ ಎಂದರೆ ಹಣ ಕೊಡಲು ನಿರ್ಧಾರ ಮಾಡಿದೆ ಎಂದರ್ಥ ಎಂದು ಕೋಟ ಸಮಜಾಯಿಷಿ ನೀಡಿದರು.

ರಾಜ್ಯದಲ್ಲಿ ನೆರೆಯಿಂದ ಅಪಾರ ಪ್ರಮಾಣದ ಮನೆಗಳಿಗೆ ಹಾನಿಯಾಗಿದೆ. ಭಾಗಶಃ ಹಾನಿಗೊಳಗಾದ ಮನೆಗಳಲ್ಲಿ ವಾಸ ಮಾಡಲು ಸಾಧ್ಯವಿಲ್ಲದತಂಹ ಪರಿಸ್ಥಿತಿ ಇದೆ. ಹಾಗಾಗಿ, ನಷ್ಟದ ನಿಖರ ಅಂಕಿ ಅಂಶಗಳ ಮಾಹಿತಿಯನ್ನು ಕೇಂದ್ರ ಕೇಳಿರಬಹುದು. ಮೂರ್ನಾಲ್ಕು ದಿನಗಳಲ್ಲಿ ಗರಿಷ್ಠ ಮೊತ್ತದ ಪರಿಹಾರ ಬಿಡುಗಡೆಯಾಗುವ ವಿಶ್ವಾಸವಿದೆ ಎಂದರು.

ದೊಡ್ಡ ದುರಂತಗಳು ನಡೆದಾಗ ಪರಿಹಾರ ಕಾರ್ಯಕ್ಕೆ ಹೆಚ್ಚು ಹಣ ಬೇಕಾಗುತ್ತದೆ. ಇದರರ್ಥ ಹಣಕಾಸಿನ ಕೊರತೆ ಇದೆ ಎಂದಲ್ಲ. ರಾಜ್ಯದ ಖಜಾನೆಯಲ್ಲಿ ಹಣ ಇದೆ ಎಂದು ಸಚಿವರು ಹೇಳಿದರು.

ವಿರೋಧ ಪಕ್ಷದಲ್ಲಿರುವುದರಿಂದ ಸಿದ್ದರಾಮಯ್ಯ ಸರ್ಕಾರವನ್ನು ಟೀಕಿಸುತ್ತಾರೆ. ಅವರ ಅಭಿಪ್ರಾಯಗಳನ್ನು ಗೌರವಿಸುತ್ತೇವೆ. ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ಪೈಪೋಟಿ ನಡೆಯುತ್ತಿದ್ದು, ಅವರ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿಕೊಳ್ಳಲಿ ಎಂದು ಕೋಟ ವ್ಯಂಗ್ಯವಾಡಿದರು.

ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರ ಟೀಕೆ ಕುರಿತು ಪ್ರತಿಕ್ರಿಯಿಸಿ, ಎಚ್ಚರಿಕೆ ನೀಡಲು ನಮ್ಮವರೇ ನಮ್ಮನ್ನು ಗದರುತ್ತಾರೆ. ಸೂಲಿಬೆಲೆ ಮುನಿಸಿಕೊಂಡಿದ್ದಾರೆ, ಕೋಪಗೊಂಡಿಲ್ಲ. ಸಮಸ್ಯೆಗಳನ್ನು ಸರಿಪಡಿಸಿಕೊಂಡು ಹೋಗುತ್ತೇವೆ ಎಂದರು.

ಸದಾನಂದ ಗೌಡ ಅವರ ದೇಶದ್ರೋಹಿ ಪದ ಬಳಕೆ ಕುರಿತು ಮಾತನಾಡಿ, ತಪ್ಪಾಗಿದ್ದರೆ ಸರಿಮಾಡಿಕೊಳ್ಳುತ್ತೇವೆ. ಪಕ್ಷಕ್ಕಾಗಿ ದುಡಿದವರು ಅಭಿವೃದ್ಧಿ ವಿಚಾರಚಾಗಿ ಮಾತನಾಡಿದ್ದಾರೆ. ಅವರನ್ನು ಸಮಾಧಾನ ಮಾಡುತ್ತೇವೆ ಎಂದರು.

Post Comments (+)