ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದಿನಿಂದ ಸಿಇಟಿ ಕೌನ್ಸೆಲಿಂಗ್‌

ಎಸ್‌ಡಿಎಂ ಆಯುರ್ವೇದ ಕಾಲೇಜಿನಲ್ಲಿ ವ್ಯವಸ್ಥೆ; ನೀಟ್ ಫಲಿತಾಂಶ ಪ್ರಕಟ
Last Updated 5 ಜೂನ್ 2019, 15:49 IST
ಅಕ್ಷರ ಗಾತ್ರ

ಉಡುಪಿ:ಕುತ್ಪಾಡಿಯಲ್ಲಿರುವ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮೆಡಿಕಲ್‌ ಕಾಲೇಜಿನಲ್ಲಿ ಗುರುವಾರದಿಂದ ಸಿಇಟಿ ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾಗಲಿದೆ.

ಬೆಳಿಗ್ಗೆ 9.15ರಿಂದ ಸಿಇಟಿ ಆರಂಭವಾಗಲಿದ್ದು, ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಗುರುವಾರ 1ರಿಂದ 2000 ಒಳಗೆ ರ‍್ಯಾಂಕ್ ಪಡೆದಿರುವ ವಿದ್ಯಾರ್ಥಿಗಳು ಕೌನ್ಸೆಲಿಂಗ್‌ನಲ್ಲಿ ಭಾಗವಹಿಸಲಿದ್ದಾರೆ. ಜೂನ್ 19ರವರೆಗೂ ಕೌನ್ಸೆಲಿಂಗ್ ನಡೆಯಲಿದೆ ಎಂದು ಉಡುಪಿ ಜಿಲ್ಲೆಯಕೆಇಎ ಹೆಲ್ಪ್‌ಲೈನ್ ಸೆಂಟರ್‌ ನೋಡೆಲ್ ಅಧಿಕಾರಿ ಎಸ್‌.ಪಂಡರಿನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ಬೆಳಿಗ್ಗೆ ಕೇಂದ್ರಕ್ಕೆ ಬರುವ ವಿದ್ಯಾರ್ಥಿಗಳಿಗೆ 15 ನಿಮಿಷ ಕೌನ್ಸೆಲಿಂಗ್ ನಿಯಮಗಳನ್ನು ತಿಳಿ ಹೇಳಲಾಗುವುದು. ಬಳಿಕ ವಿದ್ಯಾರ್ಥಿಗಳ ದಾಖಲೆಗಳನ್ನು ಪರಿಶೀಲಿಸಲಾಗುವುದು. ಸಿಇಟಿಗೆ ಅರ್ಜಿ ಸಲ್ಲಿಸುವಾಗ ಸಲ್ಲಿಸಿದ್ದ ಎಲ್ಲ ದಾಖಲೆಗಳನ್ನು ಕೌನ್ಸೆಲಿಂಗ್‌ನಲ್ಲಿ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.

ಮೂಲ ದಾಖಲೆಗಳು ಹಾಗೂ ಗೆಜೆಟೆಡ್ ಅಧಿಕಾರಿಯಿಂದ ಪ್ರಮಾಣೀಕೃತಗೊಂಡ ಒಂದು ಸೆಟ್‌ ಝೆರಾಕ್ಸ್‌ ಪ್ರತಿಯನ್ನು ಸಲ್ಲಿಸಬೇಕು. ಮುಖ್ಯವಾಗಿ ಎಸ್ಸೆಸ್ಸೆಲ್ಸಿ ಮೂಲಪ್ರತಿ ತರಬೇಕು. ಪಿಯುಸಿ ಪ್ರಾವಿಷನಲ್‌ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರವನ್ನು ವಿದ್ಯಾರ್ಥಿಗಳು ತರಬೇಕು ಎಂದು ಪಂಡರಿನಾಥ ಮಾಹಿತಿ ನೀಡಿದರು.

ಕೌನ್ಸೆಲಿಂಗ್ ಪ್ರಕ್ರಿಯೆಯಲ್ಲಿ 14 ಸಿಬ್ಬಂದಿ ಕಾರ್ಯ ನಿರ್ವಹಿಸಲಿದ್ದಾರೆ. ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಗೊಂದಲಗಳಿದ್ದರೆ ಪರಿಹರಿಸಿಕೊಳ್ಳಲು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ ಎಂದು ಹೇಳಿದರು.

ನೀಟ್ ಫಲಿತಾಂಶ ಪ್ರಕಟ

ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ವಿದ್ಯಾರ್ಥಿಗಳು ಈಚೆಗೆ ಬರೆದಿದ್ದ ನೀಟ್‌ ಪರೀಕ್ಷೆಯ ಫಲಿತಾಂಶ ಬುಧವಾರ ಹೊರಬಿದ್ದಿದೆ.

ಬ್ರಹ್ಮಾವರದ ಲಿಟಲ್‌ ರಾಕ್‌ ಇಂಡಿಯನ್‌ ಶಾಲೆ, ಉಡುಪಿಯ ಸೇಂಟ್‌ ಮೇರಿಸ್‌ ಶಾಲೆ, ಜಿ.ಎಂ ವಿದ್ಯಾನಿಕೇತನ, ಮಾಧವ ಕೃಪ ಹಾಗೂ ಪಿಪಿಸಿ ಕಾಲೇಜುಗಳ ಪರೀಕ್ಷಾ ಕೇಂದ್ರಗಳಲ್ಲಿವಿದ್ಯಾರ್ಥಿಗಳು ‘ನೀಟ್‌’ ಪರೀಕ್ಷೆ ಬರೆದರು.

ಜಿಲ್ಲೆಯಲ್ಲಿ ಒಟ್ಟು 2,673 ಮಂದಿ ಪರೀಕ್ಷೆಗೆ ಹಾಜರಾಗಿದ್ದರು. 311 ಮಂದಿ ಗೈರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT